ADVERTISEMENT

ಸವದತ್ತಿ: ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 13:53 IST
Last Updated 13 ಸೆಪ್ಟೆಂಬರ್ 2024, 13:53 IST
ಸವದತ್ತಿಯಲ್ಲಿ ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಎಸ್‌ಡಿಪಿಐನಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು
ಸವದತ್ತಿಯಲ್ಲಿ ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಎಸ್‌ಡಿಪಿಐನಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು   

ಸವದತ್ತಿ: ಕೇಂದ್ರದ 2024ರ ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಲ್ಲಿನ ತಾಲ್ಲೂಕು ಆಡಳಿತಸೌಧದ ಎದುರು ಸೋಷಿಯಲ್ ಡೆಮಾಕ್ರಟಿಕ್ ಆಫ್ ಇಂಡಿಯಾದಿಂದ ಶುಕ್ರವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಎಂ.ಎನ್. ಹೆಗ್ಗನ್ನವರ ಅವರಿಗೆ ಮನವಿ ಸಲ್ಲಿಸಲಾಯಿತು.

ಸಮಾಜದ ಪ್ರಮುಖ ಡಾ.ಬಸೀರ್‌ಅಹ್ಮದ ಬೈರೇಖದಾರ್ ಮಾತನಾಡಿ, ‘ಪ್ರಧಾನಿ ಮೋದಿಗಿಂತ ದುಪ್ಪಟ್ಟು ದೇಶ ಪ್ರೇಮ ನಮ್ಮಲ್ಲೂ ಇದೆ. ನಾವೂ ಸಹ ಭಾರತಾಂಬೆ ಮಕ್ಕಳೇ ಆಗಿದ್ದು, ನಿತ್ಯ ಐದು ಬಾರಿ ಈ ಮಣ್ಣಿಗೆ ತಲೆ ಭಾಗಿ ಪ್ರಾರ್ಥಿಸುತ್ತೇವೆ. ಪ್ರವಾದಿ ಮೊಹ್ಮದರು, ವಿಶ್ವಗುರು ಬಸವಣ್ಣವರು, ಶಾಂತಿದೂತ ಏಸುವಿನ ಸನ್ಮಾರ್ಗದಲ್ಲಿ ನಡೆಯುತ್ತಿರುವ ನಾವು ಅನ್ಯಾಯದ ವಿರುದ್ಧ ಪ್ರತಿಭಟಿಸಲು ಹಿಂಜರಿಯುವದಿಲ್ಲ’ ಎಂದರು.

‘ಸೌಹಾರ್ದಕ್ಕೆ ಧಕ್ಕೆ ತರುವ ವಿಷಯಗಳ ಬದಲು ಮಹಿಳೆಯರ ಸುರಕ್ಷತೆ, ಬಡತನ, ಹಸಿವು ಕುರಿತು ಬೆಳಕು ಚೆಲ್ಲುವ ಕಾರ್ಯ ನಡೆಯಲಿ. ಎನ್‌ಆರ್‌ಸಿ, ಸಿಎಎ, ಹಿಜಾಬ್, ತಲಾಕ್ ಗಳಂತಹ ಮುಸ್ಲಿಂ ವಿರೋಧಿ ಕಾನೂನು ಜಾರಿಗೊಳಿಸಿ ಸಮುದಾಯವನ್ನು ನಿಯಂತ್ರಿಸುವ ಹುನ್ನಾರ ನಡೆಸಲಾಗಿತ್ತು. ಹತ್ತಿಕ್ಕಿದಷ್ಟು ಪುಟಿದೇಳುವ ಮನೋಬಲ ನಮ್ಮಲ್ಲಿದೆ. ಶಾಂತಿಗೆ ಧಕ್ಕೆ ತರುವ ವಿಷಯಗಳನ್ನು ಮುನ್ನೆಲೆಗೆ ತರದಿರಿ’ ಎಂದು ಎಚ್ಚರಿಸಿದರು.

ADVERTISEMENT

ಎಸ್‌ಡಿಪಿಐ ಜಿಲ್ಲಾ ಕೌನ್ಸಿಲಿಂಗ್ ಸದಸ್ಯ ತಾಹೀರ ಶೇಖ ಮಾತನಾಡಿ, ಬ್ರಿಟಿಷರಂತೆ ಮೋದಿ ಸರ್ಕಾರ ಮುಸ್ಲಿಂ ಆಸ್ತಿ ಕಬಳಿಕೆಗೆ ಮುಂದಾಗಿದೆ. ಇಂತಹ ಕಾನೂನುಗಳನ್ನು ಎಸ್‌ಡಿಪಿಐ ಖಂಡಿಸುತ್ತದೆ. ಈ ಕಾಯ್ದೆ ಹಿಂಪಡೆಯದಿದ್ದಲ್ಲಿ ರಾಷ್ಟ್ರವ್ಯಾಪಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪಿಐ ಧರ್ಮಾಕರ ಧರ್ಮಟ್ಟಿ, ಪಿಎಸ್‌ಐ ಆನಂದ ಕ್ಯಾರಕಟ್ಟಿ ನೇತೃತ್ವದಲ್ಲಿ ಸೂಕ್ತ ಭದ್ರತೆ ಒದಗಿಸಲಾಗಿತ್ತು.

ಈ ವೇಳೆ ಮೌಲಾನಾ ರಪೀಕ ಯರಗಟ್ಟಿ, ಸಲೀಮ್ ಪಠಾಣ, ಶಾಹೀದ ನದಾಫ್, ಮುಜಮ್ಮಿಲ್ ಹುಕ್ಕೇರಿ, ಇನಾಯತ್ ಮುಲ್ಲಾ, ಅಜರುದ್ಧೀನ್ ಕಳ್ಳಿಮನಿ, ಆಸೀಫ್ ಮುರ್ತೋಜಿ, ಮಾಜ್ ವಟ್ನಾಳ, ರಿಯಾಜ ಹಸನಬಾರ, ಸಮೀರ ಇನಾಮದಾರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.