ಬೆಳಗಾವಿ: ‘ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪೃಥ್ವಿಸಿಂಗ್ ಮೇಲಿನ ಹಲ್ಲೆ ಪ್ರಕರಣದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಬಂಧಿಸದಿದ್ದಲ್ಲಿ, ಉಗ್ರ ಹೋರಾಟ ಮಾಡಲಾಗುವುದು. ಇದನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ಇಲ್ಲಿನ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೃಥ್ವಿಸಿಂಗ್ ಆರೋಗ್ಯ ವಿಚಾರಿಸಿದ ಬಳಿಕ ಅವರು, ಮಂಗಳವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
‘ಕಾಂಗ್ರೆಸ್‌ನವರದು ಗೂಂಡಾ ಸಂಸ್ಕೃತಿ. ಅಧಿಕಾರಕ್ಕೆ ಬಂದಾಗಲೆಲ್ಲ ಅವರು ಹಿಂದೂ ಕಾರ್ಯಕರ್ತರ ಮೇಲೆ ಈ ರೀತಿ ಹಲ್ಲೆ ನಡೆಸುತ್ತಾರೆ. 2014ರಿಂದ 2018ರವರೆಗೆ 45ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಆರು ತಿಂಗಳಲ್ಲಿ ರಾಜ್ಯದಲ್ಲಿ ಕಲಬುರಗಿ, ಬೆಳಗಾವಿ, ಮಂಗಳೂರು, ಉಡುಪಿಯಲ್ಲಿ ಇಂತಹ ಪ್ರಕರಣ ನಡೆದಿವೆ. ಅವರು ಎಷ್ಟೇ ಗೂಂಡಾಗಿರಿ ಮಾಡಿದರೂ ನಮ್ಮ ಕಾರ್ಯಕರ್ತರನ್ನು ಹೇಗೆ ರಕ್ಷಣೆ ಮಾಡಬೇಕು ಎಂಬುದು ನಮಗೆ ಗೊತ್ತಿದೆ’ ಎಂದರು.
‘ಪೊಲೀಸರು ಕಾಟಾಚಾರಕ್ಕೆ ಪ್ರಕರಣ ದಾಖಲಿಸಿದ್ದಾರೆ. ಮೊಬೈಲ್ ಕಿತ್ತುಕೊಂಡಿದ್ದನ್ನು ‘ದರೋಡೆ’ ಎಂದು ಪ್ರಕರಣ ದಾಖಲಿಸಬೇಕಿತ್ತು. ಆದರೆ, ಮಂತ್ರಿ ಒತ್ತಡ ಹೇರಿ ಪ್ರಕರಣ ತಿರುಚಲು ಹೊರಟಿದ್ದಾರೆ. ಪೊಲೀಸರು ಅವರು ಹೇಳಿದಂತೆ ಕುಣಿಯುತ್ತಿದ್ದಾರೆ. ನಾನು ಪೊಲೀಸರಿಗೆ ಎಚ್ಚರಿಕೆ ನೀಡುತ್ತೇನೆ. ಇದು ಕಾಯಂ ಸರ್ಕಾರವಲ್ಲ. ಮುಂದೆ ನಾವು ಅಧಿಕಾರಕ್ಕೆ ಬಂದಾಗ ನೋಡಿಕೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
‘ವರದಿ ತರಿಸಿಕೊಳ್ಳುತ್ತೇನೆ ಎಂದು ಗೃಹಸಚಿವ ಹೇಳಿದ್ದಾರೆ. ಅವರೂ ಇಲ್ಲೇ ಇದ್ದಾರಲ್ಲ; ವರದಿ ಪಡೆಯಲು ಒಂದು ನಿಮಿಷ ಸಾಕು. ಇನ್ನೂ ಎಷ್ಟು ದಿನ ಬೇಕು? ಈ ಎಲ್ಲ ಸಂಗತಿಗಳು ಸದನದಲ್ಲಿ ಚರ್ಚೆಗೆ ಬರಲಿವೆ’ ಎಂದೂ ಹೇಳಿದರು.
‘ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಭೂ ಮಾಫಿಯಾ ಹೆಚ್ಚಾಗಿದೆ. ಅದರ ಬಗ್ಗೆ ಶಾಸಕರ ರಮೇಶ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ. ದಾಖಲೆಗಳ ಸಮೇತ ಅಧಿವೇಶನಕ್ಕೆ ಬನ್ನಿ ಎಂದು ಅವರಿಗೆ ಹೇಳಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.