ADVERTISEMENT

ರಾಷ್ಟ್ರೀಯತೆಯ ಸಂಸ್ಕಾರ ಕೊಡುವ ಆರ್‌ಎಸ್‌ಎಸ್‌: ಋಷಿಕೇಶ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 12:50 IST
Last Updated 16 ಅಕ್ಟೋಬರ್ 2021, 12:50 IST
ತೆಲಸಂಗ ಗ್ರಾಮದಲ್ಲಿ ಆರ್‌ಎಸ್‌ಎಸ್‌ನಿಂದ ಹಮ್ಮಿಕೊಂಡಿದ್ದ ವಿಜಯದಶಮಿ ಉತ್ಸವದಲ್ಲಿ ವಿಭಾಗ ಪ್ರಚಾರಕ ಋಷಿಕೇಶ ಮಾತನಾಡಿದರು
ತೆಲಸಂಗ ಗ್ರಾಮದಲ್ಲಿ ಆರ್‌ಎಸ್‌ಎಸ್‌ನಿಂದ ಹಮ್ಮಿಕೊಂಡಿದ್ದ ವಿಜಯದಶಮಿ ಉತ್ಸವದಲ್ಲಿ ವಿಭಾಗ ಪ್ರಚಾರಕ ಋಷಿಕೇಶ ಮಾತನಾಡಿದರು   

ತೆಲಸಂಗ: ‘ಆರ್‌ಎಸ್‌ಎಸ್‌ ರಾಷ್ಟ್ರೀಯತೆಯ ಸಂಸ್ಕಾರ ಕೊಡುತ್ತದೆ. ಸಂಸ್ಕಾರ ಪಡೆದ ಸ್ವಯಂ ಸೇವಕ ದೇಶ ಕಟ್ಟುವ ಕೆಲಸ ಮಾಡುತ್ತಾನೆ. ಇದುವೆ ಹಿಂದುತ್ವ; ಇದುವೆ ಆರ್‌ಎಸ್‌ಎಸ್‌’ ಎಂದು ಸಂಘಟನೆಯ ವಿಭಾಗ ಪ್ರಚಾರಕ ಋಷಿಕೇಶ ಹೇಳಿದರು.

ಗ್ರಾಮದ ಪ್ರೌಢಶಾಲೆ ಮೈದಾನದಲ್ಲಿಶುಕ್ರವಾರ ಸಂಜೆ ವಿಜಯದಶಮಿ ಅಂಗವಾಗಿ ಹಮ್ಮಿಕೊಂಡಿದ್ದ ಉತ್ಸವದಲ್ಲಿ ಅವರು ಮಾತನಾಡಿದರು.

‘ಆರ್‌ಎಸ್‌ಎಸ್‌ ಮುಗಿಸಬೇಕೆಂದು ಹಿಂದಿನಿಂದಲೂ ಪ್ರಯತ್ನ ನಡೆಯುತ್ತಲೇ ಇದೆ. ಆದರೆ, ವಿರೋಧ ಹೆಚ್ಚಿದಂತೆಲ್ಲ ಬಹು ದೊಡ್ಡ ಸಂಘಟನೆಯಾಗಿ ಬೆಳೆಯುತ್ತಲೇ ಇದೆ. ನಮ್ಮೂರಿನ ಮಕ್ಕಳಿಗೆ ಸಂಸ್ಕಾರ ಬೇಕು; ನಮ್ಮೂರಲ್ಲೂ ಶಾಖೆ ತೆರೆಯಿರಿ ಎಂದು ಜನರು ಆಹ್ವಾನ ನೀಡುತ್ತಿದ್ದಾರೆ. ಆರ್‌ಎಸ್‌ಎಸ್‌ನಲ್ಲಿ ಬೆಳೆದ ಯುವಕರು ಕೆಡುವುದಿಲ್ಲ ಎನ್ನುವ ವಿಶ್ವಾಸ ಬಂದಿರುವುದು ಇದಕ್ಕೆ ಕಾರಣವಾಗಿದೆ’ ಎಂದರು.

ADVERTISEMENT

‘ಸಮಾಜದ ಪ್ರತಿ ಕ್ಷೇತ್ರದಲ್ಲೂ ಸಂಘಟನೆ ಕೆಲಸ ಮಾಡುತ್ತಿದೆ. ಕೋವಿಡ್ ಸಂದರ್ಭದಲ್ಲಿ 450 ಮಂದಿಯ ಶವ ಸಂಸ್ಕಾರವನ್ನು ಬೆಳಗಾವಿ ಜಿಲ್ಲೆಯೊಂದರಲ್ಲೆ ಸ್ವಯಂ ಸೇವಕರು ಮಾಡಿದ್ದಾರೆ’ ಎಂದು ತಿಳಿಸಿದರು.

‘ಮತಾಂತರ ಪಿಡುಗು, ಲವ್ ಜಿಹಾದ್, ಗೋಹತ್ಯ ದೇಶಕ್ಕೆ ಮಾರಕವಾಗಿ ಕಾಡುತ್ತಿದೆ. ರಾಷ್ಟ್ರ ಪುರುಷರನ್ನು ಜಾತಿಗಳಿಗೆ ಸೀಮಿತಗೊಳಿಸಿ ಜಾತಿಯ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಇದಕ್ಕೆಲ್ಲ ಉತ್ತರ ಕೊಡಬೇಕಿದೆ. ದುಷ್ಟಶಕ್ತಿಯ ಸಂಹಾರಕ್ಕೆ ದೇವತೆಗಳೂ ಶಸ್ತ್ರ ಹಿಡಿದಿದ್ದಾರೆ. ಸ್ವಂತಕ್ಕೆ ಏನನ್ನೂ ಬಯಸದೆ ದೇಶಕ್ಕಾಗಿ ರಕ್ತ ಹರಿಸಿದ ಕ್ರಾಂತಿಕಾರಿಗಳ ತ್ಯಾಗಕ್ಕೆ ದುಷ್ಟಶಕ್ತಿಗಳ ಸಂಹಾರದ ಮೂಲಕ ಹಾಗೂ ಭವ್ಯ ಭಾರತ ಕಟ್ಟುವ ಮೂಲಕ ಸಾರ್ಥಕತೆ ನೀಡಬೇಕು’ ಎಂದು ಕರೆ ನೀಡಿದರು.

ನಿವೃತ್ತ ಶಿಕ್ಷಕ ಶರಣಪ್ಪ ಅವಟಿ ಅಧ್ಯಕ್ಷತೆ ವಹಿಸಿದ್ದರು. ಸಂತೋಷ ಕುಲಕರ್ಣಿ, ಡಾ.ಬಿ.ಎಸ್. ಕಾಮನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.