ADVERTISEMENT

ಮುಖ್ಯಮಂತ್ರಿ ದೆಹಲಿಯನ್ನೇ ಕೇಂದ್ರಸ್ಥಾನ ಮಾಡಿಕೊಳ್ಳಲಿ: ಸತೀಶ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 13:07 IST
Last Updated 14 ಆಗಸ್ಟ್ 2021, 13:07 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಳಗಾವಿ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪದೇ ಪದೇ ದೆಹಲಿಗೆ ತೆರಳುತ್ತಿದ್ದಾರೆ. ಹೀಗಾಗಿ, ಅವರು ಬೆಂಗಳೂರು ಬದಲಿಗೆ ದೆಹಲಿಯನ್ನೇ ಕೇಂದ್ರ ಸ್ಥಾನ ಮಾಡಿಕೊಳ್ಳಲಿ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.

ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ಪ್ರವಾಹದಿಂದ ತೊಂದರೆಗೀಡಾಗಿರುವ ಸಂತ್ರಸ್ತರಿಗೆ ಸರ್ಕಾರ ತುರ್ತು ಪರಿಹಾರ ನೀಡಬೇಕಾಗಿತ್ತು. ಹದಗೆಟ್ಟಿರುವ ರಸ್ತೆ, ವಿದ್ಯುತ್ ಕಂಬ, ಶಾಲೆಗಳನ್ನು ದುರಸ್ತಿ ಮಾಡಿಸುವ ಕಾರ್ಯ ನಡೆಯಬೇಕಿತ್ತು’ ಎಂದು ಹೇಳಿದರು.

‘ಶಶಿಕಲಾ ಜೊಲ್ಲೆ ಅವರಿಗೆ ಬೇರೆ ಖಾತೆ ಕೊಟ್ಟು ಮುಖ್ಯಮಂತ್ರಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ದೇವರ ಜಪ ಮಾಡಲು ಬೇರೆ ಖಾತೆ ಕೊಟ್ಟಿದ್ದಾರೆ. ತಪ್ಪಿಗೆ (ಮೊಟ್ಟೆ ಟೆಂಡರ್ ಹಗರಣದ ಆರೋಪ) ಪ್ರಾಯಶ್ಚಿತ ಮಾಡಿಕೊಳ್ಳಲು, ಹೆಚ್ಚು ಹೆಚ್ಚು ಜನರನ್ನು ಕರೆಸಲು ಬೇರೆ ಖಾತೆ ನೀಡಲಾಗಿದೆ. ಅದೇ ಅವರಿಗೆ ನೀಡಿರುವ ಶಿಕ್ಷೆಯಾಗಿದೆ’ ಎಂದು ಹೇಳಿದರು.

ADVERTISEMENT

‘ಬಿಜೆಪಿ ಸಚಿವರು ಒಬ್ಬರನ್ನೊಬ್ಬರು ಬೆಂಬಲಿಸುತ್ತಾರೆ. ಅವರದ್ದು ಸಾಮೂಹಿಕ ಭ್ರಷ್ಟಾಚಾರವಾಗಿದೆ. ಜೊಲ್ಲೆ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಬೇಕಿತ್ತು. ಯಾರಾದರೂ ನ್ಯಾಯಾಲಯಕ್ಕೆ ಹೋದರೆ ತನಿಖೆಗೆ ಆದೇಶ ಬಂದೇ ಬರುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗೆ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ. ಹಗುರವಾದ ಹೇಳಿಕೆಗಳು ಅವರಿಗೆ ಮತ್ತು ಅವರ ಪಕ್ಷಕ್ಕೆ ಶೋಭೆ ತರುವುದಿಲ್ಲ. ಇದರಿಂದ ಅವರ ಪಕ್ಷಕ್ಕೆ ಹಾನಿ ಆಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.