
ಸುವರ್ಣ ವಿಧಾನಸೌಧ, ಬೆಳಗಾವಿ: ‘ಪಡಿತರ ಫಲಾನುಭವಿಗಳು ಕಡ್ಡಾಯವಾಗಿ ತಮ್ಮ ಕಾರ್ಡನ್ನು ಇ–ಕೆವೈಸಿ ಮಾಡಿಸಬೇಕು. ಅರ್ಹರು ಒಂದು ವೇಳೆ ಪರಿಷ್ಕರಣೆ ವೇಳೆ ಎಪಿಎಲ್‌ಗೆ ಬದಲಾಗಿದ್ದಲ್ಲಿ, ಸಂಬಂದಪಟ್ಟ ತಾಲ್ಲೂಕಿನ ತಹಶೀಲ್ದಾರರ ಕಚೇರಿಗೆ ಬೇಟಿ ಮಾಡಿ ಮನವಿ ಸಲ್ಲಿಸಬೇಕು. ಅದನ್ನು ಪರಿಶೀಲನೆ ಮಾಡಿ ಪುನಃ ಬಿಪಿಎಲ್‌ಗೆ ವರ್ಗಾಯಿಸಲಾಗುತ್ತದೆ’ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಎಚ್.ಮುನಿಯಪ್ಪ ಹೇಳಿದರು.
ಅಧಿಕಾರಿಗಳು ಮತ್ತು ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘದ ಅಧ್ಯಕ್ಷರೊಂದಿಗೆ ಇಲ್ಲಿನ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಮಂಗಳವಾರ ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
13 ಲಕ್ಷ ಕಾರ್ಡುಗಳು ಅನರ್ಹ: ‘ಕೇಂದ್ರ ಸರ್ಕಾರದ ಮಾನದಂಡಗಳ ಆಧಾರದ ಮೇಲೆ ಸುಮಾರು 13 ಲಕ್ಷ ಕಾರ್ಡುಗಳು ಅನರ್ಹವಾಗಿವೆ. ಇವುಗಳನ್ನು ಎಪಿಎಲ್‌ಗೆ ವರ್ಗಾವಣೆ ಮಾಡಿರುವ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದಲ್ಲಿ ಅರ್ಹ ಫಲಾನುಭವಿಯನ್ನು ಶೀಘ್ರದಲ್ಲಿ ಗುರುತಿಸಬೇಕು. ಅನರ್ಹರನ್ನು ಮಾತ್ರ ತಾವು ಎಪಿಎಲ್‌ಗೆ ವರ್ಗಾಯಿಸಬೇಕು’ ಎಂದೂ ಸೂಚಿಸಿದರು.
ಇತರೆ ರಾಜ್ಯಗಳ ಮಾನದಂಡಗಳನ್ನು ಸಹಾ ತಾವು ಸಂಗ್ರಹಿಸಿ ಅವನ್ನು ಪರಿಶೀಲನೆ ನಡೆಸಿ ಅನ್ವಯಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
‘3 ಲಕ್ಷದ 96 ಸಾವಿರ ಪಡಿತರ ಕಾರ್ಡುಗಳನ್ನು ಒಂದು ತಿಂಗಳೊಳಗೆ ಪರಿಷ್ಕರಣೆ ಮಾಡಿ, ನೂತನ ಕಾರ್ಡ್ ನೀಡಲು ಕ್ರಮ ವಹಿಸಬೇಕು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಈ ವರ್ಷ ಪ್ರತಿ ಕ್ವಿಂಟಲ್ ರಾಗಿಗೆ ₹4,886 ಬೆಲೆಯಂತೆ ಖರೀದಿಸಲಾಗುತ್ತಿದೆ. ಈಗಾಗಲೇ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಇದರಿಂದ ಒಟ್ಟು ₹3,000 ಕೋಟಿಗಳೊಂದಿಗೆ 2.57 ಲಕ್ಷ ರೈತರಿಗೆ ಈ ಯೋಜನೆಯು ಪ್ರಯೋಜನವಾಗಲಿದೆ’ ಎಂದರು.
‘ಕಾನೂನು ಮಾಪನ ಶಾಸ್ತ್ರ ಇಲಾಖೆಯ ವತಿಯಿಂದ ಬೆಳಗಾವಿ ಮತ್ತು ಕಲಬುರಗಿ ವಿಭಾಗದಲ್ಲಿ ಸುಮಾರು 71 ಸಕ್ಕರೆ ಕಾರ್ಖಾನೆಗಳ ತಪಾಸಣೆ ಮಾಡಿದ್ದು, ಕಬ್ಬು ಬೆಳೆಗಾರರ ಹಿಂದೆ ಇದ್ದ ಲೋಪದೋಷಗಳನ್ನು ಸರಿಪಡಿಸಲಾಗಿದೆ. ತೂಕದಲ್ಲಿ ಮೋಸ ತಡೆಯಲಾಗಿದೆ. ಇಲ್ಲಿಯವರೆಗೂ ಸುಮಾರು ₹50 ಸಾವಿರ ಕೋಟಿ ಅಭಿಸಂಧಾನ ಶುಲ್ಕ ವಸೂಲಿ ಮಾಡಲಾಗಿದೆ’ ಎಂದು ತಿಳಿಸಿದರು.
ಸರ್ಕಾರದ ಕಾರ್ಯದರ್ಶಿ ಎನ್.ವಿ.ಪ್ರಸಾದ್, ಆಯುಕ್ತ ಎಂ. ಕನಗವಲ್ಲಿ, ಕಾನೂನು ಮಾಪನ ಇಲಾಖೆಯ ನಿಯಂತ್ರಕ ಎಂ.ಎಸ್.ಎನ್ ಬಾಬು, ನಿಗಮ ನಿರ್ದೇಶಕ ಜಗದೀಶ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಎಚ್.ನಟರಾಜ್, ಜಂಟಿ ನಿರ್ದೇಶಕ ಐ.ಟಿ. ರಾಜಶೇಖರ್, ಕುಮುದಾ ಹಾಗೂ ಪಡಿತರ ವಿತರಕ ಸಂಘದ ಅಧ್ಯಕ್ಷ ಕೃಷ್ಣಪ್ಪ ಮತ್ತು ಕೃಷ್ಣ ನಾಯಕ್ ಹಾಗೂ ಸಂಘದ ಪಧಾದಿಕಾರಿಗಳು ಅಧಿಕಾರಿಗಳು ಉಪಸ್ಥಿತರಿದ್ದರು.
‘3517 ನೂತನ ನ್ಯಾಯಬೆಲೆ ಅಂಗಡಿ’
‘ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ನ್ಯಾಯಬೆಲೆ ಅಂಗಡಿಗಳನ್ನು ಆದ್ಯತೆ ಮೇಲೆ ಮಂಜೂರು ಮಾಡಲು ಒಂದು ತಿಂಗಳೊಳಗೆ ಕ್ರಮ ವಹಿಸಲಾಗುವುದು. ಇದರಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಮೇರೆಗೆ ಸುಮಾರು 3517 ನೂತನ ನ್ಯಾಯ ಬೆಲೆ ಅಂಗಡಿಗಳನ್ನು ಒಳ ಮೀಸಲಾತಿ ಆದಾರದ ಮೇಲೆ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ನೀಡಲಾಗುತ್ತಿದೆ’ ಎಂದು ಸಚಿವ ಮುನಿಯಪ್ಪ ತಿಳಿಸಿದರು.
‘ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಯಾವುದೇ ಸಮಸ್ಯೆಗಳಿದ್ದರೆ ಪರಿಹರಿಸಲಾಗುವುದು. ನ್ಯಾಯಬೆಲೆ ಅಂಗಡಿಗಳಲ್ಲಿ ಯಂತ್ರಗಳ ಅಳವಡಿಕೆ ಕಡ್ಡಾಯ. ಚಿಲ್ಲರೆ ಲಾಭಾಂಶವನ್ನು ಸರಿಯಾದ ಸಮಯಕ್ಕೆ ಸಮರ್ಪಕವಾಗಿ ನೀಡಲಾಗುತ್ತದೆ. ತಾವು ಗ್ರಾಹಕರಿಗೆ ಸರಿಯಾದ ಸಮಯದಲ್ಲಿ ಪಡಿತರ ವಿತರಿಸಬೇಕು’ ಎಂದೂ ತಾಕೀತು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.