ADVERTISEMENT

ರೈತರ, ಜನರ ಒತ್ತಡಕ್ಕೆ ಮಣಿದು ಕಾಯ್ದೆ ವಾಪಸ್: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 13:29 IST
Last Updated 19 ನವೆಂಬರ್ 2021, 13:29 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ವರ್ಷದಿಂದ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಿದ್ದು, ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದೆ. ಇದು ಕೃಷಿಕರಿಗೆ ದೊರೆತ ಐತಿಹಾಸಿಕ ಜಯವಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಜಿಲ್ಲೆಯ ಗೋಕಾಕದ ಗೃಹ ಕಚೇರಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿರುವುದು ಬಹು ದೊಡ್ಡ ಮತ್ತು ಆಶ್ಚರ್ಯಕಾರಿ ಬೆಳವಣಿಗೆ. ಈ ಹಿಂದೆಯೇ ವಾಪಸ್ ಪಡೆಯಬೇಕಿತ್ತು. ಇದರಿಂದ ಬಿಜೆಪಿಗೂ ಗೌರವ ಸಿಗುತ್ತಿತ್ತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಹರಿಯಾಣ, ಪಂಜಾಬ್, ಉತ್ತರ ಪ್ರದೇಶದ ರೈತರು ಸುದೀರ್ಘ ಹೋರಾಟ ಮಾಡಿದ್ದಾರೆ. ಹೀಗಾಗಿ ಇದು ರೈತರಿಗೆ ಸಿಕ್ಕ ಜಯವಾಗಿದೆ. ಇದರಿಂದ ಬಿಜೆಪಿಯನ್ನು ಅಭಿನಂದಿಸಬೇಕಿಲ್ಲ. ಒತ್ತಡಕ್ಕೆ ತಲೆ ಬಾಗಿದ್ದಾರೆ. ರೈತರ ನಿರಂತರ ಪ್ರತಿಭಟನೆಗೆ ಮೋದಿಯವರು ತಲೆ ಬಾಗಿಸಿ ಗೌರವ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷವೂ ರೈತರ ಬೆಂಬಲಕ್ಕೆ ನಿಂತು ಹೋರಾಡಿದೆ. ಸಾರ್ವಜನಿಕರು, ಬುದ್ಧಿಜೀವಿಗಳು ಮತ್ತು ಇತರ ಪಕ್ಷದವರು ಕೂಡ ರೈತರನ್ನು ಬೆಂಬಲಿಸಿದ್ದಾರೆ. ಇವರೆಲ್ಲರಿಗೂ ಗೆಲುವು ಸಿಕ್ಕಿದೆ’ ಎಂದು ತಿಳಿಸಿದರು.

ರೈತರ ಗೆಲುವು: ಚನ್ನರಾಜ ಹಟ್ಟಿಹೊಳಿ

‘ಕೇಂದ್ರ ಸರ್ಕಾರ ಕೃಷಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆದಿರುವುದು ರೈತರ ಗೆಲುವಾಗಿದೆ’ ಎಂದು ಹರ್ಷ ಶುಗರ್ಸ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ್ದು, ‘ಮೊದಲ‌ ದಿನದಿಂದಲೂ ಕರಾಳ‌ ಕೃಷಿ ಕಾಯ್ದೆಗಳನ್ನು ಕಾಂಗ್ರೆಸ್ ವಿರೋಧಿಸುತ್ತಾ ಬಂದಿದೆ. ರೈತಪರ ಕಾಳಜಿ ಹೊಂದಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜಯಂತಿಯಂದೇ ಕರಾಳ ಕೃಷಿ ಕಾಯ್ದೆ ಹಿಂದಕ್ಕೆ ಪಡೆದಿರುವುದು ರೈತ ಪರ ಹೋರಾಟಕ್ಕೆ ಸಂದ ಜಯವಾಗಿದೆ. ಇದು ರೈತರ, ದೇಶದ ಎಲ್ಲ ನಾಗರಿಕರ ಮತ್ತು ಪ್ರಜಾಪ್ರಭುತ್ವದ ಗೆಲುವು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.