ADVERTISEMENT

ಅಭಿವೃದ್ಧಿಗೆ ವಿಜ್ಞಾನದ ಕೊಡುಗೆ ಅಪಾರ: ಡಾ.ಬಿ.ಟಿ. ಸುರೇಶ ಬಾಬು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 10:13 IST
Last Updated 1 ಮಾರ್ಚ್ 2021, 10:13 IST
ಬೆಳಗಾವಿಯ ಅಂಗಡಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಮಾದರಿಯನ್ನು ನಿರ್ದೇಶಕಿ ಸ್ಫೂರ್ತಿ ಪಾಟೀಲ ವೀಕ್ಷಿಸಿದರು
ಬೆಳಗಾವಿಯ ಅಂಗಡಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಮಾದರಿಯನ್ನು ನಿರ್ದೇಶಕಿ ಸ್ಫೂರ್ತಿ ಪಾಟೀಲ ವೀಕ್ಷಿಸಿದರು   

ಬೆಳಗಾವಿ: ‘ಮಾನವನ ಉಳಿವು ಹಾಗೂ ಅಭಿವೃದ್ಧಿಗೆ ವಿಜ್ಞಾನದ ಕೊಡುಗೆ ಅಪಾರವಾಗಿದೆ’ ಎಂದು ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಕಾಲೇಜಿನ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಬಿ.ಟಿ. ಸುರೇಶ ಬಾಬು ಹೇಳಿದರು.

ನಗರದ ಅಂಗಡಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾನವನ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿರುವ ವಿಜ್ಞಾನವು ಶಿಲಾಯುಗದ ಕಾಲದಿಂದಲೇ ಶುರುವಾಗಿ ಸತತ ಪ್ರಯೋಗ, ಪ್ರಯತ್ನಗಳಿಂದ ಬೆಳೆದು ಈಗಿನ ಹಂತಕ್ಕೆ ಬಂದಿದೆ. ವಿಜ್ಞಾನಕ್ಕಾಗಿ ಮಾನವ ಮತ್ತು ಮಾನವನಿಗಾಗಿ ವಿಜ್ಞಾನ ಎಂಬುದು ಸದಾ ಸತ್ಯವಾದುದು’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕಿ ಡಾ.ಸ್ಫೂರ್ತಿ ಪಾಟೀಲ, ‘ನಮ್ಮ ಸಂಸ್ಥೆಯು ಮಕ್ಕಳು ವಿಜ್ಞಾನಿಗಳಾಗಿ ಹೊರಹೊಮ್ಮುವಂತಾಗಲು ವೇದಿಕೆ ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿಗಳು ಆವಿಷ್ಕಾರ ಮತ್ತು ಸಂಶೋಧನೆಯನ್ನು ಕೈಗೊಳ್ಳಲು ಶಾಲೆಯಲ್ಲಿ ಸರ್ಕಾರದಿಂದ ಅಟಲ್ ಟಿಂಕರಿಂಗ್ ಲ್ಯಾಬ್‌ ಪಡೆಯಲಾಗಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಂಗಡಿ ತಾಂತ್ರಿಕ ಕಾಲೇಜು, ಅಂಗಡಿ ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜು ಮತ್ತು ಅಂಗಡಿ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ ವಿದ್ಯಾರ್ಥಿಗಳು ವಿವಿಧ ಮಾದರಿಗಳನ್ನು ಪ್ರದರ್ಶಿಸಿದರು. ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಮಂಗಲಾ ಅಂಗಡಿ, ಆಡಳಿತಾಧಿಕಾರಿ ರಾಜು ಜೋಶಿ, ಅಂಗಡಿ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ.ಆನಂದ ದೇಶಪಾಂಡೆ, ಲಕ್ಷ್ಮಿ ಸಾಂಗಲಿ, ವಿನಾಯಕ ಜ್ಯೋತಿ, ಕುಂದನ ನಾಯಿಕ ಇದ್ದರು.

ಅಂಗಡಿ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ ಪ್ರಾಚಾರ್ಯ ಪ್ರೊ.ಎಚ್.ಎಸ್. ಪಾಟೀಲ ಸ್ವಾಗತಿಸಿದರು. ಅಂಗಡಿ ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಪ್ರೊ.ಸಂಗೀತಾ ದೇಸಾಯಿ ಪರಿಚಯಿಸಿದರು. ವಿದ್ಯಾ ಹುರುಡೆ ನಿರೂಪಿಸಿದರು. ಮುಖ್ಯಶಿಕ್ಷಕಿ ಆಶಾ ರಜಪೂತ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.