ADVERTISEMENT

ಬೆಳಗಾವಿ: ಹಳ್ಳಿ ಶಾಲೆಗೆ ₹ 2 ಕೋಟಿ ಅನುದಾನ!

ಗಮನಸೆಳೆದಿರುವ ಸತ್ತಿಗೇರಿ ಕರ್ನಾಟಕ ಪಬ್ಲಿಕ್ ಸ್ಕೂಲ್

ಎಂ.ಮಹೇಶ
Published 29 ನವೆಂಬರ್ 2020, 7:10 IST
Last Updated 29 ನವೆಂಬರ್ 2020, 7:10 IST
ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಸತ್ತಿಗೇರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ‘ಅಟಲ್‌ ಟಿಂಕರಿಂಗ್ ಲ್ಯಾಬ್‌’ ಸಜ್ಜಾಗಿದೆ
ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಸತ್ತಿಗೇರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ‘ಅಟಲ್‌ ಟಿಂಕರಿಂಗ್ ಲ್ಯಾಬ್‌’ ಸಜ್ಜಾಗಿದೆ   

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಸತ್ತಿಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆಯು (ಕೆಪಿಎಸ್) ಬರೋಬ್ಬರಿ ₹ 2 ಕೋಟಿ ಅನುದಾನ ಗಳಿಸುವ ಮೂಲಕ ಗಮನಸೆಳೆದಿದೆ. ಹೀಗೆ ಅಭಿವೃದ್ಧಿ ಯೋಜನೆಗಳಿಗೆ ಇಷ್ಟು ದೊಡ್ಡ ಮೊತ್ತ ಪಡೆದ ರಾಜ್ಯದ ಕೆಲವೇ ಶಾಲೆಗಳಲ್ಲಿ ಒಂದಾಗಿದೆ.

ಕಳೆದ ಸಾಲಿನಿಂದ ಅಲ್ಲಿ ಕೆಪಿಎಸ್ ಆರಂಭಿಸಲಾಗಿದೆ. ಹಿಂದೆ 1ರಿಂದ 7ನೇ ತರಗತಿವರೆಗೆ ಇದ್ದ ಶಾಲೆಯು ಪ್ರಸ್ತುತ ಎಲ್‌ಕೆಜಿಯಿಂದ ಹಿಡಿದು 12ನೇ ತರಗತಿಗವರೆಗೂ ಮೇಲ್ದರ್ಜೆಗೇರಿದೆ. ಅದಕ್ಕ ತಕ್ಕಂತೆ ಬಲವರ್ಧನೆಗಾಗಿ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ಸರ್ಕಾರ ಆರ್ಥಿಕ ನೆರವನ್ನು ಒದಗಿಸುತ್ತಿದೆ. ಮೊದಲ ಕಂತಿನಲ್ಲಿ ₹ 1 ಕೋಟಿ ಬಿಡುಗಡೆಯಾಗಿದೆ. ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣ ಕಾಮಗಾರಿ ಆರಂಭಕ್ಕೆ ಸಿದ್ಧತೆ ನಡೆದಿದೆ.

‘ಹಳ್ಳಿಯಲ್ಲಿರುವ ನಮ್ಮ ಶಾಲೆಯು ಇಷ್ಟು ಅನುದಾನ ಪಡೆದಿರುವುದು ಹೆಮ್ಮೆಯ ವಿಷಯ. ಇದರಲ್ಲಿ ಹೆಚ್ಚುವರಿಯಾಗಿ 12 ತರಗತಿ ಕೊಠಡಿ, 2 ಸ್ಮಾರ್ಟ್‌ ಕ್ಲಾಸ್‌ಗಳು, ಗ್ರಂಥಾಲಯ, ಸಭಾಂಗಣ ನಿರ್ಮಿಸಲು ಯೋಜಿಸಲಾಗಿದೆ. ವಿಜ್ಞಾನದ ಪ್ರತಿ ವಿಷಯಗಳಿಗೂ ಪ್ರತ್ಯೇಕವಾಗಿ ಹಂತ ಹಂತವಾಗಿ ಲ್ಯಾಬ್,ಶಿಕ್ಷಕರು ಹಾಗೂ ಶಿಕ್ಷಕಿಯರಿಗೆ ಪ್ರತ್ಯೇಕ ಕೊಠಡಿಗಳು ಮತ್ತು ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ನಿರ್ಮಿಸುವ ಉದ್ದೇಶವಿದೆ. ಕೆಲ ವರ್ಷಗಳಲ್ಲಿ ಖಾಸಗಿ ಕಾನ್ವೆಂಟ್‌ಗಿಂತಲೂ ಕಡಿಮೆ ಇಲ್ಲದಂತೆ ಸಕಲ ಸೌಲಭ್ಯಗಳನ್ನೂ ಹೊಂದಲಿದೆ’ ಎಂದು ಉಪಪ್ರಾಂಶುಪಾಲ ಎಸ್‌.ಪಿ. ಕರಲಿಂಗಪ್ಪನವರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಅಟಲ್ ಟಿಂಕರಿಂಗ್ ಲ್ಯಾಬ್:

ಸತ್ತಿಗೇರಿ ಜೊತೆಗೆ ಇಲ್ಲಿಗೆ 4ರಿಂದ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಇಟ್ನಾಳ, ಗುಡಮಕೇರಿ, ಕುರುಬಗಟ್ಟಿ, ಕೊಡ್ಲಿವಾಡ ಹಾಗೂ ತಾವಲಗೆರೆ ಗ್ರಾಮಗಳ ಮಕ್ಕಳು ಬರುತ್ತಾರೆ. ಪ್ರಸ್ತುತ 1,181 ಮಂದಿ ದಾಖಲಾಗಿದ್ದಾರೆ. ಈಗ 1ರಿಂದ 2ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮ, 1ರಿಂದ 5ರವರೆಗೆ ಉರ್ದು ಮತ್ತು 1ರಿಂದ 12ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಬೋಧಿಸಲಾಗುತ್ತಿದೆ. ಹೋದ ಸಾಲಿಗೆ ಹೋಲಿಸಿದರೆ ಈ ಬಾರಿ 100 ಮಕ್ಕಳು ಹೆಚ್ಚುವರಿಯಾಗಿ ಪ್ರವೇಶ ಪಡೆದಿದ್ದಾರೆ. ಇವರ ಸಂಖ್ಯೆ 1ರಿಂದ 7ನೇ ತರಗತಿ ಕನ್ನಡ ಮಾಧ್ಯಮ ಹಾಗೂ ಪ್ರೌಢಶಾಲೆ ವಿಭಾಗದಲ್ಲಿ ಹೆಚ್ಚಿದೆ. ಎಲ್ಲ ವಿಭಾಗಗಳೂ ಸೇರಿ ಪ್ರಸ್ತುತ 45 ಕೊಠಡಿಗಳಿವೆ. 21 ಮಂದಿ ಶಿಕ್ಷಕರಿದ್ದಾರೆ. ಎಲ್‌ಕೆಜಿ ಹಾಗೂ ಯುಕೆಜಿಗೆ ತಲಾ 30 ಮಕ್ಕಳಿಗೆ ಅವಕಾಶವಿದೆ. ಶಾಲೆಯು ಶೈಕ್ಷಣಿಕವಾಗಿ ಅಭಿವೃದ್ಧಿ ಕಾಣುತ್ತಿರುವುದರಿಂದಾಗಿ ದಾಖಲಾತಿ ಪ್ರಮಾಣ ಹೆಚ್ಚಾಗುತ್ತಿದೆ ಎನ್ನುತ್ತಾರೆ ಶಿಕ್ಷಕರು.

ಮತ್ತೊಂದು ವಿಶೇಷವೆಂದರೆ, ಮಕ್ಕಳಲ್ಲಿ ವೈಜ್ಞಾನಿಕ ಹಾಗೂ ಸಂಶೋಧನಾ ಮನೋಭಾವ ಬೆಳೆಸಲು ಮತ್ತು ಕೌಶಲ ವೃದ್ಧಿ ಉದ್ದೇಶದಿಂದ ಇಲ್ಲಿಗೆ ‘ಅಟಲ್‌ ಟಿಂಕರಿಂಗ್ ಲ್ಯಾಬ್‌’ ದೊರೆತಿದೆ. ಕೋವಿಡ್ ಭೀತಿ ಕಳೆದು ಶಾಲೆಗಳು ಪುನರಾರಂಭವಾದಾಗ ಮಕ್ಕಳನ್ನು ಸ್ವಾಗತಿಸಲು ಅದು ಸಿದ್ಧವಾಗಿದೆ. ನ. 30ರಂದು ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಲ್ಯಾಬ್ ಹಾಗೂ ಕೋಟಿ ವೆಚ್ಚದಲ್ಲಿ ನಿರ್ಮಿಸಿದ 6 ಕೊಠಡಿಗಳನ್ನು ಉದ್ಘಾಟಿಸಲಿದ್ದಾರೆ.

ಸರ್ಕಾರವು ನಮ್ಮ ಶಾಲೆಗೆ ಹೆಚ್ಚಿನ ಅನುದಾನ ನೀಡಿರುವುದರಿಂದ, ಅತ್ಯಾಧುನಿಕ ಸೌಲಭ್ಯಗಳು ದೊರೆಯಲಿವೆ. ಇದರಿಂದಾಗಿ ಈ ಗ್ರಾಮೀಣ ಭಾಗದ ಮಕ್ಕಳ ಗುಣಮಟ್ಟದ ಕಲಿಕೆಗೆ ಅನುಕೂಲವಾಗಿದೆ.
ವಿಠ್ಠಲ ದಳವಾಯಿ
ಶಿಕ್ಷಕರು, ಸತ್ತಿಗೇರಿ ಕೆಪಿಎಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.