ADVERTISEMENT

‘ಉದ್ಯೋಗ ಖಾತ್ರಿ’ ಕೆಲಸ ಸ್ಥಗಿತ: ಖಂಡನೆ

​ಪ್ರಜಾವಾಣಿ ವಾರ್ತೆ
Published 12 ಮೇ 2021, 13:11 IST
Last Updated 12 ಮೇ 2021, 13:11 IST

ಬೆಳಗಾವಿ: ‘ರಾಜ್ಯ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆಯ ಕೆಲಸಗಳನ್ನು ನಿಲ್ಲಿಸಿ ದುಡಿದು ತಿನ್ನುವ ಬಡವರ ಒಪ್ಪತ್ತಿನ ಗಂಜಿಯನ್ನೂ ಕಿತ್ತುಕೊಂಡಿರುವುದನ್ನು ರೈತ-ಕೃಷಿ ಕಾರ್ಮಿಕರ ಸಂಘಟನೆ (ಆರ್‌.ಕೆ.ಎಸ್.)‌ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ’ ಎಂದು ಸಂಘಟಕ ಲಕ್ಕಪ್ಪ ಬಿಜ್ಜನ್ನವರ ತಿಳಿಸಿದ್ದಾರೆ.

‘ಬೆಂಗಳೂರು, ಮುಂಬೈ, ಹೈದರಾಬಾದ್, ಪುಣೆ ಮೊದಲಾದ ನಗರಗಳಿಗೆ ವಲಸೆ ಹೋಗಿದ್ದ ಸಾವಿರಾರು ಕಾರ್ಮಿಕರು,ಲಾಕ್‌ಡೌನ್‌ ಘೋಷಣೆ ಹಿನ್ನೆಲೆಯಲ್ಲಿ ಮತ್ತೆ ಹಳ್ಳಿಗಳಿಗೆ ಹಿಂತಿರುಗುತ್ತಿದ್ದಾರೆ. ಜೀವನ ನಿರ್ವಹಣೆ ಹೇಗೆ ಎನ್ನುವ ಆತಂಕದಲ್ಲಿದ್ದಾರೆ. ಹೀಗಿರುವಾಗ, ರಾಜ್ಯ ಸರ್ಕಾರವು ಮತ್ತೊಂದು ಆಘಾತ ನೀಡಿರುವುದು ಸರಿಯಲ್ಲ’ ಎಂದಿದ್ದಾರೆ.

‘ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯ ಕೆಲಸಗಳು ಆಸರೆ ಆಗಿದ್ದವು. ಆದರೆ, ಅದನ್ನು ನಿಲ್ಲಿಸಲು ಆದೇಶಿಸಿರುವ ಸರ್ಕಾರವು ಗ್ರಾಮೀಣ ಕರ್ನಾಟಕದ ಲಕ್ಷಾಂತರ ರೈತ ಕೂಲಿ ಕಾರ್ಮಿಕರ ಜೀವನವನ್ನು ಮತ್ತಷ್ಟು ಅತಂತ್ರಕ್ಕೆ ದೂಡಿದೆ. ಬೃಹತ್ ಕೈಗಾರಿಕೆಗಳು ಮತ್ತು ವಿವಿಧ ಉದ್ದಿಮೆಗಳಲ್ಲಿ ಸಹಸ್ರಾರು ಜನರು ಕೆಲಸ ಮಾಡಲು ಅವಕಾಶ ನೀಡಿ, ಬಯಲಿನಲ್ಲಿ ಬೀಸುಗಾಳಿಯಲ್ಲಿ ಬಿಡಿ ಬಿಡಿಯಾಗಿ ಮಾಡುವಂತಹ ಉದ್ಯೋಗ ಖಾತ್ರಿ ಯೋಜನೆ ಕೆಲಸಗಳನ್ನು ನಿಲ್ಲಿಸಿರುವುದು ಹಾಸ್ಯಾಸ್ಪದವಾಗಿದೆ’ ಎಂದು ಟೀಕಿಸಿದ್ದಾರೆ.

ADVERTISEMENT

‘ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಯೋಜನೆಯಲ್ಲಿ ಜನರಿಗೆ ತಡೆರಹಿತವಾಗಿ ಉದ್ಯೋಗ ನೀಡಲು ಆದೇಶಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.