ADVERTISEMENT

ಗೋಕಾಕ: ಶರಣ ಸಂಸ್ಕೃತಿ ಉತ್ಸವ ಮಾರ್ಚ್‌ 1ರಿಂದ; ಕಾಯಕಶ್ರೀ ಪ್ರಶಸ್ತಿ ಪ್ರದಾನ

ಸಾಧಕರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 13:26 IST
Last Updated 26 ಫೆಬ್ರುವರಿ 2021, 13:26 IST

ಗೋಕಾಕ: ‘ಇಲ್ಲಿನ ಶೂನ್ಯ ಸಂಪಾದನ ಮಠದಿಂದ ಲಿಂ.ಬಸವ ಸ್ವಾಮೀಜಿ ಅವರ 16ನೇ ಪುಣ್ಯಸ್ಮರಣೋತ್ಸವ ಹಾಗೂ 16ನೇ ಶರಣ ಸಂಸ್ಕೃತಿ ಉತ್ಸವವನ್ನು ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಮಾರ್ಚ್‌ 1ರಿಂದ 4ರವರೆಗೆ ವಿಜೃಂಭಣೆಯಿಂದ ಆಯೋಜಿಸಲಾಗಿದೆ’ ಎಂದು ಉತ್ಸವ ಸಮಿತಿ ಕಾರ್ಯದರ್ಶಿ ವಿವೇಕ ಜತ್ತಿ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮಗಳ ಮಾಹಿತಿ ನೀಡಿದರು.

‘ಮಾರ್ಚ್‌ 1ರಂದು ಮುಂಜಾನೆ 8ಕ್ಕೆ ಶಾಲಾ ವಿದ್ಯಾರ್ಥಿಗಳಿಂದ ‘ಅರಿವು-ಅಕ್ಷರ-ಆರೋಗ್ಯ’ ಜಾಥಾ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಬಸವೇಶ್ವರ ವಿದ್ಯಾಪೀಠದವರೆಗೆ ನಡೆಯಲಿದೆ. 8.30ಕ್ಕೆ ಷಟಸ್ಥಲ ಧ್ವಜಾರೋಹಣವನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನೆರೆವೇರಿಸುವರು. ಮುಪ್ಪಯ್ಯನಮಠದ ರಾಚೂಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು’ ಎಂದು ಹೇಳಿದರು.

ADVERTISEMENT

‘ಸಂಜೆ 6ಕ್ಕೆ ಯುವ ಸಮಾವೇಶವನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಉದ್ಘಾಟಿಸುವರು. ಮರಡಿಮಠದ ಪವಾಡೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಉತ್ಸವ ಸಮಿತಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅಧ್ಯಕ್ಷತೆ ವಹಿಸುವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ರವಿ ಚಣ್ಣನ್ನವರ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು’ ಎಂದು ತಿಳಿಸಿದರು.

‘ಮಾರ್ಚ್‌ 2ರಂದು ಸಂಜೆ 6ಕ್ಕೆ ‘ಕಾಯಕಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆರ್ಟ್‌ ಆಫ್ ಲಿವಿಂಗ್ ಸಂಸ್ಥೆಯ ಸಂಸ್ಥಾಪಕ ಶ್ರೀ ಶ್ರೀ ಶ್ರೀ ರವಿಶಂಕರ ಗುರೂಜಿ ಅವರಿಗೆ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ಪ್ರಶಸ್ತಿಪತ್ರ ಒಳಗೊಂಡಿದೆ. ದುರದುಂಡೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಅತಿಥಿಯಾಗಿ ಕೆಎಂಎಫ್‌ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ, ಬೆಂಗಳೂರಿನ ಬೋಸ್ಕ್ ಕಂಪನಿ ಪ್ರಧಾನ ವ್ಯವಸ್ಥಾಪಕ ಬಿ.ವಿ. ನವೀನ ಭಾಗವಹಿಸುವರು’.

‘ಮಾರ್ಚ್‌ 3ರಂದು ಸಂಜೆ 6ಕ್ಕೆ ಮಹಿಳಾ ಸಮಾವೇಶ ನಡೆಯಲಿದೆ. ಉಪ್ಪಿನ ಬೆಟಗೇರಿಯ ಮೂರು ಸಾವಿರ ಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಅತಿಥಿಗಳಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಐಪಿಎಸ್ ಅಧಿಕಾರಿ ಡಿ.ರೂಪಾ ಪಾಲ್ಗೊಳ್ಳುವರು. ಮಾರ್ಚ್‌ 4ರಂದು ಶ್ರೀಮಠದ ಗದ್ದುಗೆಗೆ ಅಭಿಷೇಕ ಹಾಗೂ ಬಿಲ್ವಾರ್ಚನೆ, ಸಹಸ್ರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ, ಕುಂಭಮೇಳ, ಮಧ್ಯಾಹ್ನ ಮಹಾಪ್ರಸಾದ ನಡೆಯಲಿದೆ’ ಎಂದು ವಿವರಿಸಿದರು.

ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ, ‘ಪ್ರತಿ ದಿನ ನಡೆಯುವ ಕಾರ್ಯಕ್ರಮಗಳಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರನ್ನು ಗೌರವಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮ, ಮಹಾಪ್ರಸಾದ ಜರುಗಲಿದೆ. ಭಕ್ತರು ಪಾಲ್ಗೊಳ್ಳಬೇಕು’ ಎಂದರು.

ಮೈಲಾರಲಿಂಗ ಉಪ್ಪಿನ, ಪ್ರಶಾಂತ ಕುರಬೇಟ, ಶಿವಲಿಂಗಪ್ಪ ಗುರಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.