ADVERTISEMENT

ರಾಜ್ಯ ಬಜೆಟ್: ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 15:13 IST
Last Updated 8 ಮಾರ್ಚ್ 2021, 15:13 IST
ಅಭಯ ಪಾಟೀಲ
ಅಭಯ ಪಾಟೀಲ   

ಸರ್ವರಿಗೂ ಅನುಕೂಲ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿರುವ ಬಜೆಟ್ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸರ್ವರಿಗೂ ಅನುಕೂಲ ಆಗುವಂಥದ್ದಾಗಿದೆ. ವಿಶೇಷವಾಗಿ ನಿರುದ್ಯೋಗಿಗಳು, ರೈತರು, ನೇಕಾರರು ಹಾಗೂ ಕೂಲಿ ಕಾರ್ಮಿಕರಿಗೆ ಸಹಕಾರಿಯಾಗಿದೆ.ಬೆಳಗಾವಿ ಜಿಲ್ಲೆಯಲ್ಲಿ ಅನೇಕ ಪ್ರಗತಿಗೆ ಪೂರಕವಾಗುವ ಯೋಜನೆಗಳನ್ನು ಸೇರಿಸುವ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸುವ ಕೆಲಸವನ್ನು ಮಾಡಲಾಗಿದೆ.

ಅಭಯ ಪಾಟೀಲ, ಶಾಸಕ, ದಕ್ಷಿಣ ಮತಕ್ಷೇತ್ರ

ADVERTISEMENT

ನಿರಾಶೆ ತಂದಿದೆ

ರಾಜ್ಯದ ಬಜೆಟ್‌ನಲ್ಲಿ ಬೆಳಗಾವಿ ಜಿಲ್ಲೆಯನ್ನು ಮರೆಯಲಾಗಿದೆ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಿಲ್ಲ. ಉದ್ಯೋಗ ವಂಚಿತರಿಗೆ ನೆರವು ಕಲ್ಪಿಸಿಲ್ಲ. ಮುಖ್ಯಮಂತ್ರಿ ಚಿಕ್ಕೋಡಿಯನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಕರಗಾಂವ ಏತ ನೀರಾವರಿ ಯೋಜನೆಗೆ ಕ್ರಮ ವಹಿಸಿಲ್ಲ. 2019ಮತ್ತು 2020ರಲ್ಲಿ ಅತಿವೃಷ್ಟಿ, ನರೆಯಿಂದ ಆಶ್ರಯ ಕಳೆದ ಕೊಂಡವರಿಗೆ ನೆರವಾಗಿಲ್ಲ. ಒಟ್ಟಾರೆ ಈ ಬಜೆಟ್ ನಿರಾಶೆ ಮೂಡಿಸಿದೆ.

ಕಾಡಗೌಡ ಆರ್. ಪಾಟೀಲ, ಚಿಕ್ಕೋಡಿ

ಉತ್ತಮ ಬಜೆಟ್

ಕೋವಿಡ್–19 ಸಂಕಷ್ಟದ ಸಮಯದಲ್ಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉತ್ತಮ ಬಜೆಟ್ ಮಂಡಿಸಿದ್ದಾರೆ. ಇದು ಅಭಿವೃದ್ಧಿಪರವಾಗಿದೆ. ವೈಯುಕ್ತಿವಾಗಿ ಸಮಾಧಾನ ತಂದಿದೆ.

ಮಂಜುನಾಥ ಜ್ಯೋತಿ, ಬೈಲಹೊಂಗಲ

ಚಿಗುರು ಯೋಜನೆ ಸ್ವಾಗತಾರ್ಹ

ಮಹಿಳಾ ದಿನದಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಹಿಳೆಯರಿಗೆ ಆದ್ಯತೆಯುಳ್ಳ ಬಜೆಟ್ ಮಂಡಿಸಿದ್ದು ಸ್ವಾಗತಾರ್ಹ. ಗರ್ಭಿಣಿಯರ ನೆರವಿಗೆ ಹೊಸದಾಗಿ ‘ಚಿಗುರು’ ಯೋಜನೆ ಜಾರಿ ಮಾಡಿರುವುದು ಸಮರ್ಪಕವಾಗಿದೆ. ಸ್ಕ್ಯಾನಿಂಗ್‌ಗೆ ಉತ್ತೇಜನ ನೀಡಿರುವುದರಿಂದ ಎಷ್ಟೋ ಬಡ ಮಹಿಳೆಯರಿಗೆ ಅನುಕೂಲವಾಗಲಿದೆ. ಆದರೆ, ಕೇವಲ ₹ 10 ಕೋಟಿ ಇಡಲಾಗಿದೆ. ಇದನ್ನು ₹ 50 ಕೋಟಿಗೆ ಹೆಚ್ಚಿಸಬೇಕು. ಸ್ಕ್ಯಾನಿಂಗ್ ದುರುಪಯೋಗ ಆಗದಂತೆ ಇಲಾಖೆಯು ಹದ್ದಿನ ಕಣ್ಣಿಡಬೇಕು.

ವಿಮಲಾ ಕದಂ, ಚಿಕ್ಕೋಡಿ

ಮಹಿಳಾ ದಿನದಂದು, ಬಜೆಟ್‌ನಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಆದ್ಯತೆ ನೀಡಿರುವುದು ಹರ್ಷದಾಯಕವಾಗಿದೆ. ಎಲ್ಲ ರಂಗದ ಮಹಿಳೆಯರಿಗೆ ಅನುಕೂಲಕರ ಬಜೆಟ್ ಇದಾಗಿದೆ‌. ಶೇ.4ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, 60 ವಿರ ಮಹಿಳೆಯರಿಗೆ ಉದ್ಯೋಗ ಮೊದಲಾದವುಗಳನ್ನು ಘೋಷಿಸಿರುವುದು ಖುಷಿ ತಂದಿದೆ.

ವಿದ್ಯಾ ಕವಲಾಪೂರ, ಬೈಲಹೊಂಗಲ

ಪ್ರಾಧಿಕಾರಕ್ಕೆ ₹ 50 ಕೋಟಿ

ಐತಿಹಾಸಿಕ ಕಿತ್ತೂರು ರಾಣಿ ಚನ್ನಮ್ಮನ ಕೋಟೆ ಆವರಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ₹ 50 ಕೋಟಿ ನೀಡಿದ್ದಾರೆ. ₹ 200 ಕೋಟಿ ಅನುದಾನ ಕೇಳಲಾಗಿತ್ತು. ಹಂತ–ಹಂತವಾಗಿ ಬಿಡುಗಡೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.

ಮಹಾಂತೇಶ ದೊಡ್ಡಗೌಡರ, ಶಾಸಕ, ಕಿತ್ತೂರು ಮತಕ್ಷೇತ್ರ

ದಶಕದ ಬೇಡಿಕೆಯಾಗಿದ್ದ ಧಾರವಾಡ-ಕಿತ್ತೂರು-ಬೆಳಗಾವಿ ರೈಲ್ವೆ ಮಾರ್ಗ ನಿರ್ಮಾಣಕ್ಕೂ ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಅನುದಾನ ಮೀಸಲಿಟ್ಟಿದ್ದಾರೆ. 73 ಕಿ.ಮೀ. ಉದ್ದದ ಈ ಮಾರ್ಗ ನಿರ್ಮಾಣಕ್ಕೆ ₹ 463 ಕೋಟಿ ಅನುದಾನ ನೀಡಿದ್ದು, ಈ ಭಾಗದ ಜನರ ಸಂತಸಕ್ಕೆ ಕಾರಣವಾಗಿದೆ. ರೈಲ್ವೆ ಮಾರ್ಗದ ಕನಸು ನನಸಾಗುವ ಕಾಲ ಕೂಡಿ ಬಂದಿದೆ.

ಸರಸ್ವತಿ ಹೈಬತ್ತಿ, ಅಧ್ಯಕ್ಷೆ, ಕುಲವಳ್ಳಿ ಪಿಕೆಪಿಎಸ್

ಸ್ವಾಗತವೂ ಇದೆ, ನಿರಾಸೆಯೂ ಆಗಿದೆ

ರಾಜ್ಯ ಬಜೆಟ್‌ನಲ್ಲಿ ಕೆಲವು ಕ್ರಮಗಳು ಸ್ವಾಗತಾರ್ಹವಾಗಿದೆ. ಆದರೆ, ಒಂದಷ್ಟು ನಿರಾಸೆಯೂ ಉಂಟಾಗಿದೆ. ಆರ್ಥಿಕತೆ ಅಭಿವೃದ್ಧಿಗೆ ಹಣ ಮೀಸಲಿಟ್ಟಿರುವುದು ಸರಿಯಾಗಿದೆ. ತೈಲ ದರ ಇಳಿಕೆ ಮಾಡದಿರುವುದರಿಂದ ಕೈಗಾರಿಕೆಗಳನ್ನು ನಡೆಸುವುದು ದುಸ್ತರವಾಗಲಿದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಮಹತ್ವದ ಯೋಜನೆಗಳಿಲ್ಲ. ಆವಿಷ್ಕಾರ ಕೈಗಾರಿಕಾ ಕ್ಲಸ್ಟರ್‌ಗಳ ಸ್ಥಾಪನೆಯನ್ನು ನಿರೀಕ್ಷಿಸಿದ್ದೆವು. ಅದನ್ನು ಪ್ರಸ್ತಾಪಿಸಿಲ್ಲ. ಸಾಮಾಜಿಕ ಸುಧಾರಣೆ ಹಾಗೂ ಕೃಷಿ ಪರ ಬಜೆಟ್‌ ಇದಾಗಿದೆ. ಅದು ಅನುಷ್ಠಾನಕ್ಕೆ ಬರಲು ಬಹಳ ಸಮಯ ಕಾಯಬೇಕಾಗುತ್ತದೆ.

ಸತೀಶ್ ತೆಂಡುಲ್ಕರ್, ಉದ್ಯಮಿ, ಬೆಳಗಾವಿ

ಸಮಗ್ರ ಅಭಿವೃದ್ಧಿ ದೃಷ್ಟಿಕೋನ

ರಾಜ್ಯ ಬಜೆಟ್ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕೂಡಿದೆ. ಜಿಲ್ಲೆಗೂ ಅನೇಕ ಪ್ರಾತಿನಿಧ್ಯ ನೀಡಿರುವುದು ಗಮನಾರ್ಹ. ಪ್ರತಿ ಸಮುದಾಯವನ್ನೂ ಗಮನದಲ್ಲಿಟ್ಟುಕೊಂಡು ಸರ್ವರ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಬಜೆಟ್ ಇದಾಗಿದೆ. ಬೆಳಗಾವಿಗೆ ಹೆಚ್ಚಿನ‌ ಅನುದಾನ ನೀಡಿದ್ದು ಸ್ವಾಗತಾರ್ಹವಾಗಿದೆ.

ಘೂಳಪ್ಪ ಹೊಸಮನಿ, ಅಧ್ಯಕ್ಷ, ಬುಡಾ

ರೈತರಿಗೆ ಜೀವ ತುಂಬಬೇಕಿತ್ತು

ಮಹಿಳೆಯರ ಸ್ವಾವಲಂಬನೆಗೆ, ಉದ್ಯೋಗ ಸೃಷ್ಟಿಸುವ ಉದ್ಯೋಗದಾತರಿಗೆ ₹ 1 ಕೋಟಿವರೆಗೆ ಸಾಲ ಪಡೆಯುವ ಅವಕಾಶ ಮತ್ತು ತೆರಿಗೆ ಭಾರ ಹೆಚ್ಚಿಸದಿರುವುದು ಒಳ್ಳೆಯ ಪ್ರಯತ್ನ. ಹೊರತುಪಡಿಸಿದರೆ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದೆ. ರೈತರ ಹಣಕಾಸಿನ ಚಟುವಟಿಕೆಗಳಿಗೆ ಜೀವ ತುಂಬುವ ಯೋಜನೆಗಳನ್ನು ಕೈಗೊಳ್ಳಬೇಕಿತ್ತು. ಸಣ್ಣ ವ್ಯಾಪಾರಿಗಳ ಪುನಃಶ್ಚೇತನಕ್ಕೆ ಒತ್ತು ನೀಡಬೇಕಿತ್ತು.

ತುಕಾರಾಮ ಕೋಳಿ, ರೈತ, ಕಲ್ಲೋಳ, ಚಿಕ್ಕೋಡಿ ತಾಲ್ಲೂಕು

ಎಲ್ಲರಿಗೂ ಅನುಕೂಲ

ರಾಜ್ಯ ಬಜೆಟ್‌ನಲ್ಲಿ ಎಲ್ಲ ವರ್ಗಕ್ಕೂ ಅನುಕೂಲವಾದ ಕಾರ್ಯಕ್ರಮಗಳಿವೆ. ಶಿಕ್ಷಣ ಕ್ಷೇತ್ರಕ್ಕೂ ಉತ್ತಮ ಕೊಡುಗೆ ನೀಡಲಾಗಿದೆ. ಬಡವರಿಗೆ ಬಾರವಾಗದಂತೆ ನೋಡಿಕೊಳ್ಳಲಾಗಿದೆ. ಇದು ಸ್ವಾಗತಾರ್ಹವಾದುದು.

ಶಿವಾನಂದ ಮಾವಿನಕೊಪ್ಪ, ವೀರಾಪೂರ

ಮಹಿಳೆಯರಿಗೆ ಆದ್ಯತೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅದರಲ್ಲೂ ಮಹಿಳಾ ದಿನದಂತೆ ಬಜೆಟ್ ಮಂಡಿಸಿ, ಆದ್ಯತೆ ನೀಡಿದ್ದು ಖುಷಿ ತಂದಿದೆ.

ಸಂಗೀತಾ ಬೋಗಾರ, ಎಂ.ಕೆ. ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.