ADVERTISEMENT

ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಪ್ರತ್ಯೇಕ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 15 ಮೇ 2021, 12:44 IST
Last Updated 15 ಮೇ 2021, 12:44 IST

ಬೆಳಗಾವಿ: ‘ಕೋವಿಡ್ -19 ತುರ್ತು ಪರಿಸ್ಥಿತಿಯಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳಿಗೆ ಹೊಸದಾಗಿ ದಾಖಲಾದ ಮಕ್ಕಳಿಗೆ ಸುರಕ್ಷತೆ ದೃಷ್ಟಿಯಿಂದ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ‌ಮಕ್ಕಳ‌ ರಕ್ಷಣಾ ಘಟಕದ ಅಧ್ಯಕ್ಷ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಮಕ್ಕಳ ಪಾಲನಾ ಸಂಸ್ಥೆಗಳಿಗೆ ಹೊಸದಾಗಿ ದಾಖಲಾಗುವ ಮಕ್ಕಳನ್ನು 2 ವಾರಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲು ಮತ್ತು ಕೋವಿಡ್-19 ರೋಗಕ್ಕೆ ತುತ್ತಾಗಿ ತಂದೆ-ತಾಯಿ, ತಾಯಿ ಅಥವಾ ತಂದೆ ಹಾಗೂ ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಪುನರ್ವಸತಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015ರಲ್ಲಿ ರಕ್ಷಣೆ ಮಾಡಲಾದ ಮತ್ತು ಬಾಲಮಂದಿರಗಳಲ್ಲಿ ರಕ್ಷಣೆ ಪಡೆಯುತ್ತಿರುವ ಮಕ್ಕಳ ಅಭಿರಕ್ಷಣೆ‌ ಮಾಡಲಾಗುವುದು’ ಎಂದು ಹೇಳಿದ್ದಾರೆ.

‘ಹೊಸದಾಗಿ ದಾಖಲಾದ ಮಕ್ಕಳನ್ನು ಕ್ವಾರಂಟೈನ್‌ನಲ್ಲಿ ಸುರಕ್ಷಿತವಾಗಿ ನೋಡಿಕೊಳ್ಳಲು ಅಗತ್ಯ ಮೂಲಸೌಕರ್ಯಗಳನ್ನು ಹೊಂದಿರುವ ಮೂರು ಸಂಸ್ಥೆಗಳನ್ನು ಅರ್ಹ ಸಂಸ್ಥೆಗಳೆಂದು ಗುರುತಿಸಿ, ಆಯ್ಕೆ ಮಾಡಲಾಗಿದೆ. ಬಾಲಕರಿಗಾಗಿ ಶಿವಾಜಿ ನಗರದ 3ನೇ ಕ್ರಾಸ್‌ನಲ್ಲಿರುವ ಬಾಲಕರ ಸರ್ಕಾರಿ ಬಾಲಮಂದಿರ ಹಾಗೂ ಬಾಲಕಿಯರಿಗಾಗಿ ಮಹಾಂತೇಶ ನಗರದಲ್ಲಿರುವ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಯ ‘ಸೃಷ್ಟಿ’ ಮಕ್ಕಳ ತೆರೆದ ತಂಗುದಾಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಕೋವಿಡ್‌ನಿಂದ ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಪುನರ್ವಸತಿಗೆ ಸುಭಾಷ್ ನಗರದ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನವನ್ನು ಆಯ್ಕೆ‌ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.