ADVERTISEMENT

ಬಿಜೆಪಿಯಲ್ಲೂ ಮೂರು ಗುಂಪುಗಳಿವೆ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 11:53 IST
Last Updated 7 ನವೆಂಬರ್ 2020, 11:53 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಎಲ್ಲ ಪಕ್ಷಗಳಲ್ಲೂ ಗುಂಪುಗಾರಿಕೆ ಇದ್ದೇ ಇದೆ. ಅದೇನು ಹೊಸದಲ್ಲ. ಬಿಜೆಪಿಯಲ್ಲೂ ಮೂರು ಗುಂಪುಗಳಿವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪ್ರತಿಯೊಬ್ಬ ನಾಯಕನಿಗೂ ಒಬ್ಬೊಬ್ಬರು ದೊಡ್ಡ ನಾಯಕರು ಇರುತ್ತಾರೆ. ಅವರೊಂದಿಗೆ ಗುರುತಿಸಿಕೊಂಡಿರುತ್ತಾರೆ. ಆದರೆ, ಪಕ್ಷವೆಂದು ಬಂದಾಗ ಎಲ್ಲರೂ ಒಗ್ಗಟ್ಟಾಗಿಯೇ ಕೆಲಸ ಮಾಡುತ್ತಾರೆ’ ಎಂದರು.

‘ಡಿಸಿಸಿ ಬ್ಯಾಂಕ್ ಚುನಾವಣೆ ವ್ಯಕ್ತಿಗತ ಗೌರವ ಮತ್ತು ವರ್ಚಸ್ಸಿನ ಮೇಲೆ ಅವಲಂಬಿಸಿರುತ್ತದೆ. ಖಾನಾಪುರ ನಿರ್ದೇಶಕರ ಸ್ಥಾನ ಗೆಲ್ಲುವ ಎಲ್ಲ ಅವಕಾಶಗಳಿದ್ದವು. ಆದರೆ, ಕೊನೆ ಕ್ಷಣದಲ್ಲಿ ಸಮಸ್ಯೆಯಾಗಿದ್ದರಿಂದ ಡಾ.ಅಂಜಲಿ ನಿಂಬಾಳ್ಕರ್‌ ಸೋತರು’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಡಿಸಿಸಿ ಬ್ಯಾಂಕ್‌ನಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಂತ ಬರುವುದಿಲ್ಲ. ಎಲ್ಲ ಪಕ್ಷದವರೂ ಸೇರಿ ಆಡಳಿತ ನಡೆಸುತ್ತಾರೆ. ಜಿಲ್ಲೆಯಲ್ಲಿ ಬಿಜೆಪಿ ನಾಯಕರು ಹೊಸದನ್ನೇನೋ ಮಾಡಲು ಹೊರಟಿದ್ದಾರೆ. ಆದರೆ, ವಿಶೇಷವೇನೂ ಆಗುವುದಿಲ್ಲ’ ಎಂದರು.

‘ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಬಂಧನದ ಹಿಂದೆ ರಾಜಕೀಯವಿದೆ. ಬಿಜೆಪಿಯವರು ಕಾಂಗ್ರೆಸ್‌ನವರನ್ನು ಟಾರ್ಗೆಟ್ ಮಾಡುತ್ತಲೇ ಇದ್ದಾರೆ. ಈ ವಿಚಾರವಾಗಿ ಆರೋಪ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ನ್ಯಾಯಾಲಯದಲ್ಲಿ ಏನು ತೀರ್ಪು ಬರುತ್ತದೆಯೋ ಅದೇ ಅಂತಿಮ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.