ADVERTISEMENT

ಸಮಾಜಕ್ಕೆ ಬೆಳಕಾದ ಸಿರಸಂಗಿ ಲಿಂಗರಾಜ: ಡಾ.ವಿ.ಎಸ್. ಮಾಳಿ ಬಣ್ಣನೆ

ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಡಾ.ವಿ.ಎಸ್. ಮಾಳಿ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 13:36 IST
Last Updated 10 ಜನವರಿ 2022, 13:36 IST
ಬೆಳಗಾವಿಯಲ್ಲಿ ಸಿರಸಂಗಿ ಲಿಂಗರಾಜರ ಪುತ್ಥಳಿಗೆ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸೋಮವಾರ ಪುಷ್ಪ ನಮನ ಸಲ್ಲಿಸಿದರು
ಬೆಳಗಾವಿಯಲ್ಲಿ ಸಿರಸಂಗಿ ಲಿಂಗರಾಜರ ಪುತ್ಥಳಿಗೆ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸೋಮವಾರ ಪುಷ್ಪ ನಮನ ಸಲ್ಲಿಸಿದರು   

ಬೆಳಗಾವಿ: ‘ಸಿರಸಂಗಿ ಲಿಂಗರಾಜರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡುವ ಮೂಲಕ ಸಮಾಜಕ್ಕೆ ಬೆಳಕಾದವರು’ ಎಂದು ಹಾರೂಗೇರಿಯ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ವಿ.ಎಸ್. ಮಾಳಿ ಸ್ಮರಿಸಿದರು.

ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನಲ್ಲಿ ಸೋಮವಾರ ನಡೆದ ತ್ಯಾಗವೀರ ಸಿರಸಂಗಿ ಲಿಂಗರಾಜರ ಜಂಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಿರಸಂಗಿ ಸಂಸ್ಥಾನ ಇಂದು ಇಲ್ಲ. ಆದರೆ, ಲಿಂಗರಾಜರು ಇತಿಹಾಸದಲ್ಲಿ ಅಜರಾಮರವಾಗಿದ್ದಾರೆ. ಅವರ ಜಯಂತಿ ವ್ಯಕ್ತಿ ಜಯಂತಿಯಲ್ಲ ಅದು ತ್ಯಾಗದ ಜಯಂತಿ’ ಎಂದು ಬಣ್ಣಿಸಿದರು.

ADVERTISEMENT

ಮೌಲ್ಯಗಳನ್ನು ಎತ್ತಿ ಹಿಡಿದರು:

‘ಅವರು ತಮ್ಮ ಬದುಕಿನಲ್ಲಿ ಎಷ್ಟೇ ತೊಂದರೆಗಳು ಎದುರಾದರೂ ಮೌಲ್ಯಗಳನ್ನು ಎತ್ತಿ ಹಿಡಿದರು. ಸ್ತ್ರೀ ಶಿಕ್ಷಣದ ಹರಿಕಾರರಾಗಿ, ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡಿದ ಮಹಾಪುರುಷ. ಒಂದು ಕಾಲದಲ್ಲಿ ಶಿಕ್ಷಣ ಉಳ್ಳವರ ಪಾಲಾಗಿತ್ತು. ಬಡವನೂ ಶಿಕ್ಷಣ ಪಡೆದು ಉನ್ನತ ಜೀವನ ಪಡೆಯಬೇಕೆಂಬ ಸಂಕಲ್ಪ ಅವರದಾಗಿತ್ತು. ಅಂತೆಯೇ ಇಚ್ಛಾಪತ್ರವನ್ನು ದಾನಪತ್ರವನ್ನಾಗಿ ಮಾಡಿ ಆಸ್ತಿಯನ್ನೆಲ್ಲಾ ಧಾರೆ ಎರೆದರು’ ಎಂದು ತಿಳಿಸಿದರು.

‘ಲಿಂಗರಾಜ ಶಿಕ್ಷಣ ಟ್ರಸ್ಟ್ ದೇಶದ ಸಂಸ್ಥಾನಿಕರಲ್ಲಿಯೆ ಪ್ರಥಮ ಶಿಕ್ಷಣ ಟ್ರಸ್ಟ್‌ ಎನಿಸಿಕೊಂಡಿತು. ಬದುಕಿನಲ್ಲಿ ಯಾವುದನ್ನೂ ಸ್ವಹಿತಕ್ಕಾಗಿ ಆಶಿಸದೆ ಸಮಾಜದ ಏಳಿಗೆಗೆ ದುಡಿದರು. ಅವರು ಮಾಡಿದ ದಾನ ಅಮರ. ಅವರ ಟ್ರಸ್ಟ್‌ನಿಂದ ಶಿಕ್ಷಣ ಪೂರೈಸಿದ ಹಲವು ಮಹನೀಯರು ಸಮಾಜದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದನ್ನು ಸ್ಮರಿಸಬಹುದು’ ಎಂದು ನುಡಿದರು.

ಕಾದಂಬರಿ ಬಿಡುಗಡೆ:

ಸಿರಸಂಗಿ ಲಿಂಗರಾಜರ ಬದುಕಿನ ಕುರಿತು ಕಾದಂಬರಿಕಾರ ಯ.ರು. ಪಾಟೀಲ ಅವರು ರಚಿಸಿದ ಕಾದಂಬರಿ ‘ತ್ಯಾಗಶ್ರೀ’ ಅನ್ನು ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಬಿಡುಗಡೆ ಮಾಡಿದರು.

ನಂತರ ಮಾತನಾಡಿ, ‘ಏನೆಲ್ಲ ಇದ್ದರೂ ಯಾವುದಕ್ಕೂ ಅಂಟಿಕೊಳ್ಳದೆ ಸರಳ ಜೀವನಕ್ಕೆ ಲಿಂಗರಾಜರು ಹೆಸರುವಾಸಿಯಾಗಿದ್ದರು. ಅವರ ಅಭಿವೃದ್ಧಿಯ ಸಂಕಲ್ಪಗಳು ಜನಾನುರಾಗಿ ಆಗಿಸಿದವು. ಅವರ ತ್ಯಾಗದಿಂದ ಪ್ರೇರೇಪಿತರಾದ ಕೆ.ಎಲ್.ಇ. ಸಂಸ್ಥೆಯ ಸಂಸ್ಥಾಪಕ ಸಪ್ತರ್ಷಿಗಳು ತಾವು ಸ್ಥಾಪಿಸಿದ ಕಾಲೇಜಿಗೆ ಲಿಂಗರಾಜರ ಹೆಸರಿಟ್ಟು ಗೌರವಿಸಿದ್ದಾರೆ’ ಎಂದರು.

ಬಸಮ್ಮ ಮಠದ ಪ್ರಾರ್ಥಿಸಿದರು. ಲಿಂಗರಾಜ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಬಸವರಾಜ ತಟವಟಿ ಸ್ವಾಗತಿಸಿದರು. ಡಾ.ಎಚ್.ಎಂ. ಚನ್ನಪ್ಪಗೋಳ ವಂದಿಸಿದರು.

ಇದಕ್ಕೂ ಮುನ್ನ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು ಲಿಂಗರಾಜರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.

ಕೆಎಲ್ಇ ಸಂಸ್ಥೆಯ ಸಹ ಕಾರ್ಯದರ್ಶಿ ಡಾ.ಸುನೀಲ ಜಲಾಲಪುರೆ, ಆಜೀವ ಸದಸ್ಯ ಡಾ.ಶಿವಯೋಗಿ ಹೂಗಾರ, ಪ್ರೊ.ಶೀತಲ ನಂಜಪ್ಪನವರ, ಪ್ರೊ.ಮಹಾದೇವ ಬಳಿಗಾರ, ಲಿಂಗರಾಜ ಕಾಲೇಜಿನ ಪ್ರಾಚಾರ್ಯ ಬಿ.ಎಂ. ತೇಜಸ್ವಿ, ಆರ್.ಎಲ್. ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಜ್ಯೋತಿ ಕವಳೇಕರ, ಸಾಹಿತಿ ಸಿದ್ದಣ್ಣ ಉತ್ನಾಳ ಉಪಸ್ಥಿತರಿದ್ದರು.

ಡಾ.ಮಹೇಶ ಸಿ. ಗುರನಗೌಡರ ಹಾಗೂ ಪ್ರೊ.ಸಿದ್ದನಗೌಡ ಪಾಟೀಲ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.