ಬೆಳಗಾವಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಕಳೆದ ನಾಲ್ಕೈದು ದಿನಗಳಿಂದ ಸುರಿದ ಭಾರಿ ಮಳೆಯ ಪರಿಣಾಮ ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ದೂಧ್‌ಗಂಗಾ, ವೇದಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಸೇತುವೆಗಳು, ದೇವಸ್ಥಾನಗಳು, ಶಾಲೆಗಳು, ಬ್ಯಾಂಕ್‌ಗಳು, ಅಂಗಡಿಗಳು ಜಲಾವೃತವಾಗಿದ್ದು, ಜನಜೀವನ ತತ್ತರಿಸಿ ಹೋಗಿದೆ.
ಖಾನಾಪುರದ ಘಟ್ಟ ಪ್ರದೇಶಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಪಾಂಡರಿ ಹಾಗೂ ಮಲಪ್ರಭಾ ನದಿಗಳು ಮೈದುಂಬಿ ಹರಿಯುತ್ತಿವೆ. ಪಾಂಡರಿ ನದಿಯ ಸೆಳೆತಕ್ಕೆ ತಾಲ್ಲೂಕಿನ ಶಿವಠಾಣ ರೈಲ್ವೆ ನಿಲ್ದಾಣದ ಬಳಿ ಭೂ ಕುಸಿತ ಉಂಟಾಗಿದೆ. ಲೋಂಡಾ ಗ್ರಾಮದ ಸಾತನಾಳಿ ಬಳಿಯ ಸಂಕ (ತೂಗು ಸೇತುವೆ) ಜಲಾವೃತವಾಗಿದ್ದು, ಅಕ್ಕಪಕ್ಕದ ಹಳ್ಳಿಗಳ ಸಂಪರ್ಕ ಕೊಂಡಿ ಕಡಿತಗೊಂಡಿದೆ.
ಸವದತ್ತಿ ಬಳಿ ಮಲಪ್ರಭಾ ನದಿಗೆ ನಿರ್ಮಿಸಲಾಗಿರುವ ನವಿಲುತೀರ್ಥ ಜಲಾಶಯದಿಂದ 26 ಸಾವಿರ ಕ್ಯುಸೆಕ್ ನೀರು ಹೊರಬಿಟ್ಟಿದ್ದರ ಪರಿಣಾಮವಾಗಿ ನದಿ ದಂಡೆಯ ಗ್ರಾಮಗಳು ಜಲಾವೃತವಾಗಿವೆ. ಸವದತ್ತಿ ತಾಲ್ಲೂಕಿನ ಮುನವಳ್ಳಿ, ತಗ್ಗಿಹಾಳ, ರಾಮದುರ್ಗ ತಾಲ್ಲೂಕಿನ ಸುನ್ನಾಳ, ಎಲಗೊಪ್ಪ, ಹಂಪಿಹೊಳಿ, ಅವರಾದಿ, ಘಟಕನೂರು ಗ್ರಾಮಗಳಿಗೆ ನೀರು ನುಗ್ಗಿದೆ. ರಾಮದುರ್ಗ– ಸುರೇಬಾನ ಸೇತುವೆ ಜಲಾವೃತವಾಗಿದೆ. ಹೊಲಗಳಿಗೂ ನೀರು ನುಗ್ಗಿದೆ. ಮುನವಳ್ಳಿಯಲ್ಲಿ ಬ್ಯಾಂಕ್, ಮನೆಯೊಳಗೆ ನೀರು ನುಗ್ಗಿದೆ.
ಎಂ.ಕೆ.ಹುಬ್ಬಳ್ಳಿ ಬಳಿಯ ಮಲಪ್ರಭಾ ನದಿದಂಡೆಯ ಮೇಲಿರುವ ಶರಣೆ ಗಂಗಾಬಿಕಾ ಐಕ್ಯಮಂಟಪ ಜಲಾವೃತವಾಗಿದೆ. ಘಟಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಗೋಕಾಕ ಹೊರವಲಯದ ಲೊಳಸೂರ ಸೇತುವೆ ಮುಳುಗಡೆಯಾಗಿದೆ. ನಗರದ ಹಳೆಯ ದನಗಳ ಪೇಟೆ, ಉಪ್ಪಾರ ಓಣಿ, ಕುಂಬಾರ ಓಣಿಯಲ್ಲಿ ನೀರು ನುಗ್ಗಿದೆ.
ಹಿರಣ್ಯಕೇಶಿ ನದಿ ದಂಡೆಯ ಬಡಕುಂದ್ರಿ ಗ್ರಾಮದ ಹೊಳೆಮ್ಮ ದೇವಸ್ಥಾನ ಜಲಾವೃತವಾಗಿದೆ. ಕೊಟಬಾಗಿ ಗ್ರಾಮದ ದುರ್ಗಾದೇವಿ ಮಂದಿರ ಜಲಾವೃತವಾಗಿದೆ. ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ– ಕಲಾರಕೊಪ್ಪ ರಸ್ತೆಯ ಮೇಲೆ ನೀರು ಹರಿದ ಪರಿಣಾಮ ಕೆಲಹೊತ್ತು ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.
ಕೃಷ್ಣಾ ಹರಿವು ಹೆಚ್ಚಳ:
ನೆರೆಯ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಹರಿದುಬರುತ್ತಿರುವ ಕೃಷ್ಣಾ ನದಿ ಪ್ರಮಾಣವೂ ಏರಿಕೆಯಾಗಿದೆ.ಕೃಷ್ಣಾ ನದಿಯ ರಾಯಬಾಗ– ಕುಡಚಿ ಸೇತುವೆ ಜಲಾವೃತವಾಗಿದೆ. ಕಲ್ಲೋಳ ಬಳಿಯ ದತ್ತ ಮಂದಿರ ಪುನಃ ಜಲಾವೃತವಾಗಿದೆ.
ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 55,958 ಕ್ಯುಸೆಕ್ ನೀರು ಸೇರಿದಂತೆ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ 1.27 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ದೂಧ್‌ಗಂಗಾ ನದಿಯ 23,936 ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಸೇರಿಕೊಂಡು 1.51 ಲಕ್ಷ ಕ್ಯುಸೆಕ್ ನೀರು ಕೃಷ್ಣಾದಲ್ಲಿ ಹರಿಯುತ್ತಿದೆ. ಮುಂದಿನ 48 ತಾಸುಗಳಲ್ಲಿ ಈ ಪ್ರಮಾಣವು 2.75 ಲಕ್ಷ ಕ್ಯುಸೆಕ್ ಮೀರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಮದುರ್ಗ ತಾಲ್ಲೂಕಿನ ಜಲಾವೃತ ಗ್ರಾಮಗಳಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭೇಟಿ ನೀಡಿದರು. ನದಿ ದಂಡೆಯ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದರು. ಸಂತ್ರಸ್ತರಿಗಾಗಿ ತಕ್ಷಣ ಪರಿಹಾರ ಕೇಂದ್ರಗಳನ್ನು ಆರಂಭಿಸುವಂತೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.