ADVERTISEMENT

ಲಿಂಗಾಯತ ಸಮುದಾಯದ ಎಲ್ಲ ಪಂಗಡಗಳನ್ನು ಒಬಿಸಿಗೆ ಸೇರಿಸಿ: ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 11:45 IST
Last Updated 6 ಅಕ್ಟೋಬರ್ 2023, 11:45 IST
<div class="paragraphs"><p>ಬೆಳಗಾವಿಯಲ್ಲಿ ಶುಕ್ರವಾರ ವೀರಭದ್ರೇಶ್ವರ ಜಯಂತಿಯ ಪ್ರಚಾರ ಸಾಮಗ್ರಿಗಳನ್ನು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಗುರುಸಿದ್ಧ ಸ್ವಾಮೀಜಿ ಬಿಡುಗಡೆ ಮಾಡಿದರು. </p></div>

ಬೆಳಗಾವಿಯಲ್ಲಿ ಶುಕ್ರವಾರ ವೀರಭದ್ರೇಶ್ವರ ಜಯಂತಿಯ ಪ್ರಚಾರ ಸಾಮಗ್ರಿಗಳನ್ನು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಗುರುಸಿದ್ಧ ಸ್ವಾಮೀಜಿ ಬಿಡುಗಡೆ ಮಾಡಿದರು.

   

ಬೆಳಗಾವಿ: ‘ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ನಗರದ ಕಾಲೇಜು ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಅ.8ರಂದು ಬೆಳಿಗ್ಗೆ 11ಕ್ಕೆ ವೀರಭದ್ರೇಶ್ವರ ಜಯಂತಿ ಮಹೋತ್ಸವ ಆಚರಿಸಲಾಗುವುದು. ರಾಜ್ಯದ ವಿವಿಧೆಡೆಯಿಂದ ನೂರಕ್ಕೂ ಹೆಚ್ಚು ಮಠಾಧೀಶರು ಈ ಕಾರ್ಯಕ್ರಮದಲ್ಲಿ ‍ಪಾಲ್ಗೊಳ್ಳಲಿದ್ದಾರೆ’ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಉತ್ಸವದಲ್ಲಿ ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಸ್ವಾಮೀಜಿ, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಪೀಠಾಧಿಪತಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಶಿರಹಟ್ಟಿ ಫಕೀರೇಶ್ವರ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸುಮಾರು 5,000ಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ನಾಡಿನ ಎಲ್ಲ ಮಠಾಧೀಶರಿಗೂ ಆಹ್ವಾನ ನೀಡಲಾಗಿದೆ’ ಎಂದರು.

ADVERTISEMENT

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಉತ್ಸವ ಉದ್ಘಾಟಿಸಲಿದ್ದಾರೆ. ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಅಧ್ಯಕ್ಷತೆ ವಹಿಸುವರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ ಪಟ್ಟಣ, ಸಂಸದರಾದ ಮಂಗಲಾ ಅಂಗಡಿ, ಈರಣ್ಣ ಕಡಾಡಿ, ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರೂ ಪಾಲ್ಗೊಳ್ಳಲಿದ್ದಾರೆ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ, ಅಂದು ಬೆಳಿಗ್ಗೆ 10ಕ್ಕೆ ರಾಣಿ ಚನ್ನಮ್ಮ ವೃತ್ತದಿಂದ ಗಾಂಧಿ ಭವನದವರೆಗೆ ವೀರಭದ್ರೇಶ್ವರ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ. ಪೂರ್ಣಕುಂಭ ಹೊತ್ತ ಮಹಿಳೆಯರು, ಅರ್ಚಕರು, ಪುರವಂತರು, ವೀರಗಾಸೆ ಕಲಾವಿದರು ಹಾಗೂ ವಿವಿಧ ವಾದ್ಯಮೇಳಗಳು ಪಾಲ್ಗೊಳ್ಳಲಿವೆ ಎಂದು ಶ್ರೀಗಳು ತಿಳಿಸಿದರು.

ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ‘ವೀರಭದ್ರ ದೇವರು ಕೇವಲ ಲಿಂಗಾಯತ ಅಥವಾ ವೀರಶೈವರ ದೈವವಲ್ಲ. ನಾಡಿನ ಎಲ್ಲ ಸಮುದಾಯದವರೂ ಆರಾಧಿಸುತ್ತಾರೆ. ಹಾಗಾಗಿ, ಎಲ್ಲ ಸಮುದಾಯದವರೂ ಉತ್ಸವದಲ್ಲಿ ಪಲ್ಗೊಳ್ಳುವಂತೆ ಆಹ್ವಾನ ನೀಡಿದ್ದೇವೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಈ ಜಯಂತಿ ಯಶಸ್ವಿಗೊಳಿಸಲು ಎಲ್ಲರೂ ಕೈ ಜೋಡಿಸಬೇಕು’ ಎಂದರು.

ವೇದಿಕೆಯ ಕಿತ್ತೂರು ಕರ್ನಾಟಕ ಪ್ರದೇಶ ಅಧ್ಯಕ್ಷ ಉಮೇಶ ಬಾಳಿ, ಕಾರ್ಯಕ್ರಮದ ಉಸ್ತುವಾರಿ ಡಾ.ವಿ.ಐ. ಪಾಟೀಲ, ಸಂಘಟನೆಯ ವೈದ್ಯರ ಘಟಕದ ರಾಷ್ಟ್ರೀಯ ಅಧ್ಯಕ್ಷ ಡಾ.ಸುಭಾಷ ಪಾಟೀಲ, ಅಶೋಕ ಪೂಜಾರಿ, ಅರ್ಚಕರ ಸಂಘದ ಶಂಕರಯ್ಯ ಶಾಸ್ತ್ರಿ ಹಿರೇಮಠ ಇದ್ದರು.

ಒಬಿಸಿ ಮೀಸಲಾತಿಗೆ ಪ್ರಸ್ತಾವ

‘ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಪಂಗಡಗಳನ್ನೂ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ, ವೀರಭದ್ರೇಶ್ವರ ಜಯಂತಿ ದಿನವೇ ಪ್ರಸ್ತಾವ ಕೂಡ ಸಲ್ಲಿಸಲಾಗುವುದು’ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಕಿತ್ತೂರು ಕರ್ನಾಟಕ ಪ್ರದೇಶ ಅಧ್ಯಕ್ಷ ಉಮೇಶ ಬಾಳಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಹೋರಾಟ ನಡೆದಿದೆ. ಅವರೂ ಸೇರಿದಂತೆ ನಮ್ಮದು ಅಖಂಡ ವೀರಶೈವ ಲಿಂಗಾಯತ ಸಮಾಜದ ಬೇಡಿಕೆಯಾಗಿದೆ. ದಶಕಗಳಿಂದಲೂ ಈ ಬೇಡಿಕೆ ಈಡೇರಿಲ್ಲ. ಈ ಬಾರಿಯ ಉತ್ಸವದಲ್ಲಿ ಎಲ್ಲ ಸ್ವಾಮೀಜಿಗಳು, ಸಮಾಜದ ನಾಯಕರ ಮುಂದಾಳತ್ವದಲ್ಲಿ ಕೇಂದ್ರಕ್ಕೆ ಮತ್ತೊಮ್ಮೆ‍ ಬೇಡಿಕೆ ಸಲ್ಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.