ADVERTISEMENT

‘ಸುಖ, ಶಾಂತಿ ಬಯಸುವವರೆಲ್ಲ ಹಿಂದೂಗಳು’

ಗಮನಸೆಳೆದ ಆರ್‌ಎಸ್‌ಎಸ್‌ ಗಣವೇಷಧಾರಿಗಳ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 15:01 IST
Last Updated 6 ಅಕ್ಟೋಬರ್ 2019, 15:01 IST
ಬೆಳಗಾವಿಯಲ್ಲಿ ಭಾನುವಾರ ವಿಜಯದಶಮಿ ಅಂಗವಾಗಿ ಆರ್‌ಎಸ್‌ಎಸ್‌ನಿಂದ ಆಯೋಜಿಸಿದ್ದ ಪಥಸಂಚಲನದಲ್ಲಿ ಕಾರ್ಯಕರ್ತರು ಗಣವೇಷಧಾರಿಗಳಾಗಿ ಭಾಗವಹಿಸಿದ್ದರು
ಬೆಳಗಾವಿಯಲ್ಲಿ ಭಾನುವಾರ ವಿಜಯದಶಮಿ ಅಂಗವಾಗಿ ಆರ್‌ಎಸ್‌ಎಸ್‌ನಿಂದ ಆಯೋಜಿಸಿದ್ದ ಪಥಸಂಚಲನದಲ್ಲಿ ಕಾರ್ಯಕರ್ತರು ಗಣವೇಷಧಾರಿಗಳಾಗಿ ಭಾಗವಹಿಸಿದ್ದರು   

ಬೆಳಗಾವಿ: ‘ಸಾಮಾಜಿಕ ಸಮಸ್ಯೆಗಳಿಗೆ ಹಿಂದೂ ಧರ್ಮದ ಆಚರಣೆಗಳಲ್ಲಿಯೇ ಪರಿಹಾರಗಳಿವೆ. ಹಿಂದೂಗಳ ಗುಲಾಮಗಿರಿಗೆ ಅನ್ಯ ಧರ್ಮಗಳು ಕಾರಣವಲ್ಲ. ನಮ್ಮೊಳಗಿನ ದೌರ್ಬಲ್ಯವೇ ಕಾರಣ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರ ವಕ್ತಾರ ಶಾಮಕುಮಾರ ಹೇಳಿದರು.

ಇಲ್ಲಿನ ಗಾಂಧಿ ಭವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಭಾನುವಾರ ಆಯೋಜಿಸಿದ್ದ ವಿಜಯದಶಮಿ ಉತ್ಸವದಲ್ಲಿ ಅವರು ಮಾತನಾಡಿದರು.

‘ವಿಜಯದಶಮಿ ಎಂದರೆ ಅಧರ್ಮದ ವಿರುದ್ಧ ಧರ್ಮದ ವಿಜಯವಾಗಿದೆ. ಹಿಂದೂ ಧರ್ಮದ ರಕ್ಷಣೆಗಾಗಿ ಹುಟ್ಟಿಕೊಂಡ ಸಂಘ ವಿಜಯ ದಶಮಿ ದಿನದಂದು ಜನ್ಮ ತಾಳಿ ಮುನ್ನಡೆಯುತ್ತಿದೆ. 94 ವರ್ಷಗಳಿಂದ ಹಿಂದೂ ಧರ್ಮಕ್ಕಾಗಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದೆ. ದೇಶದಲ್ಲಿ ಅಧರ್ಮದ ಘಟನೆಗಳು ಹೆಚ್ಚಾದಂತೆ, ಧರ್ಮ ರಕ್ಷಣೆಗೆ ದುರ್ಘಟನೆಗಳು ಕೂಡ ನಡೆಯುತ್ತಿರುತ್ತವೆ’ ಎಂದರು.

ADVERTISEMENT

‘ದೇಶದಲ್ಲಿ ಈಗಲೂ ವಂದೇಮಾತರಂ, ಭಾರತ ಮಾತಾಕೀ ಜೈ ಎನ್ನದೇ ಇರುವವರೂ ಇದ್ದಾರೆ. ಯಾರು ಹಿಂದೂ ಧರ್ಮ ಉನ್ನತಿ, ಸುಖ ಹಾಗೂ ಶಾಂತಿ ಬಯತ್ತಾರೆಯೋ ಅವರು ಮಾತ್ರ ಹಿಂದೂಗಳಾಗಿರುತ್ತಾರೆ’ ಎಂದು ತಿಳಿಸಿದರು.

‘ಯಾವುದೇ ಹಿಂದೂ ಯಾರೊಬ್ಬರ ಮೇಲೂ ಆಕ್ರಮಣ, ಹಿಂಸೆ ಮಾರ್ಗ ತುಳಿದಿಲ್ಲದಿರುವುದು ಇತಿಹಾಸದಿಂದ ತಿಳಿದುಬರುತ್ತದೆ. ಇದೇ ಈ ಧರ್ಮದ ಶಕ್ತಿ’ ಎಂದು ಹೇಳಿದರು.

‘ದೇಶದ ಉನ್ನತಿಯಲ್ಲಿನ ನಮ್ಮ ಉನ್ನತಿ ಇದೆ. ದೇಶದ ಅಪಾಯದಲ್ಲಿ ನನ್ನ ಸೋಲು ಎಂದು ತಿಳಿದಿರುವವ ಹಿಂದೂ ಆಗಿರುತ್ತಾನೆ. ಹಿಂದೂಗಳ ಸಂಖ್ಯೆ ಕಡಿಮೆ ಇದ್ದ ಕಾರಣಕ್ಕಾಗಿಯೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮುಸ್ಲಿಂ ರಾಷ್ಟ್ರಗಳಾಗಿವೆ. ಭಾರತದಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ. ಹೀಗಾಗಿಯೇ ಇದು ಜಾತ್ಯತೀತ ರಾಷ್ಟ್ರವಾಗಿದೆ’ ಎಂದರು.

‘ಶಾಂತಿ ಸಂದೇಶ ನೀಡುವ ಮೂಲಕ ದೇಶದಾದ್ಯಂತ ಆರ್‌ಎಸ್‌ಎಸ್‌ ಕೆಲ‌ಸ ನಿರ್ವಹಿಸುತ್ತಿದೆ. ಇಡೀ ಜಗತ್ತಿನಲ್ಲಿನ‌ ಹಿಂದೂಗಳೆಲ್ಲರೂ ಒಗ್ಗೂಡುವುದನ್ನು ಬಯಸುತ್ತಿದೆ. ಶಕ್ತಿ ಶಾಲಿ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಗ್ಗಟಾಗಿ ಸೇವೆ ಸಲ್ಲಿಸಬೇಕು’ ಎಂದು ಕೋರಿದರು.

ಲೀಡರ್ಸ್‌ ಅಕಾಡೆಮಿ ಅಧ್ಯಕ್ಷ ವಿಶಾಲ ಕಳಸನ್ನವರ ಮಾತನಾಡಿದರು. ವಿಶಾಲ ಕಂಡಾಕಳೆ ಅತಿಥಿ ಪರಿಚಯಿಸಿದರು. ಮೇಲೆ ನಗರ ಸಂಘ ಚಾಲಕ ಬಾಳಣ್ಣ ಕಗ್ಗಣಗಿ ಇದ್ದರು.

ಇದಕ್ಕೂ ಮುನ್ನ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಪಥಸಚಲನ ನಡೆಸಿದರು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ದೇಶಪಾಂಡೆ, ಮುಖಂಡರಾದ ಸಂಜಯ ಪಾಟೀಲ, ಕಿರಣ ಜಾಧವ ಗಣವೇಷಧಾರಿಗಳಾಗಿ ಭಾಗವಹಿಸಿದ್ದರು.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.