ADVERTISEMENT

ಕಾರ್ಮಿಕರನ್ನು ವೃತ್ತಿಪರ ಮಾಡಲು ಯತ್ನ: ಸಚಿವ ಸಂತೋಷ ಲಾಡ್‌

ವಸತಿ ಸಮುಚ್ಛಯ ಉದ್ಘಾಟನೆ, ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್ ವಿತರಣಾ ಸಮಾರಂಭದಲ್ಲಿ ಸಚಿವ ಸಂತೋಷ ಲಾಡ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 2:06 IST
Last Updated 29 ಜುಲೈ 2025, 2:06 IST
ಸಂತೋಷ ಲಾಡ್‌
ಸಂತೋಷ ಲಾಡ್‌   

ಬೆಳಗಾವಿ: ‘ಕಾರ್ಮಿಕರನ್ನು ‘ವೃತ್ತಿಪರ’ ಮಾಡಲು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಈ ವರೆಗೆ 91 ಅಸಂಘಟಿತ ವಲಯಗಳ ಕಾರ್ಮಿಕರನ್ನು ಗುರುತಿಸಲಾಗಿದೆ. ಅವರಿಗೆ ಶೈಕ್ಷಣಿಕ, ವಸತಿ, ಆರೋಗ್ಯ ಹಾಗೂ ಆರ್ಥಿಕ ಸೌಕರ್ಯಗಳನ್ನು ವೃದ್ಧಿಸಲು ಗಮನ ಕೊಡಲಾಗಿದೆ’ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ರಾಜ್ಯ ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ, ನಗರದ ಯಮನಾಪುರ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ, ಶ್ರಮಿಕರ ತಾತ್ಕಾಲಿಕ ವಸತಿ ಸಮುಚ್ಛಯ ಉದ್ಘಾಟನೆ ಹಾಗೂ ಅಸಂಘಟಿತ ವಲಯಗಳ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ‘ಮದುವೆಗೆ ಧನ ಸಹಾಯ, ವೈದ್ಯಕೀಯ, ಶೈಕ್ಷಣಿಕ ಸಹಾಯ ಧನ, ಹೆರಿಗೆ ಸಹಾಯಧನ, ತಾಯಿ ಮಗು ಸಹಾಯಹಸ್ತ, ಅಂತ್ಯಕ್ರಿಯೆ ವೆಚ್ಚ, ಅಫಘಾತ ಪರಿಹಾರ, ಪಿಂಚಣಿ ಸೌಲಭ್ಯ ಸೇರಿದಂತೆ ಇನ್ನೂ ಅನೇಕ ಯೋಜನೆಗಳನ್ನು ಕಾರ್ಮಿಕ ಇಲಾಖೆಯಿಂದ ಜಾರಿಗೆ ತರಲಾಗಿದೆ’ ಎಂದರು.

ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಮಾತನಾಡಿ, ‘ಅರ್ಹ ಕಾರ್ಮಿಕರ ಗುರುತಿನ ಚೀಟಿಗಳ ನವೀಕರಣ ಕ್ರಮಗಳನ್ನು ಸರಳಗೊಳಿಸಬೇಕು. ಯಾವೊಬ್ಬ ಕಾರ್ಮಿಕ ಕೂಡ ಸರ್ಕಾರಿ ಸೌಕರ್ಯದಿಂದ ದೂರ ಉಳಿಯದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಅಧಿಕಾರಿಗಳು ಕಾರ್ಮಿಕರಿದ್ದಲ್ಲಿಗೇ ಹೋಗಿ ಜಾಗೃತಿ ಮೂಡಿಸಬೇಕು’ ಎಂದರು.

ಶಾಸಕರಾದ ಆಸಿಫ್ ಸೇಠ್‌, ಬಾಬಾಸಾಹೇಬ್ ಪಾಟೀಲ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕಾರ್ಮಿಕರ ಕಲ್ಯಾಣ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಭಾರತಿ, ಜಂಟಿ ಕಾರ್ಯದರ್ಶಿ ಎ.ಎಚ್ ಉಮೇಶ, ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ್, ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ ನಾಗರಾಜ್ ಇತರರು ವೇದಿಕೆ ಮೇಲಿದ್ದರು.

ಮೋದಿ ಪ್ರವಾಸ: ಲಾಡ್‌ ಟೀಕೆ

‘ಸಂಸತ್‌ ಅಧಿವೇಶನ ನಡೆಯುತ್ತಿದ್ದರೂ ಅದನ್ನು ನಿರ್ಲಕ್ಷ್ಯ ಮಾಡಿ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಮಾಡುತ್ತಿರುವುದು ಖಂಡನೀಯ. ಸದನದಲ್ಲಿ ವಿರೋಧ ಪಕ್ಷಗಳ ಪ್ರಶ್ನೆಗೆ ಉತ್ತರ ಕೊಡುವ ಬದಲು ಹೀಗೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ’ ಎಂದು ಸಚಿವ ಸಂತೋಷ ಲಾಡ್‌ ಟೀಕಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಮೋದಿ ಅವರು 90 ದೇಶಗಳಿಗೆ 180 ಬಾರಿ ಪ್ರವಾಸ ಮಾಡಿದ್ದಾರೆ. ಅದರ ಹಿಂದಿನ ಉದ್ದೇಶ ಮಾತ್ರ ಸ್ಪಷ್ಟವಾಗಿಲ್ಲ. ಜನರನ್ನು ಮಾತ್ರವಲ್ಲ; ಮಾಧ್ಯಮದವರನ್ನೂ ಮೂರ್ಖರನ್ನಾಗಿ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.