ADVERTISEMENT

ಉದ್ಯಮದಲ್ಲಿ ಸೃಜನಶೀಲತೆ ಅಗತ್ಯ

‘ಅದ್ವೈತ್-19’ ಉತ್ಸವ ಉದ್ಘಾಟಿಸಿದ ಡಾ.ವಿವೇಕ ಸಾವಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 11:38 IST
Last Updated 20 ಫೆಬ್ರುವರಿ 2019, 11:38 IST
ಬೆಳಗಾವಿಯ ಜಿಐಟಿಯಲ್ಲಿ ನಡೆದ ಅದ್ವೈತ್‌ ಉತ್ಸವವನ್ನು ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ವಿವೇಕ ಸಾವಜಿ ಉದ್ಘಾಟಿಸಿದರು
ಬೆಳಗಾವಿಯ ಜಿಐಟಿಯಲ್ಲಿ ನಡೆದ ಅದ್ವೈತ್‌ ಉತ್ಸವವನ್ನು ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ವಿವೇಕ ಸಾವಜಿ ಉದ್ಘಾಟಿಸಿದರು   

ಬೆಳಗಾವಿ: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯಮದಲ್ಲಿ ಯಶಸ್ಸು ಕಾಣಬೇಕಾದರೆ ನಾವೀನ್ಯತೆ ಹಾಗೂ ಸೃಜನಶೀಲತೆ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ’ ಎಂದು ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಕುಲಪತಿ ಡಾ.ವಿವೇಕ ಸಾವಜಿ ಹೇಳಿದರು.

ಇಲ್ಲಿನ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಕಾಲೇಜಿನ ಎಂಬಿಎ ವಿಭಾಗದಿಂದ ಬುಧವಾರ ಆಯೋಜಿಸಿದ್ದ ‘ಅದ್ವೈತ್-19’ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವುದೇ ಹೊಸ ಉದ್ಯಮ ಆರಂಭಿಸಲು ಹೊಸ ಚಿಂತನೆಗಳ ಅವಶ್ಯಕತೆ ಇದೆ. ಹೊಸತನದಿಂದ ಕೂಡಿದ ಕಲ್ಪನೆಯ ಅಗತ್ಯವಿದೆ. ಬೆಳವಣಿಗೆಗೆ ಇದು ಮಹತ್ವದ್ದಾಗಿದೆ. ಹೀಗಾಗಿ, ಯುವ ಉದ್ಯಮಿಗಳು ಅಥವಾ ಉದ್ಯಮಿ ಆಗಲು ಬಯಸುವವರು ಸೃಜನಶೀಲತೆ, ಕಲ್ಪನಾಶಕ್ತಿ ಮತ್ತು ನಾವೀನ್ಯತೆ ಅಂಶಗಳನ್ನು ಬೆಳೆಸಿಕೊಳ್ಳಬೇಕು. ಅವುಗಳ ಪ್ರಾಮುಖ್ಯತೆಯನ್ನು ಹಾಗೂ ಉದ್ಯಮಗಳ ವ್ಯವಹಾರಿಕ ಯೋಜನೆಗಳಲ್ಲಿನ ಪಾತ್ರವನ್ನು ಅರ್ಥ ಮಾಡಿಕೊಳ್ಳುವುದರಿಂದ ಯಶಸ್ಸು ಗಳಿಸಬಹುದು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಆರ್ಥಿಕತೆಯ ಜೀವ:

‘ಹೊಸ ಆವಿಷ್ಕಾರಗಳು ಜಗತ್ತಿನ ಯಾವುದೇ ಆರ್ಥಿಕತೆಯ ಜೀವ ಎಂದರೆ ತಪ್ಪಾಗಲಾರದು. ಹೊಸ ಕಲ್ಪನೆಗಳು ಉದ್ಯಮ ರಂಗವನ್ನು ಬಲಿಷ್ಠಗೊಳಿಸುವುದಲ್ಲದೇ ರಾಷ್ಟ್ರದ ಆರ್ಥಿಕತೆಯನ್ನು ಸದೃಢಪಡಿಸುತ್ತವೆ. ಈಗ ಅಸ್ತಿತ್ವದಲ್ಲಿರುವ ಉದ್ಯಮದ ವ್ಯವಹಾರಿಕ ಮಾದರಿಗಳು ಹಳೆಯದಾಗಿವೆ. ಜನರ ಬೇಡಿಕೆಯ ಮನಸ್ಥಿತಿಗಳು ಬದಲಾದಂತೆ ಅವುಗಳು ಬದಲಾದರೆ ಮಾತ್ರ ಉಳಿಯುತ್ತವೆ’ ಎಂದು ಪ್ರತಿಪಾದಿಸಿದರು.

‘ಯಾಂತ್ರೀಕರಣ ಮತ್ತು ಜನಸಂಖ್ಯೆ ಸ್ಫೋಟದಿಂದಾಗಿ ನಿರುದ್ಯೋಗ ಪರಿಸ್ಥಿತಿ ಹೆಚ್ಚಾಗುತ್ತಿದೆ. ಅದು ಆರ್ಥಿಕ ಅಸ್ಥಿರತೆ ಉಂಟು ಮಾಡುತ್ತದೆ. ಈ ಸಾಮಾಜಿಕ ಸಮಸ್ಯೆ ನಿಭಾಯಿಸಲು ಮತ್ತು ಉದ್ಯಮ ರಂಗದ ಬೆಳವಣಿಗೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ನಾವು ಯುವ ಪ್ರತಿಭಾವಂತ ಮನಸ್ಸಗಳನ್ನು ಉದ್ಯಮ ಪ್ರಾರಂಭಿಸಲು ಮತ್ತು ಉದ್ಯಮಿಗಳಾಗಲು ಪ್ರೇರೇಪಿಸಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್ಎಸ್‌–ಐಎಂಇಆರ್‌ ಕಾರ್ಯಾಧ್ಯಕ್ಷ ರಾಜೇಂದ್ರ ಬೆಳಗಾಂವಕರ ಮಾತನಾಡಿ, ‘ನವೋದ್ಯಮ ಆರಂಭಿಸುವಾಗ ಬದ್ಧತೆ ಬಹಳ ಮುಖ್ಯ’ ಎಂದು ಹೇಳಿದರು.

‘ಪ್ರಸ್ತುತ ಉದ್ಯಮ ರಂಗದಲ್ಲಿ ಸಾಕಷ್ಟು ಅವಕಾಶಗಳಿವೆ. ಜೊತೆಗೆ ಸವಾಲುಗಳನ್ನು ಎದುರಿಸುವುದಕ್ಕೂ ಸಜ್ಜಾಗಬೇಕು. ಆಗ ಶ್ರೇಷ್ಠ ಸಾಧನೆ ಮಾಡಬಹುದು’ ಎಂದರು.

ಜಿಐಟಿ ಪ್ರಾಚಾರ್ಯ ಎ.ಎಸ್‌. ದೇಶಪಾಂಡೆ ಪ್ರಾಸ್ತಾವಿಕ ಸ್ವಾಗತಿಸಿದರು. ಎಂಬಿಎ ವಿಭಾಗದ ಡೀನ್ ಪ್ರೊ.ಕೃಷ್ಣಶೇಖರ ಲಾಲದಾಸ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿ ಪ್ರತಿನಿಧಿ ಓಂಕಾರ ಮಾನೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.