ADVERTISEMENT

ಬೈಲಹೊಂಗಲ: ಕುಂಟುತ್ತಿರುವ ಕಾಮಗಾರಿ, ಜನ ಹೈರಾಣ

ಹರಳಯ್ಯ ಬಡಾವಣೆಯಲ್ಲಿ ಜನರಿಗೆ ಸಮಸ್ಯೆ

ರವಿ ಎಂ.ಹುಲಕುಂದ
Published 25 ಜನವರಿ 2022, 19:30 IST
Last Updated 25 ಜನವರಿ 2022, 19:30 IST
ಬೈಲಹೊಂಗಲದ ಹರಳಯ್ಯ ಬಡಾವಣೆಯಲ್ಲಿ ಪ್ರಮುಖ ರಸ್ತೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ
ಬೈಲಹೊಂಗಲದ ಹರಳಯ್ಯ ಬಡಾವಣೆಯಲ್ಲಿ ಪ್ರಮುಖ ರಸ್ತೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ   

ಬೈಲಹೊಂಗಲ: ಪುರಸಭೆ ವ್ಯಾಪ್ತಿಯಲ್ಲಿರುವ ಹರಳಯ್ಯ ಬಡಾವಣೆಯಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಪಕ್ಕ ಪ್ರಮುಖ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿರುವುದರಿಂದ, ಸುತ್ತಮುತ್ತಲಿನ ನಿವಾಸಿಗಳು ಬೇಸತ್ತು ಹೋಗಿದ್ದಾರೆ.

ರಸ್ತೆ ಮದ್ಯ ಎಲ್ಲೆಂದರಲ್ಲಿ ಗುಂಡಿ ತೋಡಿ ಹಾಗೆಯೇ ಬಿಡಲಾಗಿದೆ. ಇದರಿಂದ ನಿತ್ಯವೂ ಯಾರಾರೊಬ್ಬರು ಗುಂಡಿಯಲ್ಲಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಕೆಲವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನೂ ಪಡೆದಿದ್ದಾರೆ. ಕಲ್ಲು, ಮಣ್ಣಿನಿಂದ ಕೂಡಿರುವ ರಸ್ತೆಯಲ್ಲಿ ದ್ವಿಚಕ್ರವಾಹನಗಳನ್ನು ನಡೆಸಲು ಸವಾರರು ಹರಸಾಹಸ ಪಡುವಂತಾಗಿದೆ. ಅಲ್ಲಿನ ಪರಿಸ್ಥಿತಿಯು ಅಪಘಾತ, ಅನಾಹುತಕ್ಕೂ ಆಹ್ವಾನ ನೀಡುತ್ತಿದೆ.

ಆಮೆ ಗತಿ ಕಾಮಗಾರಿ: ಬಡಾವಣೆಯಲ್ಲಿ ಹದಗೆಟ್ಟಿದ್ದ ರಸ್ತೆ, ಚರಂಡಿ ಪುನರ್‌ ನಿರ್ಮಾಣ ಕಾಮಗಾರಿ ನಡೆದಿದ್ದು, ಆಮೆ ಗತಿಯಲ್ಲಿ ಸಾಗಿದೆ. ವಾರ್ಡ್ಸದಸ್ಯ, ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರಿಗೆ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಯಾವುದೆ ಅಡಚಣೆ ಇಲ್ಲದೆ ವಾಹನಗಳ ಓಡಾಟ, ಪಾದಚಾರಿಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಜನರು ಕೋರಿದ್ದರು. ಆದರೆ ಕಾಮಗಾರಿ ಮಾತ್ರ ಆಮೆವೇಗದಲ್ಲಿ ಸಾಗಿದೆ. ಇದರಿಂದ ತೊಂದರೆ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ಬಡಾವಣೆ ನಿವಾಸಿಗಳು.

ADVERTISEMENT

ಸಂಬಂಧಿಸಿದವರು ಇತ್ತ ಗಮನಹರಿಸಿ, ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು ಎನ್ನುವ ಮನವಿ ಅವರದು.

ಹರಳಯ್ಯ ಭವನಕ್ಕೆ ಸೌಲಭ್ಯ ಒದಗಿಸಿ: ಇಲ್ಲಿರುವ ಸಮುದಾಯ ಭವನದದಲ್ಲಿ ಅಗತ್ಯ ಸವಲತ್ತುಗಳನ್ನು ಕಲ್ಪಿಸಬೇಕು. ಗುಣಮಟ್ಟದ ಚಾವಣಿ ನಿರ್ಮಿಸಬೇಕು. ಉದ್ಯಾನ ಅಭಿವೃದ್ಧಿಪಡಿಸಿ ಸೌಲಭ್ಯ ನೀಡಬೇಕು. ಬೀದಿ ದೀಪ, ಒಳಚರಂಡಿ ನಿರ್ವಹಣೆ ಹಾಗೂ ಸ್ವಚ್ಛತೆಗೆ ಆದ್ಯತೆ ಕೊಡಬೇಕು. ನಾಗರಿಕ ಸೌಲಭ್ಯಗಳಿಗಾಗಿ ಪರದಾಡುವುದನ್ನು ಪರಸಭೆಯ ಅಧಿಕಾರಿಗಳು ತಪ್ಪಿಸಬೇಕು ಎಂದು ನಿವಾಸಿಗಳಾದ ಪರುಶರಾಮ ರಾಯಬಾಗ ಮತ್ತು ಮಲ್ಲಿಕಾರ್ಜುನ ಕಾಂಬ್ಳೆ ಒತ್ತಾಯಿಸಿದರು.

‘ಹರಳಯ್ಯ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಸ್ತೆ, ಚರಂಡಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗಿದೆ. ಪುರಸಭೆಯಿಂದ ಕುಡಿಯುವ ನೀರಿನ ಪೈಪ್‌ಲೈನ್ ಮಾತ್ರ ಅಳವಡಿಸಲಾಗುತ್ತಿದೆ. ಜನರಿಗೆ ತೊಂದರೆ ಆಗದ ರೀತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಾಧಿಕಾರಿ ಕೆ.ಐ. ನಾಗನೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.