ADVERTISEMENT

ಅ.2ರಿಂದ ‘ಷಫರ್ಡ್ಸ್‌ ಇಂಡಿಯಾ’ ಸಮಾವೇಶ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2023, 23:28 IST
Last Updated 13 ಆಗಸ್ಟ್ 2023, 23:28 IST
h vishwanath
h vishwanath   

ಬೆಳಗಾವಿ: ‘ಷಫರ್ಡ್ಸ್‌ ಇಂಡಿಯಾ– ಇಂಟರ್‌ನ್ಯಾಷನಲ್‌ ಸಂಘಟನೆಯ 9ನೇ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಪ್ರತಿನಿಧಿಗಳ ಮಹಾ ಸಮಾವೇಶವನ್ನು ನಗರದ ಸಿ.ಪಿ.ಇಡಿ ಮೈದಾನದಲ್ಲಿ ಅಕ್ಟೋಬರ್‌ 2 ಮತ್ತು 3ರಂದು ಆಯೋಜಿಸಲಾಗುವುದು’ ಎಂದು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ ಹೇಳಿದರು.

ನಗರದಲ್ಲಿ ಭಾನುವಾರ ಪೂರ್ವಭಾವಿ ಸಭೆ ನಂತರ ಮಾಹಿತಿ ನೀಡಿದ ಅವರು, ‘ದೇಶದ ವಿವಿಧ ರಾಜ್ಯಗಳಲ್ಲಿ 12 ಕೋಟಿಗೂ ಅಧಿಕ ಕುರುಬರಿದ್ದು ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಉದ್ದೇಶದಿಂದ ‘ಷಫರ್ಡ್ಸ್‌ ಇಂಡಿಯಾ’ ಕಟ್ಟಲಾಗಿದೆ. ಪ್ರತಿ ವರ್ಷ ಒಂದೊಂದು ರಾಜ್ಯದಲ್ಲಿ ಸಮಾವೇಶ ನಡೆಸಲಾಗುತ್ತದೆ. ಈ ಬಾರಿ ಕರ್ನಾಟಕಕ್ಕೆ ಆತಿಥ್ಯ ಸಿಕ್ಕಿದ್ದು, ಬೆಳಗಾವಿಯೇ ಇದಕ್ಕೆ ಸೂಕ್ತ ಎಂದು ನಿರ್ಧರಿಸಲಾಗಿದೆ’ ಎಂದರು.

‘ಅಕ್ಟೋಬರ್‌ 2ರಂದು ಕಾರ್ಯಕಾರಿಣಿಯಲ್ಲಿ ದೇಶದ ಎಲ್ಲ ರಾಜ್ಯಗಳ ಪ್ರತಿನಿಧಿಗಳೂ ಪಾಲ್ಗೊಳ್ಳುವರು. ಅಕ್ಟೋಬರ್‌ 3ರಂದು ಕಿತ್ತೂರು ಕರ್ನಾಟಕ ಭಾಗದ ಜಿಲ್ಲೆಗಳ ಜನರನ್ನು ಸೇರಿಸಿ ಸಮಾವೇಶ ಮಾಡಲಾಗುತ್ತಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಲಿದ್ದಾರೆ. ಅದೇ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುವುದು’ ಎಂದರು.

ADVERTISEMENT

‘ಕುರುಬರು ವಿಶ್ವದ ಮೂಲ ನಿವಾಸಿಗಳು. ವಿಶ್ವದೆಲ್ಲೆಡೆ ಇರುವ ನಮ್ಮ ರಾಜಕಾರಣ, ಸಂಸ್ಕೃತಿ, ಸಂಸ್ಕಾರ, ಜೀವನ ಪದ್ಧತಿ ಹಾಗೂ ಸವಾಲುಗಳ ಕುರಿತು ವಿಚಾರ– ವಿಮರ್ಶೆ ಈ ಸಮಾವೇಶದಲ್ಲಿ ನಡೆಯಲಿದೆ. ಇದು ಪಕ್ಷಾತೀತ ಸಂಘಟನೆಯಾಗಿದ್ದು ಎಲ್ಲ ಪಕ್ಷದ ನಾಯಕರೂ ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.

ಸಂಘಟನೆಯ ಸಂಚಾಲಕ ಎಚ್‌.ಎಂ.ರೇವಣ್ಣ ಹಾಗೂ ಕುರುಬರ ಸಂಘದ ವಿವಿಧ ರಾಜ್ಯಗಳ ಮುಖಂಡರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.