ADVERTISEMENT

ಪ್ರಶಸ್ತಿಗಳ ಆಯ್ಕೆ ಸ್ವರೂಪ ಬದಲಾಗಬೇಕು

ಸಾಹಿತಿ ಪ್ರೊ.ಮಾಲತಿ ಪಟ್ಟಣಶೆಟ್ಟಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 10:28 IST
Last Updated 5 ಜನವರಿ 2021, 10:28 IST
ಬೆಳಗಾವಿಯಲ್ಲಿ ಗಳಗನಾಥ ಹಾಗೂ ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನದಿಂದ ಮಂಗಳವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ‘ರಂಗಸಂಪದ’ ಅಧ್ಯಕ್ಷ ಡಾ.ಅರವಿಂದ ಕುಲಕರ್ಣಿ ಉದ್ಘಾಟಿಸಿದರುಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಗಳಗನಾಥ ಹಾಗೂ ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನದಿಂದ ಮಂಗಳವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ‘ರಂಗಸಂಪದ’ ಅಧ್ಯಕ್ಷ ಡಾ.ಅರವಿಂದ ಕುಲಕರ್ಣಿ ಉದ್ಘಾಟಿಸಿದರುಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಇತ್ತೀಚಿನ ವರ್ಷಗಳಲ್ಲಿ ಜನರಿಗಿಂತಲೂ ಪ್ರಶಸ್ತಿಗಳ ಸಂಖ್ಯೆಯೇ ಜಾಸ್ತಿಯಾಗಿದೆ. ಅವುಗಳ ಮೌಲ್ಯ ಕುಸಿಯುತ್ತಿದೆ. ಹೀಗಾಗಿ, ಆಯ್ಕೆಯ ಸ್ವರೂಪ ಬದಲಾಗಬೇಕು’ ಎಂದು ಸಾಹಿತಿ ಪ್ರೊ.ಮಾಲತಿ ಪಟ್ಟಣಶೆಟ್ಟಿ ಹೇಳಿದರು.

ಹಾವೇರಿಯ ಗಳಗನಾಥ ಹಾಗೂ ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನವು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ ಬಸವರಾಜ ಕಟ್ಟೀಮನಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಗಳಗನಾಥ ಸಾಹಿತ್ಯ’ ಮತ್ತು ‘ನಾ.ಶ್ರೀ. ರಾಜಪುರೋಹಿತ ಸಂಶೋಧಕ’ ‍ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವರ್ಷದ ಅತ್ಯುತ್ತಮ ಕೃತಿಗಳಿಗೆ ಪ್ರಶಸ್ತಿ ಕೊಡುವುದಕ್ಕಿಂತ, ಆಯಾ ಪ್ರತಿಷ್ಠಾನದ ಮಹನೀಯರ ಕುರಿತ ಸಂಶೋಧನೆ ಆಧರಿತ ಕೃತಿಗಳನ್ನು ಪರಿಗಣಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಪ್ರಚಲಿತ ವಿದ್ಯಮಾನ ದಾಖಲಾಗಲಿ:

‘ಪ್ರಚಲಿತ ವಿದ್ಯಮಾನಗಳು ದಾಖಲಾಗಬೇಕು. ಈಗ, ಕೊರೊನಾ, ರೈತ ಚಳವಳಿ ಮೊದಲಾದವುಗಳ ಬಗ್ಗೆ ಕಾದಂಬರಿ ಬರೆಯಬಹುದು. ವಿಜ್ಞಾನ ಆಧರಿತ ಕಥೆ ಹಾಗೂ ಕಾದಂಬರಿಗಳು ತೀರಾ ಕಡಿಮೆಯಾಗಿವೆ. ಲೇಖಕರು ಅವುಗಳತ್ತ ಗಮನಹರಿಸಬೇಕು. ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಸಾಹಿತ್ಯ ಹೆಚ್ಚಿನ ಪ್ರಮಾಣದಲ್ಲಿ ಬರಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಮುಂಬೈ ಕರ್ನಾಟಕದಲ್ಲಿ ನಮ್ಮನ್ನು (ಕನ್ನಡಿಗರನ್ನು) ಹಿಂದೆ ಮರಾಠಿ ಆಡಳಿತ ಬಹಳ ನೋಯಿಸಿದೆ. ಅವಮಾನಿಸಿದೆ. ಅವಹೇಳನ ಮಾಡಿದೆ. ಅದನ್ನು ಕ್ಷಮಿಸುವುದಿಲ್ಲ. ನ.1ರಂದು ನಾವು ರಾಜ್ಯೋತ್ಸವ ಆಚರಿಸುವಾಗ, ಕೆಲವರು ಕರಾಳ ದಿನ ಮಾಡುತ್ತಾರೆ. ಅವರು ಮತ್ತೆ ಮತ್ತೆ ಚುಚ್ಚಿ ಗಾಯಗೊಳಿಸುತ್ತಿರುವುದು ವಿಷಾದನೀಯ. ಬ್ರಿಟಿಷರ ಆಡಳಿತವನ್ನು ಒಪ್ಪಬಹುದು. ಆದರೆ, ಮರಾಠಿಗರು ತಮ್ಮ ಆಡಳಿತದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಿದರು. ಬಹಳ ತೊಂದರೆ ಕೊಟ್ಟರು. ಅದನ್ನು ಮೆಚ್ಚಲಾಗದು’ ಎಂದು ಹೇಳಿದರು.

ಕೂಡಿ ಆಚರಿಸುವಂತಾಗಲಿ

‘ಬೆಳಗಾವಿಯಲ್ಲಿ ರೊಟ್ಟಿಯನ್ನು ಕನ್ನಡ ಹಾಗೂ ಮರಾಠಿ ಭಾಷಿಕರಿಬ್ಬರೂ ಹಂಚಿ ತಿನ್ನುವ ಭಾವನೆ ಬರಬೇಕು. ಕನ್ನಡ ರಾಜ್ಯೋತ್ಸವವನ್ನು ಎಲ್ಲರೂ ಕೂಡಿ ಸಂಭ್ರಮದಿಂದ ಆಚರಿಸುವಂತಾಗಬೇಕು’ ಎಂದು ಆಶಿಸಿದರು.

‘ಗಳಗನಾಥ (ವೆಂಕಟೇಶ ಕುಲಕರ್ಣಿ) ಹಾಗೂ ನಾ.ಶ್ರೀ. ರಾಜಪುರೋಹಿತ ಇಬ್ಬರಲ್ಲೂ ಸಾಮ್ಯತೆ ಇದೆ. ಇಬ್ಬರೂ ಬಡತನದಲ್ಲಿದ್ದರೂ ಕನ್ನಡಕ್ಕಾಗಿ ಅಪಾರ ಕೊಡುಗೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಅವರು ತಾಯಿ ಸ್ವರೂಪಿಗಳು. ಪ್ರಸಿದ್ಧಿ ಅಥವಾ ಹಣ ಬಯಸದೆ ನಿಸ್ವಾರ್ಥದಿಂದ ಕನ್ನಡ ಸೇವೆ ಮಾಡಿದ್ದಾರೆ. ಒಬ್ಬರು ಕಾದಂಬರಿ ಪಿತಾಮಹ. ಇನ್ನೊಬ್ಬರು ಸಂಶೋಧನಾ ದಿಗ್ಗಜ’ ಎಂದು ಸ್ಮರಿಸಿದರು.

ಪ್ರಶಸ್ತಿ ಪ್ರದಾನ ಮಾಡಿದ ಆರ್‌ಸಿಯು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ, ‘ಕನ್ನಡದ ಕೆಲಸಗಳಿಗೆ ವಿಶ್ವವಿದ್ಯಾಲಯ ಸದಾ ಸಹಕಾರ ನೀಡಲಿದೆ’ ಎಂದರು.

ಉದ್ಘಾಟಿಸಿದ ರಂಗ ಸಂಪದ ಅಧ್ಯಕ್ಷ ಡಾ.ಅರವಿಂದ ಕುಲಕರ್ಣಿ, ಪ್ರಶಸ್ತಿ ಸ್ವೀಕರಿಸಿದ ಡಾ.ಹನುಮಾಕ್ಷಿ ಗೋಗಿ ಮತ್ತು ಡಾ.ಬಾಳಾಸಾಹೇಬ ಲೋಕಾಪುರ ಮಾತನಾಡಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಹಾಗೂ ನಿವೃತ್ತ ಪ್ರಾಚಾರ್ಯೆ ಡಾ.ಸ್ಮಿತಾ ಸುರೇಬಾನಕರ ಪ್ರಶಸ್ತಿ ಪುರಸ್ಕೃತರನ್ನು ಬಗ್ಗೆ ಅಭಿನಂದನಾ ನುಡುಗಳನ್ನಾಡಿದರು.

ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ದುಶ್ಯಂತ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು. ಆರ್‌ಸಿಯು ಕನ್ನಡ ವಿಭಾಗದ ಪ್ರೊ.ಗಂಗಾಧರಯ್ಯ ಇದ್ದರು. ಸದಸ್ಯ ಕಾರ್ಯದರ್ಶಿ ಶಶಿಕಲಾ‍ ಹುಡೇದ ಸ್ವಾಗತಿಸಿದರು. ಡಾ.ಗುರುದೇವಿ ಹುಲೆಪ್ಪನವರಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.