ADVERTISEMENT

ಮಕ್ಕಳಿಗೆ ಸಂಭ್ರಮದ ಸ್ವಾಗತ, ಸಿಹಿಯೂಟ

ತಳಿರು–ತೋರಣಗಳಿಂದ ಕಂಗೊಳಿಸಿದ ಶಾಲೆಗಳು

​ಪ್ರಜಾವಾಣಿ ವಾರ್ತೆ
Published 29 ಮೇ 2019, 12:17 IST
Last Updated 29 ಮೇ 2019, 12:17 IST
ಬೆಳಗಾವಿ ತಾಲ್ಲೂಕು ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿದರು
ಬೆಳಗಾವಿ ತಾಲ್ಲೂಕು ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿದರು   

ಬೆಳಗಾವಿ: ‌ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಶಾಲೆಗಳ ಪುನರಾರಂಭ ಕಾರ್ಯಕ್ರಮ ಬುಧವಾರ ಸಂಭ್ರಮದಿಂದ ನಡೆಯಿತು.

ಶಾಲೆಗಳನ್ನು ತಳಿರು–ತೋರಣಗಳಿಂದ ಸಿಂಗರಿಸಲಾಗಿತ್ತು. ಇದರಿಂದಾಗಿ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕೆಲವು ಕಡೆಗಳಲ್ಲಿ ಮಕ್ಕಳನ್ನು ಎತ್ತಿನಗಾಡಿಗಳಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಬಹುತೇಕ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ಸಿಹಿಯನ್ನು ಬಡಿಸಲಾಯಿತು.

ಸರ್ಕಾರದಿಂದ ಉಚಿತವಾಗಿ ನೀಡುವ ಪಠ್ಯಪುಸ್ತಕ, ಸಮವಸ್ತ್ರಗಳನ್ನು ವಿತರಿಸುವ ಕಾರ್ಯಕ್ರಮವೂ ನಡೆಯಿತು. ತಿಂಗಳಿಗೂ ಹೆಚ್ಚು ಕಾಲ ರಜೆ ಅನುಭವಿಸಿದ್ದ ಮಕ್ಕಳು, ಮತ್ತೆ ಪಾಠ–ಪ್ರವಚನ ಆಲಿಸಿ ಕಲಿಕೆಗೆ ಮರಳಿದರು.

ADVERTISEMENT

ನಗರದ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಹಾಗೂ ಉಚಿತ ಪಠ್ಯಪುಸ್ತಕ ವಿತರಣಾ ಸಮಾರಂಭ ನಡೆಯಿತು.

ಶಾಲೆಗೆ ಹೊಸದಾಗಿ ಪ್ರವೇಶ ಪಡೆದ 8 ಹಾಗೂ 9ನೇ ತರಗತಿಗಳ ವಿದ್ಯಾರ್ಥಿನಿಯರನ್ನು ಗುಲಾಬಿ ಹಾಗೂ ಸಿಹಿ ನೀಡಿ ಸ್ವಾಗತಿಸಲಾಯಿತು. 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.

ಪಾಲಕರ ಪ್ರತಿನಿಧಿಗಳಾಗಿ ಭಾಗವಹಿಸಿದ್ದ ಆರ್‌.ವಿ. ಶಿವಪ್ಪನವರ, ಗೌರವ ಅತಿಥಿಗಳಾಗಿ ಉದ್ಯಮಿ ಬಸವರಾಜ ಜಗಜಂಪಿ, ಎ.ಎಸ್. ಬಾಗೇವಾಡಿ ಹಾಗೂ ಸರಸ್ವತಿ ದೇಸಾಯಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯಶಿಕ್ಷಕ ಎಂ.ಕೆ. ಮಾದರ ಇದ್ದರು.

ಎಲ್.ಜಿ. ಯಳವಟಕರ ನಿರೂಪಿಸಿದರು. ವಿ.ವಿ. ಹನಮಗೊಂಡ ವಂದಿಸಿದರು.

ಕಾಲೇಜಿನಲ್ಲಿ: ನಗರದ ಗೋವಾವೇಸ್‌ನಲ್ಲಿರುವ ನಾಯ್ಕರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಟ್ಯಾಗೋರ್‌ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಕಾರ್ಯಕ್ರಮ ನಡೆಯಿತು.

ಪ್ರಾಚಾರ್ಯ ಡಾ.ಸಿ.ಎನ್. ನಾಯ್ಕರ ಮಾತನಾಡಿ, ‘ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡುವ ಧ್ಯೇಯೋದ್ದೇಶವಿದೆ. ಪಾಲಕರು ಮಕ್ಕಳಿಗೆ ಅವಶ್ಯವಿರುವ ಮೂಲಸೌಕರ್ಯಗಳನ್ನು ಮಾತ್ರ ನೀಡಬೇಕು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕಂತೆ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ’ ಎಂದು ತಿಳಿಸಿದರು.

ನಾಯ್ಕರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ವೇತಾ ಸಿ. ನಾಯ್ಕರ ಇದ್ದರು. ಉಮೇಶ ಸುಲ್ತಾನಪುರಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.