ADVERTISEMENT

ಬೆಳಗಾವಿ: ಜನ, ಜಾನುವಾರು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ

ಮಂಜೂರಾದ ಹುದ್ದೆಗಳಲ್ಲಿ ಅರ್ಧದಷ್ಟೂ ಭರ್ತಿಯಾಗಿಲ್ಲ!

ಎಂ.ಮಹೇಶ
Published 13 ಸೆಪ್ಟೆಂಬರ್ 2020, 8:43 IST
Last Updated 13 ಸೆಪ್ಟೆಂಬರ್ 2020, 8:43 IST

ಬೆಳಗಾವಿ: ಜಿಲ್ಲೆಯಲ್ಲಿ ಜನರು ಹಾಗೂ ಜಾನುವಾರುಗಳ ಚಿಕಿತ್ಸೆಗಾಗಿ ಸ್ಥಾಪಿಸಿರುವ ಆರೋಗ್ಯ ಸಂಸ್ಥೆಗಳು ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ. ಮಂಜೂರಾದ ಹುದ್ದೆಗಳ ಪೈಕಿ ಅರ್ಧದಷ್ಟೂ ಭರ್ತಿಯಾಗಿಲ್ಲ.

ಆರೋಗ್ಯ ಇಲಾಖೆಯಿಂದ ಜಿಲ್ಲೆಗೆ ಮಂಜೂರಾದ ವಿವಿಧ ಹುದ್ದೆಗಳು 3,822. ಇವುಗಳಲ್ಲಿ 2,138 ಭರ್ತಿಯಾಗಿವೆ. ಖಾಲಿ ಉಳಿದಿರುವುದು ಬರೋಬ್ಬರಿ 1,684.

139 ಪ್ರಾಥಮಿಕ ಆರೋಗ್ಯ ಕೇಂದ್ರ, 16 ಸಮುದಾಯ ಆರೋಗ್ಯ ಕೇಂದ್ರಗಳಿವೆ. 9 ಸಾರ್ವಜನಿಕ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. 14 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಎಂಬಿಬಿಎಸ್‌ ವೈದ್ಯರ 146 ಹುದ್ದೆಗಳ ಪೈಕಿ 18 ಖಾಲಿ ಇವೆ. ತಜ್ಞ ವೈದ್ಯರಲ್ಲಿ 142ರ ಪೈಕಿ 19 ಭರ್ತಿಯಾಗಿಲ್ಲ.

ADVERTISEMENT

315 ಸ್ಟಾಫ್‌ ನರ್ಸ್‌ಗಳ ಹುದ್ದೆಗಳು ಮಂಜೂರಾಗಿದ್ದು, 32 ಖಾಲಿ ಉಳಿದಿವೆ. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ 654ರಲ್ಲಿ ಇನ್ನೂ ಬರೋಬ್ಬರಿ 223 ಹುದ್ದೆಗಳು ಭರ್ತಿ ಆಗಬೇಕಿದೆ. ಹಿರಿಯ ಪುರುಷ ಆರೋಗ್ಯ ಸಹಾಯಕರು ವಿಭಾಗದಲ್ಲಿ ಮಂಜೂರಾಗಿರುವುದು 468. ಇದರಲ್ಲಿ ಖಾಲಿ ಇರುವುದು 361 ಹುದ್ದೆಗಳು.

ಕೆಲಸದ ಒತ್ತಡ:‘ಹುದ್ದೆಗಳು ಕಾಲ ಕಾಲಕ್ಕೆ ಭರ್ತಿಯಾಗದೆ ಇರುವುದರಿಂದ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿವೆ. ವೈದ್ಯರು ಹಾಗೂ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಹೊರಗುತ್ತಿಗೆ ಮೇಲೆ ನೇಮಕ ಮಾಡಿಕೊಂಡು ನಿರ್ವಹಿಸಲಾಗುತ್ತಿದೆ. ಆದರೂ ಕೋವಿಡ್‌–19 ವ್ಯಾಪಿಸಿರುವ ಈ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆಯು ಹೆಚ್ಚಾಗಿ ಬಾಧಿಸುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

‘ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಹುದ್ದೆಗಳು ಕೊರತೆ ಇರುವುದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳ ಮೂಲಕವೂ ಕೋರಿದ್ದೇವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಶಿಕಾಂತ ವಿ. ಮುನ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ನಿರ್ವಹಣೆಗೆ ಕ್ರಮ:‘ಹುದ್ದೆಗಳ ಕೊರತೆ ಕಾರಣದಿಂದ ಕೋವಿಡ್‌ ಸಂಬಂಧಿ ಚಿಕಿತ್ಸೆಯಲ್ಲಿ ತೊಂದರೆಗಳು ಎದುರಾಗದಂತೆ ನಿರ್ವಹಿಸಲಾಗುತ್ತಿದೆ. ಕೋವಿಡ್–19 ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುವುದು ಇನ್ನೂ ಆರಂಭವಾಗಿಲ್ಲ. ಹೀಗಾಗಿ, ಅಲ್ಲಿ ಆರೋಗ್ಯ ತಪಾಸಣೆ ಮತ್ತಿತರ ಕಾರ್ಯಕ್ರಮಗಳ ವೈದ್ಯರು ಹಾಗೂ ಸಿಬ್ಬಂದಿಯನ್ನು ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದ ಕೆಲಸಕ್ಕೆ ಬಳಸಲಾಗುತ್ತಿದೆ. ಇದರಿಂದಾಗಿ ಸದ್ಯಕ್ಕೆ ಯಾವುದೇ ತೊಂದರೆ ಆಗಿಲ್ಲ’ ಎಂದು ಮಾಹಿತಿ ನೀಡಿದರು.

‘ಬಿಮ್ಸ್‌ನಲ್ಲಿ ನರ್ಸಿಂಗ್ ಸಿಬ್ಬಂದಿ ಕೊರತೆ ಇದೆ. 10 ವೈದ್ಯರು, 20 ನರ್ಸ್‌ಗಳು ಮತ್ತು 10 ವಾರ್ಡ್‌ ಬಾಯ್‌ ಹುದ್ದೆಗಳ ಭರ್ತಿಗೆ ಇತ್ತೀಚೆಗೆ ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು. ಇಬ್ಬರು ನರ್ಸ್‌ ಬಿಟ್ಟರೆ ಉಳಿದ ಹುದ್ದೆಗಳ ಸಂದರ್ಶನಕ್ಕೆ ಯಾರೂ ಬರಲಿಲ್ಲ’ ಎಂದು ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ.ವಿನಯ್‌ ದಾಸ್ತಿಕೊಪ್ಪ ಪ್ರತಿಕ್ರಿಯಿಸಿದರು.

‘ಜಿಲ್ಲಾಸ್ಪತ್ರೆಗೆ ಹೃದ್ರೋಗ ತಜ್ಞರು ಕೂಡ ಬೇಕಾಗಿದ್ದಾರೆ. ಕೊರೊನಾ ಸೋಂಕಿತರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಲಭ್ಯ ವೈದ್ಯರೇ ನಿಭಾಯಿಸುತ್ತಿದ್ದಾರೆ’ ಎನ್ನುತ್ತಾರೆ ನಿರ್ದೇಶಕರು.

ಪಶು ಆಸ್ಪತ್ರೆಗಳಲ್ಲಿ...

‘ಜಿಲ್ಲೆಯಲ್ಲಿ 187 ಪಶು ಚಿಕಿತ್ಸಾ ಕೇಂದ್ರ, 67 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಹಾಗೂ 10 ಸಂಚಾರಿ ಪಶು ಚಿಕಿತ್ಸಾಲಯಗಳಿವೆ. ಇವುಗಳಲ್ಲಿ 52 ಪಶು ಅಧಿಕಾರಿಗಳ ಹುದ್ದೆ ಖಾಲಿ ಇವೆ. ಮಂಜೂರಾದ 480 ಗ್ರೂಪ್ ‘ಡಿ’ ಹುದ್ದೆಗಳ ಪೈಕಿ 280 ಮಾತ್ರ ಭರ್ತಿಯಾಗಿವೆ. 135 ಮಂದಿಯನ್ನು ಹೊರಗುತ್ತಿಗೆ ಮೂಲಕ ನೇಮಿಸಿಕೊಳ್ಳಲಾಗಿದೆ. ಜಾನುವಾರುಗಳ ಚಿಕಿತ್ಸೆಯಲ್ಲಿ ತೊಂದರೆ ಆಗದಂತೆ ನಿಭಾಯಿಸುತ್ತಿದ್ದೇವೆ. ಹುದ್ದೆಗಳು ಆದಷ್ಟು ಬೇಗ ಭರ್ತಿಯಾದರೆ ಅನುಕೂಲ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಅಶೋಕ ಕೊಳ್ಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.