ಬೆಳಗಾವಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ಅಡಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಶೇ 75ರಷ್ಟು ಸೀಟು ಸ್ಥಳೀಯರಿಗೆ ಮತ್ತು ಶೇ 25ರಷ್ಟು ಸೀಟು ಜಿಲ್ಲೆಯ ಬೇರೆ ತಾಲ್ಲೂಕುಗಳ ವಿದ್ಯಾರ್ಥಿಗಳಿಗೆ ಮೀಸಲಿರಿಸಿ, ರಾಜ್ಯ ಸರ್ಕಾರ ಕಳೆದ ವರ್ಷ ಆದೇಶ ಹೊರಡಿಸಿದೆ.
ಆದರೆ, ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಮನಾಗಿ ವಸತಿ ಶಾಲೆಗಳಿಲ್ಲ. ಹಾಗಾಗಿ ಹೆಚ್ಚಿನ ವಸತಿ ಶಾಲೆ ಹೊಂದಿದ ತಾಲ್ಲೂಕುಗಳ ವಿದ್ಯಾರ್ಥಿಗಳಿಗೆ ಈ ಆದೇಶದಿಂದ ಅನುಕೂಲವಾಗಿದ್ದರೆ, ಕಡಿಮೆ ಶಾಲೆಗಳಿರುವ ತಾಲ್ಲೂಕುಗಳ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ಜಿಲ್ಲೆಯಲ್ಲಿ 15 ತಾಲ್ಲೂಕು ಕೇಂದ್ರಗಳಿದ್ದು, ಕ್ರೈಸ್ ಅಡಿ 54 ವಸತಿ ಶಾಲೆಗಳಿವೆ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ ಅವು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಶಾಲೆಯಲ್ಲಿ 6ನೇ ತರಗತಿ ಪ್ರವೇಶಕ್ಕೆ 50 ಸೀಟು ಮೀಸಲಿಡಲಾಗಿದೆ. ನಿಪ್ಪಾಣಿ ತಾಲ್ಲೂಕಿನ ಖಡಕಲಾಟ, ಮೂಡಲಗಿ ತಾಲ್ಲೂಕಿನ ತಪಸಿ ಶಾಲೆಯಲ್ಲಷ್ಟೇ ತಲಾ 80 ಸೀಟು ಲಭ್ಯವಿವೆ.
ಗೋಕಾಕ ತಾಲ್ಲೂಕಿನಲ್ಲಿ 7, ಚಿಕ್ಕೋಡಿ, ಹುಕ್ಕೇರಿಯಲ್ಲಿ ತಲಾ 6, ಅಥಣಿ, ರಾಯಬಾಗದಲ್ಲಿ ತಲಾ 5, ಬೈಲಹೊಂಗಲ, ಬೆಳಗಾವಿ, ಮೂಡಲಗಿ, ರಾಮದುರ್ಗದಲ್ಲಿ ತಲಾ 4 ವಸತಿ ಶಾಲೆಗಳಿವೆ. ಅಲ್ಲಿ ಸ್ಥಳೀಯರಿಗೆ ಶೇ 75ರಷ್ಟು ಸೀಟು ಸಿಗುತ್ತಿವೆ.
ಆದರೆ, ಖಾನಾಪುರದಲ್ಲಿ 3, ನಿಪ್ಪಾಣಿ, ಸವದತ್ತಿಯಲ್ಲಿ ತಲಾ 2, ಚನ್ನಮ್ಮನ ಕಿತ್ತೂರು, ಯರಗಟ್ಟಿಯಲ್ಲಿ ತಲಾ ಒಂದೇ ಶಾಲೆ ಇವೆ.
ಈ ತಾಲ್ಲೂಕುಗಳ ವಿದ್ಯಾರ್ಥಿಗಳು ಶೇ 75ರ ಕೋಟಾದಡಿ ತಮಗೆ ಲಭ್ಯವಿರುವ ಅಲ್ಪ ಸೀಟು ಪಡೆಯುವ ಜತೆಗೆ, ಬೇರೆ ತಾಲ್ಲೂಕುಗಳ ಶಾಲೆಗಳಲ್ಲಿನ ಶೇ 25ರಷ್ಟು ಸೀಟು ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಹೆಚ್ಚಿನವರು ಸೀಟು ಸಿಗದೆ ಪ್ರವೇಶದಿಂದ ವಂಚಿತರಾಗುತ್ತಿದ್ದಾರೆ.
ಚನ್ನಮ್ಮನ ಕಿತ್ತೂರು, ಯರಗಟ್ಟಿ ತಾಲ್ಲೂಕಿನ ಶಾಲೆಗಳು ಬಾಲಕಿಯರಿಗಷ್ಟೇ ಮೀಸಲಾದ ಕಾರಣ, ಅವೆರಡೂ ತಾಲ್ಲೂಕುಗಳ ಬಾಲಕರಿಗೆ ಹೆಚ್ಚಿನ ಸಮಸ್ಯೆಯಾಗಿದೆ.
ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು, 6ನೇ ತರಗತಿ ಪ್ರವೇಶಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಎರಡನೇ ಪಟ್ಟಿ ಪ್ರಕಟವಾಗಿದೆ.
ಜಿಲ್ಲೆಯಲ್ಲಿ ಬೇಡಿಕೆ ಇರುವ ಕಡೆ ವಸತಿ ಶಾಲೆ ತೆರೆಯುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದುರಾಮನಗೌಡ ಕನ್ನೋಳ್ಳಿ ಜಂಟಿನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ
ಮೊದಲಿನ ನಿಯಮವೇ ಜಾರಿಗೆ ಬರಲಿ: ‘ಈ ಹಿಂದೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಯಾವುದೇ ತಾಲ್ಲೂಕಿನ ವಸತಿ ಶಾಲೆಗಳಲ್ಲಿನ ಶೇ 100ರಷ್ಟು ಸೀಟು ಮೀಸಲಿದ್ದವು. ಆದರೆ ಸರ್ಕಾರ ನಿಯಮ ಬದಲಿಸಿ ಶೇ 75ರಷ್ಟು ಸೀಟು ಸ್ಥಳೀಯರಿಗೆ ಮೀಸಲಿಟ್ಟಿತು. ಆದರೆ ಸವದತ್ತಿ ತಾಲ್ಲೂಕಿನಲ್ಲಿ ಎರಡೇ ಶಾಲೆ ಇವೆ. ಅದರಲ್ಲಿ ಒಂದು ಬಾಲಕಿಯರಿಗಷ್ಟೇ ಸೀಮಿತವಿದೆ. ಬೇರೆ ತಾಲ್ಲೂಕಿಗೆ ಹೋಲಿಸಿದರೆ ನಮಗೆ ಅನ್ಯಾಯವಾಗುತ್ತಿದೆ. ಈ ನಿಯಮ ಬದಲಿಸಿ ಮೊದಲಿನ ನಿಯಮವೇ ಜಾರಿಗೆ ಬರಲಿ. ಅಗತ್ಯವಿರುವ ಕಡೆ ಸರ್ಕಾರ ವಸತಿ ಶಾಲೆ ತೆರೆಯಲಿ’ ಎಂದು ಸವದತ್ತಿ ತಾಲ್ಲೂಕಿನ ವಿದ್ಯಾರ್ಥಿಗಳ ಪಾಲಕರು ಒತ್ತಾಯಿಸಿದ್ದಾರೆ. ‘ಯರಗಟ್ಟಿ ತಾಲ್ಲೂಕಿನಲ್ಲಿ ಬಾಲಕರಿಗೆ ವಸತಿ ಶಾಲೆ ಇಲ್ಲ. ಹಾಗಾಗಿ ಬೇರೆ ತಾಲ್ಲೂಕಿನ ವಸತಿ ಶಾಲೆಗಳಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಪ್ರವೇಶ ಪರೀಕ್ಷೆಯಲ್ಲಿ ಮಗ ಶೇ 80 ಅಂಕ ಗಳಿಸಿದ್ದರೂ ಶೇ 25ರ ಕೋಟಾದಡಿ ಆಯ್ಕೆಯಾಗಿಲ್ಲ. ಮೊದಲಿನ ನಿಯಮವಿದ್ದರೆ ಸುಲಭವಾಗಿ ಅವಕಾಶ ಸಿಗುತ್ತಿತ್ತು’ ಎಂದು ಯರಗಟ್ಟಿ ತಾಲ್ಲೂಕಿನ ಮೆಳ್ಳಿಕೇರಿಯ ಪಾಂಡುರಂಗ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.