
ಸವದತ್ತಿ: ಲೋಕಾಪೂರದಿಂದ ರಾಮದುರ್ಗ, ಸವದತ್ತಿ ಮಾರ್ಗವಾಗಿ ಧಾರವಾಡ ತಲುಪುವ ರೈಲ್ವೆ ಮಾರ್ಗಕ್ಕಾಗಿ 2026ರ ಕೇಂದ್ರ ಬಜೆಟ್‌ನಲ್ಲಿ ಯೋಜನೆ ಅನುಷ್ಠಾನಕ್ಕಾಗಿ ಒತ್ತಾಯಿಸಿ ಇಲ್ಲಿನ ಗಾಂಧಿಚೌಕದಲ್ಲಿ ತಾಲ್ಲೂಕು ರೈಲ್ವೆ ಹೋರಾಟ ಕ್ರಿಯಾ ಸಮಿತಿಯಿಂದ ಗುರುವಾರ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.
ಸಮಿತಿ ಪ್ರಮುಖ ಪಕ್ರುಸಾಬ ನದಾಫ ಮಾತನಾಡಿ, ಲೋಕಾಪೂರ, ರಾಮದುರ್ಗ ಹಾಗೂ ಸವದತ್ತಿ ಕ್ಷೇತ್ರದ ಜನತೆಯಿಂದ ನಿರಂತರ ಹೋರಾಟ ನಡೆಸಲಾಗಿದೆ. ಸಂಸದರು ಹಾಗೂ ನೈರುತ್ಯ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿ ಒತ್ತಾಯಿಸಿದ ಪರಿಣಾಮ ರೈಲ್ವೆ ಅಧಿಕಾರಿಗಳು ಮತ್ತೊಮ್ಮೆ ಸಮೀಕ್ಷೆ ನಡೆಸಲು ಅನುಮತಿ ಕೋರಿ ಕೇಂದ್ರಕ್ಕೆ ತಿಳಿಸಿದ್ದು, ಕೇಂದ್ರ ಸರಕಾರವೇ ಪರಿಶೀಲಿಸಿ ಬಜೆಟ್‌ನಲ್ಲಿ ಮಂಜೂರು ನೀಡಬೇಕಿದೆ ಎಂದರು.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ರೈಲ್ವೆ ಯೋಜನೆಗಳು ಜಾರಿಗೆ ಬರಬೇಕೆಂದು ಹಲವಾರು ವರ್ಷಗಳಿಂದ ಹೋರಾಟಗಳು ನಡೆದಿವೆ. ಈಗಾಗಲೆ 2024ರ ಡಿಸೆಂಬರದಲ್ಲಿ ಸವದತ್ತಿ ಜನರಿಂದ ಬೃಹತ್ ಪ್ರಮಾಣದ ಹೋರಾಟ ನಡೆಸಲಾಗಿದೆ. ಆದರೆ ಕೇಂದ್ರ ಸರ್ಕಾರ ಸಮೀಕ್ಷೆಯ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘಟನಾ ಪ್ರಮುಖ ಎಲ್.ಎಸ್. ನಾಯಕ ಮಾತನಾಡಿ, ರೈಲ್ವೆ ಮಾರ್ಗದಿಂದ ಈ ಭಾಗದ ಧಾರ್ಮಿಕ ಕ್ಷೇತ್ರಗಳಾದ ಯಲ್ಲಮ್ಮ ದೇವಸ್ಥಾನ, ಶಿರಸಂಗಿ ಕಾಳಮ್ಮ, ಶಬರಿ ಕೊಳ್ಳ, ಗೊಡಚಿ ವೀರಭದ್ರೇಶ್ವರ ದೇವಸ್ಥಾನಗಳ ದರ್ಶನ ಮತ್ತು ಪ್ರವಾಸಿ ತಾಣಗಳ ಭೇಟಿ ಸುಗಮ ಮತ್ತು ಅಗ್ಗವಾಗಲಿದೆ. ಪ್ರವಾಸೋದ್ಯಮವಾಗಿ ಅಭಿವೃದ್ಧಿ ಹೊಂದಿ ವಿನೂತನ ಉದ್ದಿಮೆಗಳು ಸೃಷ್ಟಿಯಾಗಿ ಕ್ಷೇತ್ರವು ಆರ್ಥಿಕವಾಗಿಯೂ ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.
ಹೋರಾಟಗಾರ ಶ್ರೀಕಾಂತ ಹಟ್ಟಿಹೊಳಿ ಮಾತನಾಡಿ, ರೈಲ್ವೆ ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದ ಗಮನ ಸೆಳೆದು ರಾಜ್ಯದ ಸಂಸದರನ್ನು ಎಚ್ಚರಿಸಬೇಕಿದೆ. ಈಗ ಧರಣಿ ಸತ್ಯಾಗ್ರಹದ ಅನಿವಾರ್ಯತೆಯೂ ಇದೆ. ಯಲ್ಲಮ್ಮ ದೇವಸ್ಥಾನಕ್ಕೆ ವರ್ಷಕ್ಕೆ ಕೋಟಿಗೂ ಅಧಿಕ ಭಕ್ತರು ಆಗಮಿಸುತ್ತಾರೆ. ಇಲ್ಲಿನ ಜನರ ಆರ್ಥಿಕ ಬದುಕಿನಲ್ಲಿಯೂ ಭಕ್ತರ ಪಾಲು ಅಧಿಕವಾಗಿದೆ ಎಂದರು.
ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತುಬುದ್ದೀನ ಖಾಜಿ ಮಾತನಾಡಿ, ಕೇಂದ್ರದ ಪ್ರಸಕ್ತ ಬಜೆಟ್‌ನಲ್ಲಿ ಸಮೀಕ್ಷಾ ವರದಿಯ ಮಂಜೂರಾತಿ ನೀಡುವಂತೆ ಒತ್ತಾಯಿಸಲು ಮತ್ತೆ ತಾಲ್ಲೂಕಿನ ಜನತೆ ಆಂದೋಲನ ನಡೆಸಿ ಒತ್ತಡ ತರುವ ಅವಶ್ಯವಿದೆ ಎಂದರು.
ಬಸವರಾಜ ಕಪ್ಪಣ್ಣವರ, ಆರ್.ಬಿ. ಶಂಕರಗೌಡ್ರ, ನಿಂಗಪ್ಪ ಮೇಟಿ, ನಾಗಪ್ಪ ಪ್ರಭುನವರ, ರಾಜೇಶ್ವರಿ ರೇಣ್ಕಿಗೌಡರ, ರಾಜಶೇಕರ ನಿಡವಣಿ, ಮಲ್ಲು ಬೀಳಗಿ, ಹಾಗೂ ಸ್ಥಳೀಯ ಪ್ರಮುಖರು ಇದ್ದರು.
ಪರಶುರಾಮನ ವೇಷ
ಯಲ್ಲಮ್ಮ ಎಕ್ಸಪ್ರೆಸ್ ರೈಲು ಮಾರ್ಗಕ್ಕಾಗಿ ಕೇಂದ್ರದ ಗಮನ ಸೆಳೆಯಲು ಗುರುವಾರ ರೈಲು ಹೋರಾಟ ಪ್ರಮುಖ ಕುತುಬುದ್ದೀನ್ ಖಾಜಿ ಅವರು ತಾಲ್ಲೂಕಿನ ಯಲ್ಲಮ್ಮ ದೇವಸ್ಥಾನದ ಎಣ್ಣೆಹೊಂಡದಲ್ಲಿ ಪುಣ್ಯಸ್ನಾನ ಮಾಡಿ ಪರಶುರಾಮ ವೇಷಾಧಾರಿಯಾಗಿ ದೇವಿ ದರ್ಶನ ಪಡೆದರು. ನಂತರ ಪಾದಯಾತ್ರೆ ಮೂಲಕ ಜೋಗುಳ ಭಾವಿ ಸತ್ಯಮ್ಮದೇವಿ ದರ್ಶನ ಪಡೆದು ಗಾಂಧಿಚೌಕದಲ್ಲಿನ ಧರಣಿ ವೇದಿಕೆಗೆ ಆಗಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.