ADVERTISEMENT

ಹೆಣ್ಣು ಮಕ್ಕಳ ‘ಜ್ಞಾನದೇಗುಲ’ ಈ ಬೆಳಗಾವಿಯ ಕಲ್ಲೋಳಿ ಶಾಲೆ

ಗಮನಸೆಳೆಯುತ್ತಿರುವ ಕಲ್ಲೋಳಿ ಶಾಲೆ

ಬಾಲಶೇಖರ ಬಂದಿ
Published 21 ಜೂನ್ 2019, 19:30 IST
Last Updated 21 ಜೂನ್ 2019, 19:30 IST
ಪ್ರಾರ್ಥನೆಗೆ ಸಿದ್ಧವಾಗಿರುವ ವಿದ್ಯಾರ್ಥಿನಿಯರು
ಪ್ರಾರ್ಥನೆಗೆ ಸಿದ್ಧವಾಗಿರುವ ವಿದ್ಯಾರ್ಥಿನಿಯರು   

ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಹೆಣ್ಣು ಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಪ್ರತಿ ವರ್ಷವೂ 500ಕ್ಕೂ ಹೆಚ್ಚಿನ ವಿದ್ಯಾರ್ಥಿನಿಯರ ದಾಖಲಾತಿಯುಳ್ಳ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಎಸ್‌ಡಿಎಂಸಿ ಸಹಕಾರ, ಗುಣಮಟ್ಟದ ಶಿಕ್ಷಣ, ಕಲಿಸುವುದರಲ್ಲಿ ಶಿಕ್ಷಕರು ವಿಶೇಷ ಕಾಳಜಿ ತೋರಿಸುತ್ತಿರುವುದರಿಂದ ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಈ ಶಾಲೆ ಮಿಂಚುತ್ತಿದೆ. ನೂರು ವರ್ಷಗಳ ಇತಿಹಾಸವನ್ನು ಇದು ಹೊಂದಿದೆ. ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಇಲಾಖೆಯು 1989ರಲ್ಲಿ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕವಾಗಿ ಈ ಶಾಲೆ ಪ್ರಾರಂಭಿಸಿತು. ಇಲ್ಲಿ ಸದ್ಯ 1ರಿಂದ 7ನೇ ತರಗತಿ, 12 ಶಿಕ್ಷಕರು ಇದ್ದಾರೆ. ನಲಿ-ಕಲಿಗಾಗಿಯೇ 5 ತರಗತಿಗಳು ನಡೆಯುತ್ತಿರುವುದು ಇಲ್ಲಿಯ ಇನ್ನೊಂದು ವಿಶೇಷ. 13 ವರ್ಷಗಳಿಂದ ಮುಖ್ಯ ಶಿಕ್ಷಕರಾಗಿರುವ ಸಿ.ಎಲ್. ಬಡಿಗೇರ ಸುಧಾರಣೆಗೆ ಶ್ರಮಿಸಿದ್ದಾರೆ.

ಹೆಣ್ಣು ಮಕ್ಕಳಿಗೆ ತಲೆದೋರುವ ಸಮಸ್ಯೆಗಳಿಗೆ ಶಿಕ್ಷಕಿಯರು ವಿಶೇಷ ಕಾಳಜಿ ವಹಿಸುತ್ತಾರೆ. ಶೌಚಾಲಯ, ನೀರಿನ ಸೌಲಭ್ಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಉತ್ತಮ ಕ್ಯಾಂಪಸ್‌ನಿಂದಾಗಿ ಈ ಶಾಲೆ ಗಮನಸೆಳೆಯುತ್ತದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ತಿಂಗಳಿಗೊಮ್ಮೆ ಪೂರಿ, ಇಡ್ಲಿ, ಜಾಮೂನು, ಸಿಹಿ ಬೂಂದಿ, ಹೋಳಿಗೆ ಮೊದಲಾದವುಗಳನ್ನು ಬಡಿಸುವುದು ವಿಶೇಷ. ಬೇಸಿಗೆ ರಜೆಯಲ್ಲಿ ಚಿತ್ರಕಲೆ, ಹಾಡು, ನೃತ್ಯ ಮತ್ತು ಜ್ಞಾನ ವೃದ್ಧಿಸುವ ಆಟಗಳಿಂದ ಮಕ್ಕಳಲ್ಲಿ ಕ್ರೀಯಾಶೀಲತೆ ಬೆಳೆಸುವ ಪ್ರಯತ್ನವನ್ನು ಶಿಕ್ಷಕರು ಮಾಡುತ್ತಿದ್ದಾರೆ.

ADVERTISEMENT

‘ನನಗ ಸಾಲಿಗೆ ಬರೂದಂದ್ರ ಬಾಳ ಖುಷಿ ಆಗತೈತ್ರೀ, ಟೀಚರಗೋಳು ಚಲೋ ಕಲಿಸ್ತಾರ್ರೀ.. ನಾ ಮುಂದ ಡಾಕ್ಟರ್ ಆಗತೀನ್ರೀ..' ಎಂದು 7ನೇ ತರಗತಿಯ ಕೃತಿಕಾ ದಬಾಡಿ ಕನಸು ಹಂಚಿಕೊಂಡರು. ಶಾಲೆಯಲ್ಲಿ ಪ್ರತಿ ನಿತ್ಯ ಮಕ್ಕಳ ಹಾಜರಾತಿ ಸಹ ಉತ್ತಮವಾಗಿದೆ ಮತ್ತು ಮಕ್ಕಳಲ್ಲಿ ಸಮವಸ್ತ್ರದ ಶಿಸ್ತುಬದ್ಧತೆ ಗಮನಸೆಳೆಯುತ್ತದೆ. ಇಲ್ಲಿಗೆ ಚಿಕ್ಕೋಡಿ ಡಿಡಿಪಿಐ ಮತ್ತು ಮೂಡಲಗಿ ಬಿಇಒ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ಕೊಟ್ಟು ಇಲ್ಲಿನ ವಾತಾವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರತಿ ವರ್ಷವೂ ಇಲ್ಲಿನ 20ರಿಂದ 25 ಮಕ್ಕಳು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾಗುತ್ತಾರೆ. ಆಯ್ಕೆಗಾಗಿ ಶಿಕ್ಷಕರು ತರಗತಿಯಲ್ಲಿಯೇ ವಿಶೇಷ ತರಬೇತಿ ನೀಡಿ ಸಿದ್ಧಗೊಳಿಸುತ್ತಾರೆ. ಹೀಗಾಗಿ ಪಾಲಕರು ಮಕ್ಕಳ ದಾಖಲಾತಿಗಾಗಿ ಈ ಶಾಲೆಗೆ ದಾಂಗುಡಿ ಇಡುತ್ತಾರೆ. ಮಕ್ಕಳ ದಾಖಲಾತಿ ಕುಸಿಯುತ್ತಿದೆ ಎಂದು ಸರ್ಕಾರಿ ಶಾಲೆಗಳ ಬಗ್ಗೆ ಮೂಗು ಮುರಿಯುವರಿಗೆ ಕಲ್ಲೋಳಿ ಹೆಣ್ಣು ಮಕ್ಕಳ ಶಾಲೆ ಸಮರ್ಥ ಪ್ರತ್ಯುತ್ತರ ನೀಡುತ್ತಿದೆ. ಈ ಭಾಗದ ‍ಪೋಷಕರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.