ADVERTISEMENT

ಬೆಳಗಾವಿ | ಒಳಮೀಸಲಾತಿಗೆ ಹೋರಾಟ ತೀವ್ರ

ಜಿಲ್ಲಾ ಮಾದರ ಮಹಾ ಒಕ್ಕೂಟದಿಂದ ಮಾನವ ಸರಪಳಿ, ಹಲಗೆ ಬಾರಿಸಿ ಸರ್ಕಾರಕ್ಕೆ ಎಚ್ಚರಿಕೆ, ಚನ್ನಮ್ಮ ವೃತ್ತದಲ್ಲಿ ಸಂಚಾರ ಬಂದ್‌

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 2:53 IST
Last Updated 2 ಆಗಸ್ಟ್ 2025, 2:53 IST
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಜಿಲ್ಲಾ ಮಾದರ ಮಹಾ ಒಕ್ಕೂಟದಿಂದ ಬೃಹತ್‌ ಪ್ರತಿಭಟನೆ ನಡೆಸಲಾಯಿತು  ಪ್ರಜಾವಾಣಿ ಚಿತ್ರ
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಜಿಲ್ಲಾ ಮಾದರ ಮಹಾ ಒಕ್ಕೂಟದಿಂದ ಬೃಹತ್‌ ಪ್ರತಿಭಟನೆ ನಡೆಸಲಾಯಿತು  ಪ್ರಜಾವಾಣಿ ಚಿತ್ರ   

ಬೆಳಗಾವಿ: ಸುಪ್ರೀಂಕೋರ್ಟ್‌ ನಿರ್ದೇಶನದಂತೆ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಮಾದರ ಮಹಾ ಒಕ್ಕೂಟದಿಂದ, ನಗರದಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್‌ ಉದ್ಯಾನದಲ್ಲಿ ಸೇರಿದ ಕಾರ್ಯಕರ್ತರು, ರಾಣಿ ಚನ್ನಮ್ಮ ವೃತ್ತದಲ್ಲಿ ಕೆಲಕಾಲ ಸಂಚಾರ ಬಂದ್ ಮಾಡಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ ಮನವಿ ಕೂಡ ಸಲ್ಲಿಸಿದರು. ಇದರಿಂದ ಗಂಟೆಗಳ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಮೆರವಣಿಗೆಯಲ್ಲಿ ಹಲಗೆ ಬಾರಿಸುತ್ತ, ಘೋಷಣೆ ಕೂಗುತ್ತ ಸಾಗಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ADVERTISEMENT

ಅವಕಾಶ ವಂಚಿತ ಸಮುದಾಯಗಳಿಗೆ ನ್ಯಾಯ ಒದಗಿಸಿ, ಕಾಂಗ್ರೆಸ್‌ನಲ್ಲಿ ಗೃಹಬಂಧನದಲ್ಲಿರುವ ಶಾಸಕರೇ ಹೊರಬನ್ನಿ, ಒಳಮೀಸಲಾತಿ ಮಾದಿಗರ ಹಕ್ಕು, ಒಳಮೀಸಲಾತಿ ನೀಡದ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ ಎಂಬ ಫಲಕಗಳನ್ನು ಪ್ರದರ್ಶಿಸಿದರು.

ನೇತೃತ್ವ ವಹಿಸಿದ್ದ ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ‘ಸುಪ್ರೀಂಕೋರ್ಟ್ 2020ರಲ್ಲಿಯೇ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ನೀಡಲು ಆದೇಶ ನೀಡಿದೆ. ಪಂಜಾಬ್‌, ತೆಲಂಗಾಣ, ಆಂಧ್ರದಲ್ಲಿ ಈಗಾಗಲೇ ಜಾರಿಯಾಗಿದೆ. ಆದರೆ, ಕರ್ನಾಟಕ ಸರ್ಕಾರ ವಿಳಂಬ ಮಾಡುತ್ತಿದೆ. ಇದು ತುಳಿತಕ್ಕೊಳಗಾದವರ ಆತಂಕಕ್ಕೆ ಕಾರಣವಾಗಿದೆ’ ಎಂದರು.

ಮಹಾ ಒಕ್ಕೂಟದ ಅಧ್ಯಕ್ಷ ರಾಜೇಂದ್ರ ಐಹೊಳೆ, ಮುಖಂಡರಾದ ಅನಂತಕುಮಾರ ಬ್ಯಾಕೂಡ, ಚಂದ್ರಕಾಂತ ಕಾದ್ರೊಳ್ಳಿ, ಅರುಣ ಐಹೊಳೆ, ಪ್ರಶಾಂತ ಐಹೊಳೆ, ಸಿದ್ದು ಮೇತ್ರಿ, ರಮೇಶ ಮಾದರ, ಬಸವರಾಜ ದೊಡ್ಡಮನಿ, ಉದಯ ರೆಡ್ಡಿ ಹಲವರು ನೇತೃತ್ವ ವಹಿಸಿದ್ದರು.

ಜನಸಂಖ್ಯೆಗೆ ಅನುಗುಣ ಮೀಸಲಾತಿ ನೀಡಿ ಒಳಮೀಸಲಾತಿ ಜಾರಿ ಕರ್ನಾಟಕದಲ್ಲೇ ವಿಳಂಬ ದಶಕಗಳು ಉರುಳಿದರೂ ಬೇಡಿಕೆಗೆ ಸ್ಪಂದಿಸದ ಸರ್ಕಾರಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.