ADVERTISEMENT

ಬೆಳಗಾವಿ: ರಾಯಣ್ಣನ ಪ್ರತಿಮೆಗೆ ಮಸಿ ಬಳಿದ ಕಿಡಿಗೇಡಿಗಳು

ಮಚ್ಛೆ ಗ್ರಾಮದಲ್ಲಿ ತಡರಾತ್ರಿ ನಡೆದ ಘಟನೆ, ಸ್ಥಳಕ್ಕೆ ಧಾವಿಸಿದ ಪೊಲೀಸ್‌ ಕಮಿಷನರ್‌, ಗ್ರಾಮದಲ್ಲಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 2:47 IST
Last Updated 21 ಫೆಬ್ರುವರಿ 2026, 2:47 IST
ಬೆಳಗಾವಿ ಸಮೀಪದ ಮಚ್ಚೆ ಗ್ರಾಮದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮೇಲೆ ಗುರುವಾರ ರಾತ್ರಿ ಕಿಡಿಗೇಡಿಗಳು ಮಸಿ ಸುರಿದ ಕಾರಣ, ಶುಕ್ರವಾರ ‍ಪೊಲೀಸ್‌ ಭದ್ರತೆ ಏರ್ಪಡಿಸಲಾಯಿತು  ಪ್ರಜಾವಾಣಿ ಚಿತ್ರ
ಬೆಳಗಾವಿ ಸಮೀಪದ ಮಚ್ಚೆ ಗ್ರಾಮದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮೇಲೆ ಗುರುವಾರ ರಾತ್ರಿ ಕಿಡಿಗೇಡಿಗಳು ಮಸಿ ಸುರಿದ ಕಾರಣ, ಶುಕ್ರವಾರ ‍ಪೊಲೀಸ್‌ ಭದ್ರತೆ ಏರ್ಪಡಿಸಲಾಯಿತು  ಪ್ರಜಾವಾಣಿ ಚಿತ್ರ   

ಬೆಳಗಾವಿ: ಸಮೀಪದ ಮಚ್ಚೆ ಗ್ರಾಮದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಗುರುವಾರ ರಾತ್ರಿ ಕಿಡಿಗೇಡಿಗಳು ಮಸಿ ಬಳಿದಿದ್ದಾರೆ ಎಂದು ಜನ ಆಕ್ರೋಶ ಹೊರಹಾಕಿದರು. ಇದರಿಂದ ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ರಸ್ತೆಗೆ ಹೊಂದಿಕೊಂಡ ವಿಶಾಲ ಕಟ್ಟೆಯ ಮೇಲೆ ಚಿಕ್ಕದಾದ ಪ್ರತಿ ನಿರ್ಮಾಣ ಮಾಡಲಾಗಿದೆ. ಮೊದಲಿನಿಂದಲೂ ರಾಯಣ್ಣ ಈ ಪ್ರತಿಮೆ ಕಪ್ಪು ಬಣ್ಣದಲ್ಲೇ ಇದೆ. ಅದರ ಮೇಲೆಯೇ ಮತ್ತೆ ಕರಿ ಮಸಿ ಸುರಿದಿದ್ದಾರೆ ಎಂಬ ಸಂಗತಿ ಗುರುವಾರ ರಾತ್ರಿ ಹರಿದಾಡಿತು.

ಆರಂಭದಲ್ಲಿ ಯಾರೂ ಇದನ್ನು ಗಮನಿಸಿರಲಿಲ್ಲ. ರಾತ್ರಿ ಗ್ರಾಮದ ಕೆಲವು ಯುವಕರ ಗಮನಕ್ಕೆ ಬಂದಿದೆ. ಕೆಲವೇ ನಿಮಿಷಗಳಲ್ಲಿ ಹಲವರು ಸ್ಥಳದಲ್ಲಿ ಸೇರಿ ಘೋಷಣೆ ಕೂಗಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಭದ್ರತಾ ಕ್ರಮ ಕೈಗೊಂಡರು. ಪ್ರತಿಮೆ ಮೇಲೆ ಬಿದ್ದಿದ್ದ ಕಪ್ಪು ಬಣ್ಣದ ದ್ರಾವಣವನ್ನು ಸಂಗ್ರಹಿಸಿದರು. ನಂತರ ಪ್ರತಿಮೆಯನ್ನು ತೊಳೆದು ಸ್ವಚ್ಛಗೊಳಿಸಿದರು.

ADVERTISEMENT

ರಾತ್ರಿಯೇ ದೌಡಾಯಿಸಿದ ಕಮಿಷನರ್: ನಗರ ಪೊಲೀಸ್‌ ಕಮಿಷನರ್‌ ಭೂಷಣ ಬೊರಸೆ, ಡಿಸಿಪಿ ನಾರಾಯಣ ಭರಮನಿ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಕೂಡ ತಡರಾತ್ರಿಯೇ ಸ್ಥಳಕ್ಕೆ ಧಾವಿಸಿದರು. ಅವರಿಗೆ ಸುತ್ತುವರಿದ ಜನ, ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

‘ರಾಯಣ್ಣ ಕೇವಲ ಐತಿಹಾಸಿಕ ವ್ಯಕ್ತಿಯಲ್ಲ. ನಮ್ಮ ದೇಶದ ಸ್ವಾಭಿಮಾನ ಹಾಗೂ ಸಮಾಜದ ಅಸ್ತಿತ್ವದ ಸಂಕೇತ. ಅವರ ಪ್ರತಿಮೆಗೆ ಅವಮಾನ ಮಾಡುವ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಕೂಡಲೇ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ಕನ್ನಡಪರ ಹೋರಾಟಗಾರರು ಘೋಷಣೆ ಕೂಗಿದರು. ಇದಕ್ಕೆ ಸ್ಪಂದಿಸಿದ ಕಮಿಷನರ್‌ ಆದಷ್ಟು ಬೇಗ ಪ್ರಕರಣ ಬಗೆಹರಿಸುವ ಭರವಸೆ ನೀಡಿದರು.

ಮುಂಜಾಗೃತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್‌ ಭದ್ರತೆ ಒದಗಿಸಲಾಯಿತು. ಶುಕ್ರವಾರ ಬೆಳಿಗ್ಗೆ ಕೂಡ ರಾಯಣ್ಣನ ಪ್ರತಿಮೆ ಹಾಗೂ ಗ್ರಾಮದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಕಾವಲು ನಡೆಸಿದರು.

ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ದ್ರಾವಣ

‘ರಾಯಣ್ಣನ ಪ್ರತಿಮೆ ಮೇಲೆ ಬಿದ್ದಿದ್ದ ಕಪ್ಪು ವರ್ಣದ ದ್ರಾವಣವನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿ ಅದು ಯಾವ ರೀತಿಯ ದ್ರಾವಣ ಎಂಬುದು ಗೊತ್ತಾಗಲಿದೆ’ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ತಿಳಿಸಿದ್ದಾರೆ. ‘ಪ್ರತಿಮೆಯಿಂದ ಕೇವಲ 10 ಮೀಟರ್‌ ದೂರದಲ್ಲಿ ಒಂದು ಸಿಸಿಟಿವಿ ಕ್ಯಾಮೆರಾ ಇದೆ. ಅದರಲ್ಲಿನ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ದೂರು ಕೂಡ ದಾಖಲಿಸಿಕೊಂಡಿದ್ದು ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ತನಿಖೆ ನಡೆದಿದೆ. ಜನರ ಗಾಳಿಮಾತಿಗೆ ಕಿವಿಗೊಡಬಾರದು’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.