ADVERTISEMENT

ಬೋಪೋರ್ಸ್‌ ಫಿರಂಗಿ ಬಳಕೆಯಲ್ಲಿ ನಿಪುಣ

ಕಾರ್ಗಿಲ್‌ ವಿಜಯೋತ್ಸವ: ಅಸುಂಡಿಯ ವೀರಯೋಧ ಮಡಿವಾಳಪ್ಪ ನಿಂಗಪ್ಪ ಹಡಪದ

ಸದಾಶಿವ ಮಿರಜಕರ
Published 25 ಜುಲೈ 2019, 19:30 IST
Last Updated 25 ಜುಲೈ 2019, 19:30 IST
ಮಡಿವಾಳಪ್ಪ ನಿಂಗಪ್ಪ ಹಡಪದ
ಮಡಿವಾಳಪ್ಪ ನಿಂಗಪ್ಪ ಹಡಪದ   

ಸವದತ್ತಿ: ಈ ಗ್ರಾಮದ ಜನಸಂಖ್ಯೆ ಒಂದು ಸಾವಿರ ಕೂಡ ಮೀರುವುದಿಲ್ಲ. ಅಷ್ಟೊಂದು ಚಿಕ್ಕದಾದ ಹಳ್ಳಿ ಇದು. ಆದರೆ, ಇಲ್ಲಿರುವ ಪ್ರತಿಯೊಬ್ಬರಲ್ಲಿಯೂ ಸೈನ್ಯದಲ್ಲಿ ಕೆಲಸ ಮಾಡಬೇಕೆಂಬ ತುಡಿತ ಅಪಾರವಾಗಿದೆ. ಇದು ಇಲ್ಲಿನ ಪರಂಪರೆ ಎನ್ನುವಷ್ಟರ ಮಟ್ಟಿಗೆ ಹಲವಾರು ವರ್ಷಗಳಿಂದ ನೂರಾರು ಜನರು ಸೈನ್ಯದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರಲ್ಲಿ ಮಡಿವಾಳಪ್ಪ ನಿಂಗಪ್ಪ ಹಡಪದ ಕೂಡ ಒಬ್ಬರಾಗಿದ್ದರು.

ಕೃಷಿ ಕುಟುಂಬದಿಂದ ಬಂದಿದ್ದ ಮಡಿವಾಳಪ್ಪ ಅವರು ‘ಜೈ ಜವಾನ್‌ ಜೈ ಕಿಸಾನ್‌’ ತತ್ವದಲ್ಲಿ ನಂಬಿಕೆ ಇಟ್ಟಿದ್ದರು. ಊರಲ್ಲಿದ್ದರೆ ಜಮೀನಿನಲ್ಲಿ ಕೆಲಸ ಮಾಡಬೇಕು. ಇಲ್ಲದಿದ್ದರೆ, ದೇಶ ರಕ್ಷಿಸಲು ಸೇನೆ ಸೇರಬೇಕು ಎನ್ನುವ ಮಹದಾಸೆ ಹೊಂದಿದ್ದರು. ಕಾಲೇಜು ಶಿಕ್ಷಣ ಪೂರ್ಣವಾಗುತ್ತಿದ್ದಂತೆ ಸೇನೆ ಸೇರಿದ್ದರು.

ಅತ್ಯಂತ ಕಠಿಣವಾಗಿ ನೀಡುತ್ತಿದ್ದ ತರಬೇತಿಯನ್ನು ಪೂರ್ಣಗೊಳಿಸಿದ್ದರು. ತಮ್ಮ ಕಠಿಣ ಪರಿಶ್ರಮದಿಂದ ಲಾಸ್‌ ನಾಯಕ ಹುದ್ದೆಗೆ ಏರಿದ್ದರು. ಕಾರ್ಗಿಲ್‌ ಯುದ್ಧ ಆರಂಭವಾಗುವ ಸಮಯದಲ್ಲಿ ಅವರು ರಜೆಯಲ್ಲಿದ್ದರು. ಯುದ್ಧ ಆರಂಭವಾಗುವ ಸೂಚನೆ ದೊರೆಯುತ್ತಿದ್ದಂತೆ ತಮ್ಮ ರಜೆ ರದ್ದುಗೊಳಿಸಿ, ಸೇನೆಗೆ ವಾಪಸ್ಸಾದರು. ಬೋಫೋರ್ಸ್‌ ಫಿರಂಗಿಯನ್ನು ಹಾರಿಸುವುದಲ್ಲಿ ನಿಸ್ಸೀಮರಾಗಿದ್ದರು. ಇದೇ ಕಾರಣಕ್ಕಾಗಿ ಅವರಿಗೆ ಕಾರ್ಗಿಲ್‌ ಯುದ್ಧದಲ್ಲಿ ಬಹಳಷ್ಟು ಪ್ರಾಮುಖ್ಯತೆ ದೊರೆತಿತ್ತು.

ADVERTISEMENT

‘ಯುದ್ಧದಲ್ಲಿ ಪಾಲ್ಗೊಂಡು, ಹಲವು ಶತ್ರುಗಳನ್ನು ಸದೆಬಡಿದಿದ್ದರು. ಹತ್ತಾರು ಜನರನ್ನು ಬಲಿಪಡೆದ ಅವರು, ಜೂನ್‌ 17ರಂದು ಯುದ್ಧದಲ್ಲಿ ಶತ್ರುಗಳ ಗುಂಡಿಗೆ ಹುತಾತ್ಮರಾದರು. ಕೊನೆಯ ಉಸಿರಿರುವವರೆಗೂ ದೇಶರಕ್ಷಣೆ ಮಾಡುವ ಮೂಲಕ ಅಜರಾಮರರಾದರು’ ಎಂದು ಪತ್ನಿ ಮಹಾದೇವಿ ಸ್ಮರಿಸಿದರು.

ಅವರಲ್ಲಿದ್ದ ಶಿಸ್ತು, ಸಮಯ ಪಾಲನೆ, ನಡೆ, ನುಡಿಗಳಿಂದ ಪ್ರೇರಣೆಗೊಂಡ ಗ್ರಾಮದ ಹಲವು ಯುವಕರು ಸೇನೆಗೆ ಸೇರಿದ್ದಾರೆ. ಅವರನ್ನು ತಮ್ಮ ಆದರ್ಶ ವ್ಯಕ್ತಿಯನ್ನಾಗಿ ಇಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.