ADVERTISEMENT

ಗುತ್ತಿಗೆದಾರರಿಂದ ₹ 98 ಲಕ್ಷ ಪಡೆದಿದ್ದ ಸಂತೋಷ್: ಹಿಂಡಲಗಾ ಗ್ರಾ. ಪಂ ಅಧ್ಯಕ್ಷ

ಶಾಸಕರು ಆಗೇಕೆ ಬೆಂಬಲಿಸಲಿಲ್ಲ: ಅಧ್ಯಕ್ಷ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 15:45 IST
Last Updated 18 ಏಪ್ರಿಲ್ 2022, 15:45 IST
   

ಬೆಳಗಾವಿ: ‘ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ ಕಾಮಗಾರಿಯ ಬಿಲ್‌ ಬಿಡುಗಡೆಗಾಗಿ ಪರದಾಡುತ್ತಿದ್ದಾಗ ಶಾಸಕಿ ಲಕ್ಷ್ಮೀಎಲ್ಲಿದ್ದರು, ಆಗ ಬೆಂಬಲಿಸಲಿಲ್ಲವೇಕೆ? ಎಂದು ಹಿಂಡಲಗಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ ಮನ್ನೋಳಕರ ಕೇಳಿದರು.

ಗೋಕಾಕದಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಒಂದೂವರೆ ವರ್ಷದ ಹಿಂದೆ ನಾನು ಹಾಗೂ ಗ್ರಾ.ಪಂ. ಸದಸ್ಯರು ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದೆವು. 100 ವರ್ಷದ ನಂತರ ಲಕ್ಷ್ಮಿದೇವಿ ಜಾತ್ರೆ ನಡೆಯುತ್ತಿದ್ದು, ಅಭಿವೃದ್ಧಿಗೆ ಕ್ರಮ ವಹಿಸುವಂತೆ ಕೋರಿದ್ದೆವು. ನಂತರ ಸಂತೋಷ್ ಪಾಟೀಲಗೆ ಗ್ರಾ.ಪಂ.ಯಿಂದ ಪತ್ರ ನೀಡಿದ್ದೆ’ ಎಂದರು.

‘ಈಶ್ವರಪ್ಪ ಅವರನ್ನು ಸಂತೋಷ್‌ ಜೊತೆ 2 ಬಾರಿ ಭೇಟಿ ಮಾಡಿದ್ದೆ. ಕೆಲಸ ಮಾಡುವಂತೆ ಅವರು ಸಂತೋಷ್‌ಗೆ ಹೇಳಿದ್ದರು. ಆದರೆ, ಶೇ 40ರಷ್ಟು ಕಮಿಷನ್‌ ವಿಚಾರ ಆಗ ಚರ್ಚೆಯಾಗಿಲಿರಲಿಲ್ಲ. ಕಾಮಗಾರಿ ಹಣ ಬಿಡುಗಡೆಗೆ ಇತರ ಗುತ್ತಿಗೆದಾರರಿಂದ ಸಂತೋಷ್‌ ಹಣ ಪಡೆದಿರುವುದು ಗೊತ್ತಿರಲಿಲ್ಲ. ಅವರು ಗುತ್ತಿಗೆದಾರಿಂದ ₹ 98 ಲಕ್ಷ ಪಡೆದಿದ್ದಾರೆ ಎನ್ನುವುದು ನಂತರ ಗೊತ್ತಾಯಿತು’ ಎಂದು ತಿಳಿಸಿದರು.

ADVERTISEMENT

‘ಕೆಲಸದ ವಿಚಾರದಲ್ಲಿ ಶಾಸಕಿ ತೊಂದರೆ ಕೊಡುತ್ತಿದ್ದಾರೆ ಎಂದು ಸಂತೋಷ್‌ ಒಮ್ಮೆ ಹೇಳಿದ್ದರು. ನಾನು ಬಿಜೆಪಿ ಎಂಬ ಕಾರಣಕ್ಕೆ ವಿರೋಧಿಸುತ್ತಿದ್ದಾರೆ ಎಂದಿದ್ದರು. ಕೆಲಸ ನಿಲ್ಲಿಸುವಂತೆ ಕೆಲವು ಅಧಿಕಾರಿಗಳಿಗೂ ಸೂಚಿಸಿದ್ದರು’ ಎಂದು ದೂರಿದರು.

‘ಶಾಸಕಿ ತಮ್ಮ ಕ್ಷೇತ್ರದಲ್ಲಿ‌ ಕೆಲಸ ನಡೆದಾಗ ಬೆಂಬಲಿಸಬೇಕಿತ್ತು. ಅವರು ಬೆಂಬಲಿಸಿದ್ದರೆ ಸಂತೋಷ್‌ ಸಾಯುತ್ತಿರಲಿಲ್ಲ’ ಎಂದರು.

ಗುತ್ತಿಗೆದಾರ ಸುನೀಲ್ ಚೌಗಲೆ, ‘ನಾನು ₹ 47 ಲಕ್ಷ ಮೊತ್ತದ ಕಾಮಗಾರಿ ಮಾಡಿದ್ದೇನೆ. ಬಿಲ್ ಕೊಡಿಸುವುದಾಗಿ ಸಂತೋಷ್ ನನ್ನ ಬಳಿ ₹ 10.15 ತೆಗೆದುಕೊಂಡಿದ್ದರು. ಅವರ ವಿಶ್ವಾಸದ ಮೇಲೆ ಕೆಲಸ ಮಾಡಿದ್ದೆವು. ನಾವು ಅವರಿಗೆ ಹಣಕ್ಕಾಗಿ ಕಿರುಕುಳ ನೀಡಿಲ್ಲ. ಈಗ ಹಣ ಕೊಡುವವರು ಯಾರು ಎನ್ನುವ ಪ್ರಶ್ನೆ ಕಾಡುತ್ತಿದೆ’ ಎಂದು ಹೇಳಿದರು.

‘ನಾನು ₹ 37 ಲಕ್ಷ ಮೊತ್ತದ ಕಾಮಗಾರಿ ಮಾಡಿದ್ದೇನೆ. ಬಿಲ್‌ ಮಾಡಿಸಿಕೊಂಡು ಬರುವಾಗಿ ಸಂತೋಷ್ ನನ್ ಬಳಿ ₹ 3 ಲಕ್ಷ ಪಡೆದಿದ್ದರು. ನಾವ್ಯಾರೂ ಈಶ್ವರಪ್ಪ ಅವರನ್ನು ಭೇಟಿಯಾಗಿಲ್ಲ’ ಎಂದು ಬಾಳಕೃಷ್ಣ ದಂಡಗಲಕರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.