ADVERTISEMENT

ಶಂಕರಾನಂದ ಬದುಕು ರಾಜಕಾರಣಿಗಳಿಗೆ ಮಾದರಿ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 1:58 IST
Last Updated 18 ಡಿಸೆಂಬರ್ 2025, 1:58 IST
ಬೆಳಗಾವಿಯ ಕ್ಲಬ್‌ ರಸ್ತೆಯಲ್ಲಿ ಬುಧವಾರ ಬಿ.ಶಂಕರಾನಂದ ಅವರ ಪ್ರತಿಮೆಯನ್ನು ಸಚಿವ ಸತೀಶ ಜಾರಕಿಹೊಳಿ ಅನಾವರಣ ಮಾಡಿದರು
ಬೆಳಗಾವಿಯ ಕ್ಲಬ್‌ ರಸ್ತೆಯಲ್ಲಿ ಬುಧವಾರ ಬಿ.ಶಂಕರಾನಂದ ಅವರ ಪ್ರತಿಮೆಯನ್ನು ಸಚಿವ ಸತೀಶ ಜಾರಕಿಹೊಳಿ ಅನಾವರಣ ಮಾಡಿದರು   

ಬೆಳಗಾವಿ: ‘ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿ ಆಗಿದ್ದ ಬಿ. ಶಂಕರಾನಂದ ಅವರ ರಾಜಕೀಯ ಜೀವನ ಎಲ್ಲರಿಗೂ ಮಾದರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಕ್ಲಬ್‌ ರಸ್ತೆಯಲ್ಲಿರುವ ಬಿ. ಶಂಕರಾನಂದ ವೃತ್ತದಲ್ಲಿ ಬುಧವಾರ ಶಂಕರಾನಂದ ಅವರ ಕಂಚಿನ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ‘ಏಳು ಬಾರಿ ಚಿಕ್ಕೋಡಿ ಸಂಸದರಾಗಿ, ಕೇಂದ್ರ ಸರ್ಕಾರದಲ್ಲಿ ಪ್ರಭಾವಿ ಮಂತ್ರಿಗಳಾಗಿದ್ದ ಅವರು, ಜಿಲ್ಲೆ ಹಾಗೂ ಕರ್ನಾಟಕದಲ್ಲಿ ಅನೇಕ ಕಾಂಗ್ರೆಸ್ ನಾಯಕ ಬೆಳೆವಣಿಗೆಗೆ ಪ್ರೋತ್ಸಾಹಿಸಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿ ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ ಹಾಗೂ ಸಕ್ಕರೆ ಕಾರ್ಖಾನೆಗಳ ನಿರ್ಮಾಣಕ್ಕೆ ನೀಡಿದ ಕೊಡುಗೆ ಸ್ಮರಣೀಯ. ಕೇಂದ್ರದಲ್ಲಿ ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಅವರೊಂದಿಗೆ ಒಡನಾಟ ಹೊಂದಿದ್ದ ಅವರು, ಮಹಾರಾಷ್ಟ್ರದಲ್ಲೂ ಹೆಸರು ಮಾಡಿದ್ದಾರೆ. ಅವರ ಪ್ರತಿಮೆಯ ಯುವ ಪೀಳಿಗೆಗೆ ಅವರ ವ್ಯಕ್ತಿತ್ವದ ದರ್ಶನ ಮಾಡಲಿದೆ’ ಎಂದರು,

ADVERTISEMENT

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಬಾಕರ ಕೋರೆ ಮಾತನಾಡಿ, ‘ನನ್ನನ್ನು ರಾಜಕೀಯಕ್ಕೆ ಕರೆತಂದು ಬೆಳೆಸಿದ್ದು ಬಿ.ಶಂಕರಾನಂದ ಅವರು. ನಾನು ಯಾವುದೇ ಪಕ್ಷದಲ್ಲಿದ್ದರೂ ಅವರೇ ನಮ್ಮ ಗುರು. ಶಂಕರಾನಂದ ಅವರು ಕಾಂಗ್ರೆಸ್‌ನಲ್ಲಿ ‘ಪವರ್‌ಫುಲ್’ ರಾಜಕಾರಣಿಯಾಗಿದ್ದರು. ಚುನಾವಣೆ ವೇಳೆ ಉತ್ತರ ಕರ್ನಾಟಕದ ಬಹುತೇಕ ಕ್ಷೇತ್ರಗಳ ಟಿಕೆಟ್‌ಗಳನ್ನು ಅವರೆ ಅಂತಿಮಗೊಳಿಸುತ್ತಿದ್ದರು. ಕೆಎಲ್‌ಇ ಆಸ್ಪತ್ರೆ ನಿರ್ಮಾಣದ ಸಂದರ್ಭದಲ್ಲಿ ಅವರು ನೀಡಿದ ಸಹಕಾರ ಅಪಾರ’ ಎಂದರು.

ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಕಟ್ಟಿ, ಪ್ರದೀಪ ಕಣಗಲಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮೇಯರ್ ಮಂಗೇಶ ಪವಾರ, ಉಪ ಮೇಯರ್ ವಾಣಿ ಜೋಶಿ ಇತರರು ಇದ್ದರು.

ಬೆಳಗಾವಿಯ ಕ್ಲಬ್‌ ರಸ್ತೆಗೆ ಬಿ.ಶಂಕರಾನಂದ ಅವರ ಹೆಸರಿಟ್ಟು ಇಲ್ಲೇ ಅವರ ಪ್ರತಿಮೆ ನಿರ್ಮಾಣ ಮಾಡಿದ್ದು ಶ್ಲಾಘನೀಯ. ಅವರ ಕುಟುಂಬದವರು ರಾಜಕೀಯಕ್ಕೆ ಬರಬೇಕಿದೆ
–ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷ ಕೆಎಲ್‌ಇ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.