ಚನ್ನಮ್ಮನ ಕಿತ್ತೂರು: ‘ತಾಲ್ಲೂಕಿನ ದೇವಗಾಂವ ಕ್ರಾಸ್‌ನಿಂದ ದೇಗುಲಹಳ್ಳಿ ಕ್ರಾಸ್‌ವರೆಗಿನ ರಸ್ತೆ ಕಾಮಗಾರಿ ಸ್ಥಗಿತಗೊಳ್ಳಲು ಅಧಿಕಾರಿಗಳ ರಾಜಕಾರಣವೇ ಕಾರಣ. ಒಂದು ವಾರದೊಳಗೆ ಕೆಲಸ ಆರಂಭಿಸದಿದ್ದರೆ ಕಿತ್ತೂರು- ಬೀಡಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು’ ಎಂದು ಇಲ್ಲಿಯ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜನಿಯರ್ (ಎಇಇ) ಕಚೇರಿಗೆ ಗ್ರಾಮಸ್ಥರು ಶುಕ್ರವಾರ ತೆರಳಿ ಎಚ್ಚರಿಕೆ ನೀಡಿದರು.
‘ಹಿಂದಿನ ಶಾಸಕ ಮಹಾಂತೇಶ ದೊಡ್ಡಗೌಡರ ಅವಧಿಯಲ್ಲಿ ಸುಮಾರು 3 ಕಿ.ಮೀ ರಸ್ತೆ ಡಾಂಬರೀಕರಣ ಮತ್ತು ಸಿಮೆಂಟ್ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಊರ ಪ್ರವೇಶ ದ್ವಾರದಲ್ಲಿ ಸ್ವಲ್ಪ ಮತ್ತು ಊರ ಮತ್ತೊಂದು ಬದಿಗೆ ರಸ್ತೆ ಡಾಂಬರೀಕರಣ ಮಾಡಿ ಗುತ್ತಿಗೆದಾರ ಕೈತೊಳೆದುಕೊಂಡಿದ್ದಾರೆ. ಅಧಿಕಾರಿಗಳೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಆರೋಪಿಸಿದರು.
‘ಚುನಾವಣೆ ನೆಪವೊಡ್ಡಿ ಕಾಮಗಾರಿ ಸ್ಥಗಿತಗೊಂಡಿದೆ. ಈಗಾಗಲೇ ಮಾಡಿದ ಕೆಲಸವೂ ಗುಣಮಟ್ಟದಿಂದ ಕೂಡಿಲ್ಲ. ಲೋಕಸಭೆ ಚುನಾವಣೆ ಮತದಾನದ ದಿನಕ್ಕಿಂತ ಎರಡ್ಮೂರು ದಿನಗಳ ಮೊದಲು ಗುತ್ತಿಗೆದಾರ ಜೆಸಿಬಿ ಯಂತ್ರಗಳನ್ನು ತಂದು ನಿಲ್ಲಿಸಿದ್ದರು. ಕಾಮಗಾರಿ ನಡೆಸದೆ ಮತ್ತೆ ಅವುಗಳನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕಾಮಗಾರಿ ಆರಂಭಿಸದಿದ್ದರೆ ಬೆಳಗಾವಿಯ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ರಮೇಶ ಉಗರಖೋಡ, ಪರಶುರಾಮ ಬೇಕವಾಡ, ಮಹಾಂತೇಶ ದುಗ್ಗಾಣಿ, ಬಸಯ್ಯ ಮುಪ್ಪಿನಮಠ, ಈರಣ್ಣ ಮಾರಿಹಾಳ, ಶಂಕರ ಗಳಗಿ, ಕಲ್ಲಪ್ಪ ಕಾದ್ರೊಳ್ಳಿ, ಪ್ರಕಾಶ ಕಡತನಾಳ, ರುದ್ರಪ್ಪ ಬೆಂಡಿಗೇರಿ, ಪಾರೀಶ ದೇಗುಲೊಳ್ಳಿ, ವೀರನಗೌಡ ಪಾಟೀಲ, ರುದ್ರಪ್ಪ ಬಿದರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.