ADVERTISEMENT

ರೈತರಿಗೆ ಭೂ ಪರಿಹಾರಧನ ನೀಡುವಲ್ಲಿ ವಿಳಂಬ, ನೀರಾವರಿ ನಿಗಮದ ಕಚೇರಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 8:26 IST
Last Updated 5 ಸೆಪ್ಟೆಂಬರ್ 2020, 8:26 IST
ಹುಕ್ಕೇರಿ ತಾಲ್ಲೂಕಿನ ಹಿಡ್ಕಲ್ ಡ್ಯಾಂನ ವಿಶೇಷ ಭೂಸ್ವಾದೀನ ಕಚೇರಿ ಸಾಮಗ್ರಿಗಳನ್ನು ಶುಕ್ರವಾರ ಜಪ್ತು ಮಾಡಲಾಯಿತು
ಹುಕ್ಕೇರಿ ತಾಲ್ಲೂಕಿನ ಹಿಡ್ಕಲ್ ಡ್ಯಾಂನ ವಿಶೇಷ ಭೂಸ್ವಾದೀನ ಕಚೇರಿ ಸಾಮಗ್ರಿಗಳನ್ನು ಶುಕ್ರವಾರ ಜಪ್ತು ಮಾಡಲಾಯಿತು   

ಹುಕ್ಕೇರಿ: ರೈತರಿಗೆ ಭೂ ಪರಿಹಾರಧನ ನೀಡುವಲ್ಲಿ ವಿಳಂಬ ಮಾಡಿದ್ದರಿಂದ ತಾಲ್ಲೂಕಿನ ಹಿಡಕಲ್ ಡ್ಯಾಂನ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಮತ್ತು ಕರ್ನಾಟಕ ನೀರಾವರಿ ನಿಗಮದ ಎಕ್ಸಿಕ್ಯೂಟಿವ್ ಎಂಜಿನಿಯರಿಂಗ್‌ ಉಪವಿಭಾಗ ಶಾಖೆ 2ರ ಕಚೇರಿ ಸಾಮಗ್ರಿಗಳನ್ನು ಶುಕ್ರವಾರ ಜಪ್ತು ಮಾಡಲಾಯಿತು.

ಸವದತ್ತಿ ತಾಲ್ಲೂಕಿನ ಯರಗಟ್ಟಿ ಗ್ರಾಮದ ಜಮೀನುಗಳಲ್ಲಿ ಬಳ್ಳಾರಿ ನಾಲಾ ಕಾಲುವೆ ನಿರ್ಮಾಣವಾಗಿದ್ದು, ಸಂಬಂಧಪಟ್ಟ ರೈತರು ಬೆಳಗಾವಿ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯ ಹೆಚ್ಚಿನ ಪರಿಹಾರಧನ ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಮಂಜೂರಾಗಿ ಎರಡು ವರ್ಷ ಕಳೆದರೂ ಇಲ್ಲಿಯವರೆಗೆ ಹಿಡಕಲ್ ಡ್ಯಾಂ ವಿಶೇಷ ಭೂಸ್ವಾಧೀನಾಧಿ ಕಚೇರಿಯವರು ಮತ್ತು ಕರ್ನಾಟಕ ನೀರಾವರಿ ನಿಗಮದ ಎಕ್ಷಿಕ್ಯೂಟಿವ್ ಎಂಜಿನಿಯರ್ ಉಪವಿಭಾಗ ಶಾಖೆ 2 ಕಚೇರಿಯಿಂದ ಪರಿಹಾರಧನ ರೈತರಿಗೆ ನೀಡಿರಲಿಲ್ಲ.

ಪ್ರಕರಣದ ಹಿನ್ನಲೆ: ಗುಂಟೆಗೆ ₹20 ಲಕ್ಷ ಮೌಲ್ಯ ಹೊಂದಿದ ಜಮೀನನ್ನು ಸ್ವಾಧೀನ ಪಡಿಸಿಕೊಂಡು 2005ರಲ್ಲಿ ನೀರಾವರಿ ಕಾಲುವೆ ಮಾಡಿದ್ದರು. ರೈತರಾದ ಗೀತಾ ದೇಸಾಯಿ ಮತ್ತು ಇತರೆ 8 ಜನರು ಸೇರಿ ಭೂಪರಿಹಾರಕ್ಕೆ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಸುಮಾರು ₹12 ಕೋಟಿ ಪರಿಹಾರ ನೀಡಬೇಕಾಗಿತ್ತು.

ADVERTISEMENT

ಇಲ್ಲಿಯವರೆಗೆ ಪರಿಹಾರಧನ ತುಂಬದ ಕಾರಣ ಸಂಬಂಧಪಟ್ಟ ನ್ಯಾಯಾಲಯದಿಂದ ಕಚೇರಿ ಜಪ್ತಿ ವಾರೆಂಟ್‌ ಪಡೆದುಕೊಂಡಿದ್ದು, ಆ ಪ್ರಕಾರ ಶುಕ್ರವಾರ ನ್ಯಾಯಾಲಯದ ಆದೇಶದ ಮೇರೆಗೆ ವಿಶೇಷ ಭೂಸ್ವಾಧಿನ ಕಚೇರಿ ಮತ್ತು ಎಕ್ಸಿಕ್ಯೂಟಿವ್ ಎಂಜಿನಿಯರ್ ಉಪವಿಭಾಗ ಶಾಖಾ ಕಚೇರಿಗೆ ಹೋಗಿ ಜಪ್ತು ಮಾಡಿ ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ಜಮಾ ಮಾಡಲಾಯಿತು. ಈ ಸಂದರ್ಭದಲ್ಲಿ ಹುಕ್ಕೇರಿ ಕೋರ್ಟ್ ಬೇಲಿಫ್ ಬಿ.ಎಸ್. ಪಾಶ್ಚಾಪೂರ, ಬಿ.ಎಸ್. ಸದಲಗಿ ಮತ್ತು ವಕೀಲ ಎಂ.ಐ.ನಿಜಗುಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.