
ಹೊನಗಾ (ಬೆಳಗಾವಿ ಜಿಲ್ಲೆ): ‘ದೇಶದಲ್ಲಿ ಶಿಕ್ಷಣವಂತರ ಸಂಖ್ಯೆ ಹೆಚ್ಚಾದಂತೆ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಉನ್ನತ ಶಿಕ್ಷಣ ಪಡೆದ ಹಲವರು ಡಕಾಯತರಾಗಿ, ಭಯೋತ್ಪಾದಕರಾಗಿ ಕಂಟಕವಾಗಿದ್ದಾರೆ. ಶಿಕ್ಷಣದ ಜತೆಗೇ ಸ್ಕೌಟ್ಸ್ ಮತ್ತು ಗೈಡ್ಸ್‌ನಂಥ ತರಬೇತಿ ನೀಡಿದರೆ ಮಾತ್ರ ಉತ್ತಮ ನಾಗರಿಕರನ್ನು ತಯಾರು ಮಾಡಬಹುದು’ ಎಂದು ವಿಧಾನಸಭಾಧ್ಯಕ್ಷ, ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್‌ನ ಆಯುಕ್ತರೂ ಆದ ಯು.ಟಿ.ಖಾದರ್ ಕಿವಿಮಾತು ಹೇಳಿದರು.
ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್‌ನ ಬೆಳಗಾವಿ ಜಿಲ್ಲಾ ಸಂಸ್ಥೆಯ ನೇತೃತ್ವದಲ್ಲಿ ಆಯೋಜಿಸಿದ್ದ ‘ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್–2025’ ಕಾರ್ಯಕ್ರಮಕ್ಕೆ, ಹೊನಗಾ ಗ್ರಾಮದಲ್ಲಿ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ದೇಶ ಈಗ ಸುಶಿಕ್ಷಿತರನ್ನು ಹೊಂದಿದೆ. ಅದಾಗಿಯೂ ಅಪರಾಧ ಕೃತ್ಯಗಳು ಕಡಿಮೆಯಾಗಿಲ್ಲ. ಶಿಕ್ಷಣದ ಜತೆಗೆ ಸ್ಕೌಟ್ಸ್, ಗೈಡ್ಸ್‌ನಂಥ ತರಬೇತಿ ನೀಡದೇ ಇರುವುದೇ ಇದಕ್ಕೆ ಕಾರಣ ಇರಬಹುದು. ಮಕ್ಕಳನ್ನು ಹೆತ್ತವರು ತಮ್ಮ ಆಸ್ತಿ ಎಂದು ಭಾವಿಸಿ ತಪ್ಪು ಮಾಡುತ್ತಾರೆ. ಮಕ್ಕಳು ದೇಶದ ಆಸ್ತಿ ಎಂಬುದನ್ನು ಮನಗಾಣಬೇಕು’ ಎಂದರು.
‘ಸಂಸತ್ತಿನಲ್ಲಿ ಕುಳಿತ ಸಂಸದರೋ, ವಿಧಾನಸಭೆಯಲ್ಲಿನ ಶಾಸಕರೋ, ಎ.ಸಿ ರೂಮ್‌ಗಳಲ್ಲಿ ಕುಳಿತ ಅಧಿಕಾರಿಗಳೋ ಬಲಿಷ್ಠರಾದರೆ ದೇಶ ಬಲಿಷ್ಠ ಆಗುವುದಿಲ್ಲ. ತರಗತಿಗಳಲ್ಲಿ ಕುಳಿತ ಮಕ್ಕಳು ಬಲಿಷ್ಠರಾದರೆ ಮಾತ್ರ ಬಲಿಷ್ಠ ದೇಶ ಕಟ್ಟಲು ಸಾಧ್ಯ’ ಎಂದೂ ಅವರು ತಿಳಿಹೇಳಿದರು.
‘ನಾನು ಕೂಡ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಹೊಂದಿದ ವಿದ್ಯಾರ್ಥಿ ಆಗಿದ್ದೇನೆ. ಅದೇ ಕಾರ್ಯಕ್ರಮಕ್ಕೆ ಸಚಿವನಾಗಿ, ವಿಧಾನಸಭಾಧ್ಯಕ್ಷನಾಗಿ ಸಾಕಷ್ಟು ಸಾರಿ ಭಾಗವಹಿಸಿದ್ದೇನೆ. ನನ್ನ ಬೆಳವಣಿಗೆಗೆ ಅಡಿಪಾಯ ಹಾಕಿದ್ದೇ ಸ್ಕೌಟ್ಸ್ ಮತ್ತು ಗೈಡ್ಸ್’ ಎಂದು ಅವರು ಬಾಲ್ಯವನ್ನು ಮೆಲುಕು ಹಾಕಿದರು.
ಖಾದರ್ ಅವರು ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಸತೀಶ ಜಾರಕಿಹೊಳಿ, ಮಧು ಬಂಗಾರಪ್ಪ, ಶಾಸಕ ಆಸಿಫ್ ಸೇಠ್ ಅವರೊಂದಿಗೆ ತೆರೆದ ವಾಹನದಲ್ಲಿ ತೆರಳಿ ಚಿಣ್ಣರ ಗೌರವ ವಂದನೆ ಸ್ವೀಕರಿಸಿದರು.
ಭೂತರಾಮನಹಟ್ಟಿಯ ಮುಕ್ತಿಮಠದ ಶಿವಸಿದ್ಧ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಪೊಲೀಸ್ ಆಯುಕ್ತ ಭೂಷಣ ಭೊರಸೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಅಂತರರಾಷ್ಟ್ರೀಯ ಹೆಚ್ಚುವರಿ ಆಯುಕ್ತ ಎ.ಎಸ್. ಮಧುಸೂದನ್, ನ್ಯಾಷನಲ್ ಕಮಿಷನರ್ ಕೆ.ಕೆ.ಖಂಡೇಲವಾಲ್, ಎಂ.ಎ.ಖಾಲಿದ್, ರಾಜ್ಯ ಸಹಾಯಕ ಆಯುಕ್ತೆ ಪ್ರಭಾವತಿ ಪಾಟೀಲ, ಡಿಡಿಪಿಐ ಲೀಲಾವತಿ ಹಿರೇಮಠ, ಜಿಲ್ಲಾ ಮುಖ್ಯ ಆಯುಕ್ತ ಗಜಾನನ ಮನ್ನಿಕೇರಿ, ರಾಜ್ಯ ಸಂಘಟನಾ ಆಯುಕ್ತೆ ಮಂಜುಳಾ ಹಲವರು ಇದ್ದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜೀವನದಲ್ಲಿ ಉತ್ತಮ ಪಾಠ ಕಲಿಸಿಕೊಡುತ್ತದೆ. ಐದು ದಿನಗಳ ತರಬೇತಿ ಪಡೆದು ಮಕ್ಕಳು ಭವಿಷ್ಯದ ನಾಯಕರಾಗಿ ಬೆಳೆಯಬೇಕುಬಸವರಾಜ ಹೊರಟ್ಟಿ ವಿಧಾನ ಪರಿಷತ್ ಸಭಾಪತಿ
ವಿದ್ಯಾರ್ಥಿಗಳಿಗೆ ಶಾಲಾ ಚಟುವಟಿಕೆಗಳ ಜೊತೆಗೆ ದೈಹಿಕ ಮಾನಸಿಕವಾಗಿ ಉತ್ತೇಜನೆ ನೀಡುವ ಕೆಲಸ ಇಲ್ಲಿ ನಡೆಯುತ್ತಿದೆ. ಶಿಸ್ತುಬದ್ಧ ಜೀವನ ನಡೆಸಲು ಅನುಕೂಲಜಗದೀಶ ಶೆಟ್ಟರ್ ಸಂಸದ
ಕೌಶಲ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಲು ಇಂಥ ತರಬೇತಿಗಳು ಅಗತ್ಯ. ಸರ್ಕಾರದಿಂದ ಮುಂದೆ ಹೆಚ್ಚು ಸೌಕರ್ಯ ನೀಡಲಾಗುವುದು ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ
ಧರ್ಮಾತೀತ ಜಾತ್ಯತೀತವಾದ ಅಧ್ಯಾತ್ಮದವನ್ನು ಸ್ಕೌಟ್ಸ್– ಗೈಡ್ಸ್ ಕಲಿಸುತ್ತದೆ. ಸಾಮಾಜಿಕ ಜವಾಬ್ದಾರಿ ಶಿಸ್ತಿನ ಜೀವನ ಪರಿಸರಪ್ರಿಯ ನಡತೆ ನಮ್ಮ ಉದ್ದೇಶಪಿ.ಜಿ.ಆರ್.ಸಿಂಧ್ಯ ರಾಜ್ಯ ಮುಖ್ಯ ಆಯುಕ್ತ ಸ್ಕೌಟ್ಸ್ ಮತ್ತು ಗೈಡ್ಸ್
‘ರಾಜ್ಯದ ಎಲ್ಲ ಶಾಲೆಗಳಿಗೂ ವಿಸ್ತರಣೆ’
‘ಸಾಧ್ಯವಾದರೆ ರಾಜ್ಯದ ಎಲ್ಲ ಶಾಲೆಗಳಲ್ಲೂ ಸ್ಕೌಟ್ಸ್ ಮತ್ತು ಗೈಡ್ಸ್ ತರಲಾಗುವುದು. ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಲ್ಲಿ ಮೊದಲು ಕಡ್ಡಾಯ ಮಾಡಲಾಗವುದು’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ‘ಈ ತರಬೇತಿ ಇಷ್ಟು ಶಿಸ್ತಿನಿಂದ ಕೂಡಿರುತ್ತದೆ ಎಂದು ನಾನು ಊಹಿಸಿರಲಿಲ್ಲ. ಮಕ್ಕಳನ್ನು ನೋಡಿ ನನ್ನ ತಪ್ಪಿನ ಅರಿವಾಗಿದೆ. ನಾನು ತಡವಾಗಿ ಸ್ಪಂದಿಸುತ್ತಿದ್ದೇನೆ. ಆದರೆ ಇದಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಖಚಿತ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.