ADVERTISEMENT

ಕೆಎಲ್‌ಇ ಆಸ್ಪತ್ರೆ: ನವಜಾತ ಶಿಶುವಿಗೆ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 8:37 IST
Last Updated 27 ನವೆಂಬರ್ 2021, 8:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ತೀವ್ರ ಹೃದ್ರೋಗದಿಂದ ಬಳಲುತ್ತಿದ್ದ, ಕೇವಲ 1,900 ಗ್ರಾಂ. ತೂಕವಿದ್ದ ನವಜಾತ ಶಿಶುವಿಗೆ ಶಸ್ತ್ರಚಿಕಿತ್ಸೆ ನೆರವೇರಿಸುವಲ್ಲಿ ಇಲ್ಲಿನ ನೆಹರೂ ನಗರದ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ.

‘ಅತ್ಯಾಧುನಿಕ ತಂತ್ರಜ್ಞಾನ (ಇಂಟರ್‌ವೆನ್ಸನಲ್‌ ಪ್ರಕ್ರಿಯೆ)ದ ಮೂಲಕ ಚಿಕಿತ್ಸಾ ಪ್ರಕ್ರಿಯೆ ನಡೆಸಿ, ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ’ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

‘ಕೆಎಲ್‌ಇ ಚಾರಿಟಬಲ್ ಆಸ್ಪತ್ರೆಯಲ್ಲಿ ಅವಧಿ ಪೂರ್ವ ಜನಿಸಿದ ಮಗುವಿನ ಉಸಿರಾಟಕ್ಕೆ ತೊಂದರೆ ಇತ್ತು. ಹೃದಯದ ಕಾರ್ಯದಲ್ಲಿ ಏರಿಳಿತ ಆಗುತ್ತಿತ್ತು. ಅದು ಶೇ. 25ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಚಿಕ್ಕಮಕ್ಕಳ ಹೃದ್ರೋಗ ತಜ್ಞ ಡಾ.ವೀರೇಶ ಮಾನ್ವಿ ಅವರು ಮಗುವನ್ನು ಸಮಗ್ರವಾಗಿ ಪರೀಕ್ಷಿಸಿದಾಗ ಹೃದಯದಲ್ಲಿ ರಂದ್ರವಿರುವುದು ಕಂಡುಬಂದಿತ್ತು. ಹೃದಯಕ್ಕೆ ರಕ್ತ ಸಂಚಾರದಲ್ಲಿ ತೀವ್ರ ತೊಂದರೆ ಉಂಟಾಗಿದ್ದು ಹಾಗೂ ಜೀವಕ್ಕೆ ಅಪಾಯವಿದ್ದುದು ಗೊತ್ತಾಗಿತ್ತು’.

ADVERTISEMENT

‘ವೈದ್ಯರು ತುರ್ತು ಹೃದಯ ಚಿಕಿತ್ಸಾ ಪ್ರಕ್ರಿಯೆ (ಬಲೂನ್ ಡೈಲೇಶನ್ ಆಫ್ ಕೊರ‍್ಟೇಶನ್ ಆಫ್ ಅರೋಟಾ) ನೆರವೇರಿಸಿದರು. 13 ದಿನದ ಶಿಶುವಿನ ತೊಡೆಯಲ್ಲಿರುವ ರಕ್ತನಾಳದ ಮೂಲಕ ಬಲೂನ್ ಸೇರಿಸಿ, ಮುದುಡಿದ ರಕ್ತನಾಳವನ್ನು ಸರಿಪಡಿಸಲಾಯಿತು. ಮಗು ಗುಣಮುಖಗೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ’ ಎಂದು ಮಾಹಿತಿ ನೀಡಲಾಗಿದೆ.

‘ಅಂತೆಯೇ ನಿಪ್ಪಾಣಿ ಮೂಲದ 3 ದಿನದ ಮತ್ತು, ಎರಡೂವರೆ ಕೆ.ಜಿ. ತೂಕವಿದ್ದ ಶಿಶುವಿಗೂ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಆ ಮಗು ಮೂತ್ರ ವಿಸರ್ಜಿಸದೆ ಹೃದಯ ತೊಂದರೆಯಿಂದ ಬಳಲುತ್ತಿತ್ತು. ತ್ವರಿತವಾಗಿ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

ಡಾ.ವೀರೇಶ ಅವರ ತಂಡ, ಅರವಳಿಕೆ ತಜ್ಞ ವೈದ್ಯ ಡಾ.ಆನಂದ ವಾಗರಾಳಿ, ರಾಜೇಶ, ಡಾ.ವಿನಾಯಕ ಜಾನು, ಡಾ.ಮನಿಷಾ ಭಾಂಡನಕರ, ಡಾ.ರವಿ ಕೆರೂರ ತಂಡದಲ್ಲಿದ್ದರು. ಅವರನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ಡಾ.ರಿಚರ್ಡ್‌ ಸಲ್ಡಾನಾ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.