
ಬೆಳಗಾವಿ: ‘ಮನುಷ್ಯ ಬದುಕಿದ್ದಾಗಲೇ ಎಲ್ಲರನ್ನೂ ಪ್ರೀತಿಸಬೇಕು. ಬೇರೆ ಜಾತಿಯವರನ್ನೂ ಪ್ರೀತಿಸಿ ಗೌರವಿಸಬೇಕು. ಆವಾಗ ಮಾತ್ರ ಬಸವ ತತ್ವ, ಬಸವ ಪರಂಪರೆಗೆ ಅರ್ಥ ಸಿಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ತಾಲ್ಲೂಕಿನ ಅರಳಿಕಟ್ಟಿ ಗ್ರಾಮದ ತಪೋಕ್ಷೇತ್ರ ತೋಂಟದಾರ್ಯ ವಿರಕ್ತಮಠದ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ‘ಉಳವಿ ಚನ್ನಬಸವೇಶ್ವರರ ಜೀವನ ದರ್ಶನ’ ಪ್ರವಚನ ಹಾಗೂ ‘ಅರಳಿಕಟ್ಟಿ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಇಂದಿನ ಮಕ್ಕಳಿಗೆ ನಾವು ಪುರಾಣದ ಬಗ್ಗೆ ಅರ್ಥೈಸಿದರೆ ಮಾತ್ರ ಅವರು ಮುಂದಿನ ಪೀಳಿಗೆಗೆ ಕೊಂಡೊಯ್ಯುವರು. ಭಾರತದ ಆಚಾರ, ಪರಂಪರೆ ಹಾಗೂ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿ. ವೈವಿಧ್ಯದಿಂದ ಕೂಡಿರುವ ಸಂಸ್ಕೃತಿ ನಮ್ಮದು. ನಮ್ಮ ಧರ್ಮ– ಪರಂಪರೆಯನ್ನು ಇಡೀ ವಿಶ್ವವೇ ಕೊಂಡಾಡುತ್ತದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಸ್ವಾಮೀಜಿಗಳು. ನಮ್ಮ ಸಮಾಜದ ಏಳಿಗೆಗಾಗಿ ಹೆತ್ತ ಮಕ್ಕಳನ್ನೇ ತ್ಯಾಗ ಮಾಡಿರುವ ಸ್ವಾಮೀಜಿಯವರ ತಾಯಂದಿರ ತ್ಯಾಗಕ್ಕಿಂತ ದೊಡ್ಡದು ಇನ್ನೊಂದಿಲ್ಲ’ ಎಂದರು.
‘ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಬಸವ ದೇವಸ್ಥಾನಕ್ಕೆ ಈಗಾಗಲೇ ₹50 ಲಕ್ಷ ಬಿಡುಗಡೆ ಮಾಡಲಾಗಿದೆ. ರಸ್ತೆಗಳ ನಿರ್ಮಾಣ, ಶಾಲಾ ಕೊಠಡಿ, ಸೇತುವೆ ನಿರ್ಮಾಣಕ್ಕೂ ಹಣ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.
ಗುಬ್ಬಲಗುಡ್ಡದ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ಹಾಗೂ ಅರಳಿಕಟ್ಟಿಯ ತೋಂಟದಾರ್ಯ ವಿರಕ್ತಮಠದ ಶಿವಮೂರ್ತಿ ಸ್ವಾಮಿಗಳು ನೇತೃತ್ವ ವಹಿಸಿದ್ದರು.
ಹರ್ತಿಹಿರೇಮಠ ಹರ್ಲಾಪುರ ಗದಗಿನ ವೇದಮೂರ್ತಿ ಸದಾನಂದ ಶಾಸ್ತ್ರಿಗಳು, ಬಳುಟಗಿಯ ಶಿವಕುಮಾರ ದೇವರು, ಕಾರಂಜಿಮಠ ಬೆಳಗಾವಿಯ ಶಿವಯೋಗಿ ದೇವರು, ಹಿಡಕಲ್ ಡ್ಯಾಮ್‌ನ ಶಿವಶರಣ ದೇವರು, ಹೊನ್ನಿಹಾಳ ಹಿರೇಮಠ ಬಸವರಾಜ ದೇವರು, ಗದಗನ ಶಿವಲಿಂಗಯ್ಯ ಗವಾಯಿಗಳು, ಪಂಚಾಕ್ಷರಿ ಹೂಗಾರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗ್ರಾಮದ ಹಿರಿಯರು ಇದ್ದರು.
ಅಂಬೇಡ್ಕರ್ ಭವನ ಬಸ್ ನಿಲ್ದಾಣ ಉದ್ಘಾಟನೆ
ಅರಳಿಕಟ್ಟಿ ಗ್ರಾಮದಲ್ಲಿ ₹25 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಅಂಬೇಡ್ಕರ್ ಭವನ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿದ ಬಸ್ ನಿಲ್ದಾಣವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಮುಖಂಡರಾದ ಅಡಿವೇಶ ಇಟಗಿ ರಾಘು ಪಾಟೀಲ ಪ್ರಕಾಶ ಜಪ್ತಿ ನಿಂಗಪ್ಪ ತಳವಾರ ಸಿದ್ದಪ್ಪ ಸಿಂಗಾಡಿ ಅಣ್ಣಪ್ಪ ಪಾಟೀಲ ಉಮೇಶ ಪಾಟೀಲ ಬಸವರಾಜ ಸತ್ತಿಗೇರಿ ಪಾರವ್ವ ಹುದ್ದಾರ ಕಾಶವ್ವ ಅಗಸಗಿ ನಿಂಗವ್ವ ಅಗಸಗಿ ಸಂಗೀತಾ ಕರಲಿಂಗನವರ ಪ್ರಕಾಶ ಅಕ್ಕಮಯಿ ಬಸವರಾಜ ಸಿಂಗಾಡಿ ವಿಶಾಲ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.