ADVERTISEMENT

ಹಣ ದುರ್ಬಳಕೆ: ತನಿಖೆ ಆಗ್ರಹಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 12:42 IST
Last Updated 1 ಜೂನ್ 2020, 12:42 IST

ಬೆಳಗಾವಿ: ‘ವಿವಿಧೆಡೆ 2015-16ರಿಂದ 2019-20ರ ಅವಧಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ಹೆಸರಿನಲ್ಲಿ ಬೋಗಸ್ ಬಿಲ್‌, ಕಳಪೆ ಕಾಮಗಾರಿ, ದುರ್ಬಳಕೆ ಮತ್ತು ಹೆಚ್ಚುವರಿ ಹಣ ಪಾವತಿ ಅಕ್ರಮಗಳು ನಡೆದಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಹಣವನ್ನು ಮರಳಿ ಸರ್ಕಾರಕ್ಕೆ ಪಡೆಯಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ರಾಮದುರ್ಗದ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀನಿವಾಸಗೌಡ ಪಾಟೀಲ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

‘ರಾಮದುರ್ಗ ತಾಲ್ಲೂಕಿನ ಸೊಪ್ಪಡ್ಲ, ಓಬಳಾಪೂರ ಎಸ್‍ಎಲ್‍ಟಿ, ಓಬಳಾಪೂರ ಆರ್‌ಎಲ್‍ಟಿ, ಓಬಳಾಪೂರ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 2015-15ರಿಂದ 2019-20ರ ಅವಧಿಯಲ್ಲಿ ಕುಡಿಯುವ ನೀರು ಯೋಜನೆಗೆ ₹ 1 ಕೋಟಿಗೂ ಹೆಚ್ಚು ಅನುದಾನ ಮೀಸಲಿಡಲಾಗಿತ್ತು. ಆದರೆ, ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಆಗಿಲ್ಲ. ಅಧಿಕಾರಿಗಳು ಗ್ರಾಮದ ಕೆಲವರೊಂದಿಗೆ ಸೇರಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಸೊಪ್ಪಡ್ಲ ಗ್ರಾಮ ಒಂದರಲ್ಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದಾಗಿ ದಾಖಲೆಯಲ್ಲಿ ತೋರಿಸಲಾಗಿದೆ. ಆದರೆ, ಅಲ್ಲಿನ ಜನರು ನೀರಿಗಾಗಿ ಪರಿತಪಿಸುವುದು ಇಂದಿಗೂ ತಪ್ಪಿಲ್ಲ’ ಎಂದು ಆರೋಪಿಸಿದ್ದಾರೆ.

‘ಓಬಳಾಪೂರ ತಾಂಡಾದಲ್ಲೂ ಕಳಪೆ ಕಾಮಗಾರಿ ಮುಂದುವರಿದಿದೆ. ಆದರೆ, ಮಾಹಿತಿ ಹಕ್ಕು ಕಾಯ್ದೆಯಲ್ಲಿ ಪೂರ್ಣ ಮಾಹಿತಿ ಒದಗಿಸಿಲ್ಲ’ ಎಂದು ದೂರಿದ್ದಾರೆ.

ADVERTISEMENT

‘ಈ ಬಗ್ಗೆ ವಿಶೇಷ ತಂಡ ರಚಿಸುವ ಮೂಲಕ ಸಮಗ್ರ ತನಿಖೆ ನಡೆಸಬೇಕು. ಗ್ರಾಮೀಣ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಕೆಆರ್‌ಐಡಿಎಲ್ ಕಚೇರಿಯಿಂದ ಕಾಮಗಾರಿ ಮಾಡದೆ ಹಣ ಪಾವತಿಸಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.