ADVERTISEMENT

ಚಿನ್ನವಾರಿ ಗುಡ್ಡದಲ್ಲಿ ರಸ್ತೆ, ತಡೆಗೋಡೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 14:22 IST
Last Updated 8 ಜನವರಿ 2021, 14:22 IST
ಬೆಳಗಾವಿ ತಾಲ್ಲೂಕಿನ ಚಿನ್ನವಾರಿ ಗುಡ್ಡದಲ್ಲಿ ರಸ್ತೆ ಹಾಗೂ ತಡೆಗೋಡೆ ನಿರ್ಮಿಸಲಾಗಿದೆ
ಬೆಳಗಾವಿ ತಾಲ್ಲೂಕಿನ ಚಿನ್ನವಾರಿ ಗುಡ್ಡದಲ್ಲಿ ರಸ್ತೆ ಹಾಗೂ ತಡೆಗೋಡೆ ನಿರ್ಮಿಸಲಾಗಿದೆ   

ಬೆಳಗಾವಿ: ಅಪಘಾತ ವಲಯ ಎಂದೇ ಕರೆಯಲಾಗುತ್ತಿದ್ದ ತಾಲ್ಲೂಕಿನ ಚಿನ್ನವಾರಿ ಗುಡ್ಡ (ಕೆ.ಕೆ. ಕೊಪ್ಪ)ದ ರಸ್ತೆಯಲ್ಲಿ ತಡೆಗೋಡೆಗಳನ್ನು ನಿರ್ಮಿಸಿಕೊಡುವ ಮೂಲಕ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಸ್ಥಳೀಯರ ಬೇಡಿಕೆ ಈಡೇರಿಸಿದ್ದಾರೆ.

ಈ ಪ್ರದೇಶವು ಕೆ.ಕೆ. ಕೊಪ್ಪ, ಹಲಗಿಮರ್ಡಿ, ನಾಗೇರಹಾಳ, ನಾಗೇನಹಟ್ಟಿ, ಬಡಾಲ್ ಅಂಕಲಗಿ, ಹುಲಿಕವಿ ಮೊದಲಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯಲ್ಲಿ ಅಪಘಾತ ಸಾಮಾನ್ಯ ಎನ್ನುವಂತಾಗಿತ್ತು. ಅನೇಕರು ಅಲ್ಲಿ ಬಿದ್ದು ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಅನೇಕ ರೈತರು ಟ್ರ್ಯಾಕ್ಟರ್ ಮೂಲಕ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವ ಸಂದರ್ಭದಲ್ಲಿ ಟ್ರಾಕ್ಟರ್‌ಗಳು ಉರುಳಿ ಬಿದ್ದು ಸಂಕಷ್ಟ ಅನುಭವಿಸಿದ್ದರು. ಇಲ್ಲಿ ಸುಸಜ್ಜಿತ ರಸ್ತೆ ಹಾಗೂ ತಡೆಗೋಡೆ ನಿರ್ಮಿಸಿಕೊಡಬೇಕು ಎನ್ನುವುದು ಜನರ ಆಗ್ರಹವಾಗಿತ್ತು.

ಶಾಸಕರು ಸ್ಪಂದಿಸಿದ್ದಕ್ಕೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದಾರೆ.

ADVERTISEMENT

‘ಜನರ ಬೇಡಿಕೆ ಈಡೇರಿಸಿ ಸ್ಪಂದಿಸಿದ್ದೇನೆ. ಮುಂದೆ ಅಲ್ಲಿ ಯಾವುದೇ ಪ್ರಾಣ ಹಾನಿ ಆಗಬಾರದೆಂದು ₹ 4.5 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೆ. ಈಗ, ಕೋಳಿವಾಡ ಗ್ರಾಮದಿಂದ ಕೆ.ಕೆ. ಕೊಪ್ಪ ಗ್ರಾಮದವರೆಗೆ ರಸ್ತೆಯ ಡಾಂಬರೀಕರಣ ಹಾಗೂ ತಡೆಗೋಡೆ ನಿರ್ಮಿಸಲಾಗಿದೆ’ ಎಂದು ಶಾಸಕಿ ತಿಳಿಸಿದ್ದಾರೆ.

‘ಈಗ ಈ ರಸ್ತೆಯಲ್ಲಿ ಎಲ್ಲ ಗ್ರಾಮಗಳ ಜನರ ಯಾವುದೇ ಭಯವಿಲ್ಲದೆ ಸರಾಗ ಹಾಗೂ ಸುಗಮವಾಗಿ ಸಾಗುತ್ತಿರುವುದನ್ನು ನೋಡಿ ತುಂಬಾ ಖುಷಿ ಎನಿಸುತ್ತಿದೆ. ಶಾಸಕಿಯಾಗಿ ಕೈಗೊಂಡ ಕೆಲಸಗಳು ಹಾಗೂ ತೆಗೆದುಕೊಳ್ಳುವ ಜವಾಬ್ದಾರಿಗಳು ತೃಪ್ತಿ ತಂದುಕೊಟ್ಟಿವೆ. ಜನ ಸೇವೆಯನ್ನು ಹೀಗೆಯೇ ಮುಂದುವರಿಸುತ್ತೇನೆ’ ಎಂದು ಪ್ರಕಟಣೆಯಲ್ಲಿ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.