ಬೆಳಗಾವಿ: ಇಲ್ಲಿನ ಕಾಲೇಜು ರಸ್ತೆಯ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳು ಬುಧವಾರ ಸಂಜೆ ಸರ್ದಾರ್ ಪ್ರೌಢಶಾಲೆ ಮೈದಾನದಲ್ಲಿ ಪರಸ್ಪರ ಹೊಡೆದಾಡುತ್ತಿದ್ದುದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸಿನಿಮೀಯ ಮಾದರಿಯಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆಯಿತು. 30ಕ್ಕೂ ಹೆಚ್ಚು ಮಂದಿಯಿಂದಿಗೆ ವಿದ್ಯಾರ್ಥಿಗಳಲ್ಲದ ಕೆಲ ಯುವಕರು ಅಲ್ಲಿದ್ದರು. ಗಲಾಟೆಗೆ ಕುಮ್ಮಕ್ಕು ಕೊಡುತ್ತಿದ್ದರು. ಗಮನಿಸಿದ ದಾರಿಹೋಕರು ಎಷ್ಟು ಬುದ್ಧಿ ಹೇಳಿದರೂ, ಗದರಿಸಿದರೂ ಕೇಳುವ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಇರಲಿಲ್ಲ! ವಿದ್ಯಾರ್ಥಿಯೊಬ್ಬನನ್ನು ಗುಂಪೊಂದು ಮನಬಂದಂತೆ ಥಳಿಸಿತು. ಸಮವಸ್ತ್ರ ಧರಿಸಿಲ್ಲ ವ್ಯಕ್ತಿಯೂ ಹಲ್ಲೆ ಮಾಡಿದ. ಅವರಿಂದ ತಪ್ಪಿಸಿಕೊಂಡು ಬಂದ ಆತ, ‘ನನ್ನ ಕಡೆಯವರನ್ನು ಕರೆಸಿ ನಿಮಗೆ ಬುದ್ಧಿ ಕಲಿಸುತ್ತೇನೆ’ ಎಂದು ಹೇಳುತ್ತಿದ್ದ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆಯೇ ವಿದ್ಯಾರ್ಥಿಗಳು ಪರಾರಿಯಾದರು.
‘ಶಾಲೆ ಬಿಟ್ಟ ನಂತರ ಈ ವಿದ್ಯಾರ್ಥಿಗಳು ಆಗಾಗ ಜಗಳವಾಡುತ್ತಾರೆ. ಅದನ್ನು ನೋಡಿದರೆ ಆತಂಕವಾಗುತ್ತದೆ. ಬುದ್ಧಿ ಹೇಳಿದರೂ ಕೇಳುವುದಿಲ್ಲ’ ಎಂದು ಅಲ್ಲಿನ ಆಟೊಚಾಲಕರು ತಿಳಿಸಿದರು.
ಗಲಾಟೆಯ ವಿಡಿಯೊ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ವಿಡಿಯೊ ಸಂಗ್ರಹಿಸಿರುವ ಪೊಲೀಸರು, ‘ಗುರುವಾರ (ಸೆ.26) ಶಾಲೆಗೆ ಪೋಷಕರನ್ನು ಕರೆಸಿ ಸಭೆ ನಡೆಸಲಾಗುವುದು. ಸೂಚನೆ ನೀಡಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.