ಬೈಲಹೊಂಗಲ: ‘ಬಿಜೆಪಿಯವರು ಕೆಲಸ ಮಾಡದೇ ಪ್ರಚಾರ ಪಡೆಯುತ್ತಿದ್ದು, ಕಾಂಗ್ರೆಸ್‌ನವರಿಗೆ ಕೆಲಸ ಮಾಡಿದರೂ ಪ್ರಚಾರ ಸಿಗುತ್ತಿಲ್ಲ. ಸರ್ಕಾರ, ಸಚಿವರು, ಶಾಸಕರು ಮಾಡಿದ ಅಭಿವೃದ್ಧಿ ಕೆಲಸವನ್ನು ಯುವ ಕಾರ್ಯಕರ್ತರು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಆ ಮೂಲಕ ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಬೇಕು’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಕರೆ ನೀಡಿದರು.
ಇಲ್ಲಿನ ಬಿ.ಬಿ. ಗಣಾಚಾರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಬೆಳಗಾವಿ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಹಾಗೂ ಯುವಕರನ್ನು ಜಾಗೃತಗೊಳ್ಳಿಸಲು ‘ಯುವ ಪರ್ವ ಪ್ರತಿಜ್ಞೆ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಾಂಗ್ರೆಸ್ ಪಕ್ಷದಲ್ಲಿ 25 ಘಟಕಗಳಿವೆ. ಅದಲ್ಲಿ ಯುವ ಕಾಂಗ್ರೆಸ್ ಘಟಕವೂ ಒಂದು. ಈ ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಮಾತ್ರ ಪಕ್ಷ ಚುನಾವಣೆ ನಡೆಸುತ್ತದೆ. ಇನ್ನುಳಿದ ಪದಾಧಿಕಾರಿಗಳನ್ನು ನೇರವಾಗಿ ನೇಮಕ ಮಾಡಲಾಗುತ್ತಿದೆ. ಆದ್ದರಿಂದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಆಯ್ಕೆಯಾದ ಸರ್ವರೂ ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು’ ಎಂದರು.
ಸಚಿವೆ ಲಕ್ಮೀ ಹೆಬ್ಬಾಳಕರ ಮಾತನಾಡಿದರು. ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ್ ಪಾಟೀಲ, ವಿಶ್ವಾಸ ವೈದ್ಯ, ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ, ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕಾರ್ತಿಕ ಪಾಟೀಲ, ಭಾರತೀಯ ಯುವ ಕಾಂಗ್ರೆಸ್ ಮತ್ತು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ನಿಗಮ್ ಬಂಡಾರಿ, ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ ಮುಖಂಡರು ಇದ್ದರು.
‘2028ರ ಚುನಾವಣೆಗೆ ಸಜ್ಜಾಗಿ’
‘2028ರ ಚುನಾವಣೆ ಎದುರಿಸಲು ಇಂದಿನಿಂದಲೇ ಸಿದ್ದತೆ ನಡೆಸಿ ಚುನಾವಣೆಗೆ ಇನ್ನು ಮೂರು ವರ್ಷ ಕಾಲಾವಕಾಶ ಇದೆ. ಈ ಅಧಿಯಲ್ಲಿ ಎಷ್ಟು ಜನಕ್ಕೆ ನೀವು ಹತ್ತಿರ ಆಗುತ್ತೀರಿ. ಜನರ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ಕಲ್ಪಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ’ ಎಂದು ಸಚಿವ ಸತೀಶ ಹೇಳಿದರು. ‘ಕೇವಲ ಸಿ.ಎಂ ಸಚಿವರು ಬಂದಾಗ ರಸ್ತೆಯಲ್ಲಿ ಭಾವಚಿತ್ರ ಅಂಟಿಸಿದರೆ ಸಾಲದು. ಪ್ರಾಮಾಣಿಕಾವಾಗಿ ಪಕ್ಷದಲ್ಲಿ ಕೆಲಸ ಮಾಡಬೇಕು. ಯಾರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೋ ಅವರನ್ನು ಪಕ್ಷ ಖಂಡಿತ ಗುರುತಿಸುತ್ತದೆ’ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಲು ಯುವ ಕಾರ್ಯಕರ್ತರ ಶ್ರಮವೂ ಇದೆ. 2028ಕ್ಕೂ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ–ಮಂಜುನಾಥ ಗೌಡ, ಅಧ್ಯಕ್ಷ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್
ಯುವಜನರ ಕಾರ್ಯಕ್ಕೆ ನಮ್ಮ ಬೆಂಬಲ ಸದಾ ಇದೆ. ಕಾರ್ಯಕರ್ತರು ಸರ್ಕಾರದ ಯೋಜನೆಗಳನ್ನು ಜನತೆಗೆ ಮುಟ್ಟಿಸುವ ಕಾರ್ಯ ಮಾಡಬೇಕು–ಮಹಾಂತೇಶ ಕೌಜಲಗಿ, ಶಾಸಕ
ಯುವ ಕಾಂಗ್ರೆಸ್ ಕಾರ್ಯಕರ್ತರೇ ಪಕ್ಷದ ಭವಿಷ್ಯ. ಗಾಂಧಿ ತತ್ವ ಬಸವಣ್ಣನ ತತ್ವದಡಿಯಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯನಿರ್ವಹಿಸುತ್ತಿದೆ–ಲಕ್ಷ್ಮೀ ಹೆಬ್ಬಾಳಕರ, ಸಚಿವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.