ADVERTISEMENT

ಬೆಳಗಾವಿ: ಲೈಂಗಿಕ ವೃತ್ತಿನಿರತ ಮಹಿಳೆಯರಿಗೆ ‘ನೆಲೆ’

‘ಶಕ್ತಿ’ ಕಟ್ಟಡದ ಉದ್ಘಾಟನೆ ಜ.7ರಂದು

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 14:56 IST
Last Updated 6 ಜನವರಿ 2022, 14:56 IST

ಗೋಕಾಕ: ಲೈಂಗಿಕ ವೃತ್ತಿನಿರತ ಮಹಿಳೆಯರು ಸ್ವಂತ ‘ನೆಲೆ’ ಕಂಡುಕೊಳ್ಳುವ ಕಾರ್ಯ ಇಲ್ಲಿ ನಡೆದಿದೆ.

‘ಶಕ್ತಿ’ ಏಡ್ಸ್‌ ತಡೆಗಟ್ಟುವ ಮಹಿಳಾ ಸಂಘದಿಂದ ಸತೀಶ ನಗರ 5ನೇ ಕ್ರಾಸ್‌ನಲ್ಲಿ ನಿರ್ಮಿಸಿರುವ ಕಟ್ಟಡದ ಉದ್ಘಾಟನಾ ಸಮಾರಂಭ ಜ.7ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ಹಿತೈಷಿಯೂ ಆಗಿರುವ ಸಂಶೋಧಕಿ ಲೀಲಾ ಸಂಪಿಗೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಏಡ್ಸ್‌ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸಂಘ ಕಾರ್ಯನಿರ್ವಹಿಸುತ್ತಿದೆ. ಗೋಕಾಕ ಕೂಡ ಇಂತಹ ಲೈಂಗಿಕ ವೃತ್ತಿನಿರತರ ಆರೋಗ್ಯ ಜಾಗೃತಿ ಕೇಂದ್ರಗಳಲ್ಲಿ ಒಂದು. ಸಾವಿರಾರು ಮಹಿಳೆಯರು ತಾವು ಬಯಸದೆ ದೂಡಲಾದ ಕ್ಷೇತ್ರದ ಬಗ್ಗೆ ಅರಿಯಲು, ಆರೋಗ್ಯ ಜಾಗೃತಿ ಹೊಂದಲು ಸಾಧ್ಯವಾಗುವಲ್ಲಿ ‘ಶಕ್ತಿ’ ಸಂಘ ಪಾತ್ರ ವಹಿಸುತ್ತಿದೆ.

ADVERTISEMENT

ರೌಡಿಗಳು, ಸಮಾಜಘಾತುಕರು, ಪಟ್ಟಭದ್ರರ ಕೆಂಗಣ್ಣು– ಬೆದರಿಕೆಗಳ ನಡುವೆಯೂ ಈ ಮಹಿಳೆಯರು ಆರೋಗ್ಯವೆಂಬ ಸೂರಿನಲ್ಲಿ ಸಂಘಟಿತರಾಗಿದ್ದಾರೆ. ಕುಟುಂಬ, ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಿದ್ದಾರೆ. ತಮ್ಮದೇ ಸಂಸ್ಥೆಯನ್ನು ಎಲ್ಲ ಮೂದಲಿಕೆ– ಪ್ರತಿರೋಧದ ನಡುವೆ ಕಟ್ಟಿ ಬೆಳೆಸಿದ್ದಾರೆ. ಅವರಿಗೆ ಲಲಿತಾ ಹೊಸಮನಿ ಧೈರ್ಯ ತುಂಬಿ ಸಂಘಟನೆಗೆ ಬಲ ನೀಡಿದ್ದಾರೆ. ಅವರ ಸಂಘಟನಾ ಚಾತುರ್ಯದ ಫಲವಾಗಿ ‘ಶಕ್ತಿ’ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ ರೂಪಗೊಂಡು ನೋಂದಣಿಯಾಗಿದೆ. ಕಾರ್ಯ ಚಟುವಟಿಕೆಗಳಿಂದ ಗಮನಸೆಳೆದಿದೆ. ಆ ಮಹಿಳೆಯರ ಆರೋಗ್ಯ ಹಾಗೂ ಸಮಗ್ರ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದೆ.

ಈ ಲೈಂಗಿಕ ವೃತ್ತಿನಿರತ ಒಗ್ಗೂಡುವಿಕೆಗೆ ಡಾ.ಲೀಲಾ ಸಂಪಿಗೆ ಮಾರ್ಗದರ್ಶನ ನೀಡಿದ್ದಾರೆ. ಅವರು ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಶಾಸಕರ ನಿಧಿಯಿಂದ ಅನುದಾನ ನೀಡಿ ನೆರವಾಗಿದ್ದಾರೆ. ಈ ಅಮಾಯಕ ಹಾಗೂ ನೊಂದ ಮಹಿಳೆಯರಿಗೆ ಸಹಾಯ ಮಾಡಿದ್ದಾರೆ. ನೆಲೆಯಿಲ್ಲದೆ ಹಾದಿ–ಬೀದಿಗಳಲ್ಲಿ ಜನರ ಕಣ್ಣು ತಪ್ಪಿಸಿ ಸಭೆ-ಸಮಾರಂಭ ಮಾಡುವ ಅಸಹಾಯಕ ಸ್ಥಿತಿಯಲ್ಲಿದ್ದ ಅವರು ಸೂರು ಕಂಡುಕೊಂಡಿದ್ದಾರೆ.

‘ವೃತ್ತಿನಿರತ ಮಹಿಳೆಯರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿರುವ ಈ ಕಟ್ಟಡ ದೇಶದ ಪ್ರಯತ್ನಗಳಲ್ಲೇ ವಿಶಿಷ್ಟವಾದುದು. ಬೆದರಿಕೆ, ಅಪಮಾನ, ದಬ್ಬಾಳಿಕೆಯನ್ನು ಮೆಟ್ಟಿ ನಿಂತು ಮಹಿಳೆಯರು ತಮ್ಮ ಆತ್ಮಬಲದಿಂದಲೇ ಜಯಿಸಬಲ್ಲರು ಎನ್ನುವುದಕ್ಕೆ ಸಾಕ್ಷಿಯಾಗಿದೆ. ನೊಂದ ಮಹಿಳೆಯರ ಮನದಲ್ಲಿ ಒಂದಷ್ಟು ಸಂತಸದ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ’ ಎನ್ನುತ್ತಾರೆ ಲೀಲಾ ಸಂಪಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.