ADVERTISEMENT

ಬಿಜೆಪಿ ವಿರುದ್ಧ ರಮೇಶ ಬ್ಲಾಕ್‌ಮೇಲ್ ಆರಂಭ: ಸತೀಶ ಜಾರಕಿಹೊಳಿ ಟೀಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 13:44 IST
Last Updated 15 ಡಿಸೆಂಬರ್ 2019, 13:44 IST
ಸತೀಶ ಜಾರಕಿಹೊಳಿ ಹಾಗೂ ರಮೇಶ ಜಾರಕಿಹೊಳಿ
ಸತೀಶ ಜಾರಕಿಹೊಳಿ ಹಾಗೂ ರಮೇಶ ಜಾರಕಿಹೊಳಿ   

ಗೋಕಾಕ (ಬೆಳಗಾವಿ ಜಿಲ್ಲೆ): ‘ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಸುದೀರ್ಘ ಸಮಯ ಅವರೊಂದಿಗೆ ರಹಸ್ಯವಾಗಿ ಮಾತುಕತೆ ನಡೆಸುವ ಮೂಲಕ ಶಾಸಕ ರಮೇಶ ಜಾರಕಿಹೊಳಿ ಬಿಜೆಪಿ ವಿರುದ್ಧವೂ ಬ್ಲಾಕ್‌ಮೇಲ್‌ ತಂತ್ರ ಆರಂಭಿಸಿದ್ದಾರೆ’ ಎಂದು ಯಮಕನಮರಡಿ ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ ಟೀಕಿಸಿದರು.

ಇಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಿಳಿಯ ಬಟ್ಟೆಯನ್ನು ರಮೇಶ ಕಪ್ಪು ಮಾಡುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ತಮ್ಮ ಬ್ಲಾಕ್‌ಮೇಲ್ ಆಟವನ್ನು ಬಿಜೆಪಿ ಸೇರಿದ ನಂತರವೂ ಮುಂದುವರಿಸಿದ್ದಾರೆ. ವಿಧಾನಮಂಡಲ ಅಧಿವೇಶನದಲ್ಲಿ ತಮ್ಮ ವಿರುದ್ಧ ಆಕ್ರಮಣ ಮಾಡಬಾರದು ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಮೇಲೆ ಪ್ರೀತಿ ತೋರಿಸಿದ್ದಾರೆ. ಮತ್ತೆ ಕಾಂಗ್ರೆಸ್‌ ಕಡೆಗೆ ಹೋಗಲು ಸಿದ್ಧವಿದ್ದೇನೆ; ನೀವು ನಾನು ಹೇಳಿದಂತೆ ಕೇಳಬೇಕು ಎನ್ನುವ ಸಂದೇಶವನ್ನು ಬಿಜೆಪಿಯವರಿಗೂ ರವಾನಿಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಬಿಜೆಪಿಯಲ್ಲೂ ಬಹಳಷ್ಟು ಮಂದಿ ಅಸಮಾಧಾನಿತರಿದ್ದಾರೆ. ಸಂಪುಟ ಪುನರ್‌ರಚನೆಯಾದಾಗ ಅವರು ಸಿಡಿದೇಳಲಿದ್ದಾರೆ. ಎಲ್ಲರನ್ನೂ ಮಂತ್ರಿ ಮಾಡಲಾಗುವುದಿಲ್ಲ. ಆಗ ಅಸಮಾಧಾನಿತರು ಸೇರಿಕೊಂಡು ಸರ್ಕಾರ ಅಲುಗಾಡಿಸುತ್ತಾರೆ. ರಮೇಶ ಅಲ್ಲೂ ಸರ್ಕಾರದ ವಿರುದ್ಧ ಕೆಲಸ ಮಾಡುತ್ತಾರೆ. ದುಡ್ಡು ಮಾಡಬೇಕು ಎನ್ನುವುದೇ ಅವರ ಉದ್ದೇಶ’ ಎಂದು ಟೀಕಿಸಿದರು.

‘ಬುದ್ಧ, ಬಸವಣ್ಣನನ್ನು ದೇಶ ಬಿಟ್ಟು ಓಡಿಸಿದವರು ರಮೇಶಗೆ ಮತ ಹಾಕಿದ್ದಾರೆ. ಸೊಸೆ ಹೊಸದಾಗಿ ಬಂದಾಗ ಸಿಂಗಾರ ಮಾಡುತ್ತಾರೆ. ಅಂತೆಯೇ ಉಪ ಚುನಾವಣೆಯಲ್ಲಿ ರಮೇಶಗೆ ಸಿಂಗಾರ ಮಾಡಿದ್ದಾರೆ’ ಎಂದರು.

ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿಹಿ ಮಾತನಾಡಿ, ‘ರಮೇಶ ಪೌರಾಡಳಿತ ಮಂತ್ರಿಯಾಗಲಷ್ಟೇ ಲಾಯಕ್ಕು. ಅವರಿಗೇನಾದರೂ ಜಲಸಂಪನ್ಮೂ ಖಾತೆಯಂತಹ ದೊಡ್ಡ ಜವಾಬ್ದಾರಿ ಕೊಟ್ಟರೆ ಒಂದು ವರ್ಷದ ಅವಧಿಗೆ ನಿಗದಿಪಡಿಸಿದ ಬಜೆಟ್ ಕೇವಲ ಆರೇ ತಿಂಗಳಲ್ಲಿ ಖಾಲಿಯಾಗುತ್ತದೆ. ಸರ್ಕಾರ ಬೀಳುವುದರಲ್ಲಿ ಸಂದೇಹವಿಲ್ಲ’ ಎಂದು ಭವಿಷ್ಯ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.