ADVERTISEMENT

ವಿಚಾರಣೆಗೆ ಹಾಜರಾಗುವಂತೆ ರಮೇಶ ಜಾರಕಿಹೊಳಿಗೆ ಎಸ್‌ಐಟಿ ನೋಟಿಸ್

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 14:00 IST
Last Updated 16 ಏಪ್ರಿಲ್ 2021, 14:00 IST
ರಮೇಶ್‌ ಜಾರಕಿಹೊಳಿ
ರಮೇಶ್‌ ಜಾರಕಿಹೊಳಿ    

ಬೆಳಗಾವಿ: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‍ಐಟಿ)ದ ಇಬ್ಬರು ಅಧಿಕಾರಿಗಳು ಜಿಲ್ಲೆಯ ಗೋಕಾಕಕ್ಕೆ ಶುಕ್ರವಾರ ಭೇಟಿ ನೀಡಿದ್ದರು.‌

ಏ.20ರ ಸಂಜೆ 4ಕ್ಕೆ ವಿಚಾರಣೆಗೆ ಹಾಜರಾಗುವಂತೆ ರಮೇಶ ಜಾರಕಿಹೊಳಿ ಅವರಿಗೆ ನೋಟಿಸ್ ನೀಡಿದ್ದಾರೆ. ಖುದ್ದು ಭೇಟಿಯಾಗಿ ನೋಟಿಸ್ ತಲುಪಿಸಲು ಬಂದಿದ್ದ ಅಧಿಕಾರಿಗಳಿಗೆ ಶಾಸಕರು ಲಭ್ಯವಾಗಲಿಲ್ಲ. ಕೋವಿಡ್–19 ಕಾರಣದಿಂದ ಅವರು ಗೃಹ ಕಚೇರಿಗೆ ಬಂದಿಲ್ಲ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ. ಹೀಗಾಗಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಚೇರಿಗೆ ತೆರಳಿ ನೋಟಿಸ್ ತಲುಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಸ್‌ಐಟಿಯ ಇಬ್ಬರು ಅಧಿಕಾರಿಗಳು ಏ.6ರಂದು ಗೋಕಾಕದ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ, ಕೋವಿಡ್–19ನಿಂದಾಗಿ ದಾಖಲಾಗಿದ್ದ ರಮೇಶ ಅವರ ಆರೋಗ್ಯ ಸ್ಥಿತಿ ಕುರಿತು ವೈದ್ಯರಿಂದ ಮಾಹಿತಿ ಪಡೆದಿದ್ದರು. ಅವರ ಆರೋಗ್ಯ ವರದಿ ಪರಿಶೀಲಿಸಿದ್ದರು. ಆಸ್ಪತ್ರೆಯಿಂದ ಬಿಡುಗಡೆಗೂ ಮುನ್ನವೇ ಮಾಹಿತಿ ನೀಡಬೇಕು ಎಂದು ವೈದ್ಯಾಧಿಕಾರಿಗೆ ಸೂಚಿಸಿದ್ದರು. ಏ.7ರಂದು ರಮೇಶ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.