ADVERTISEMENT

ಮನೆ, ವಾಹನಗಳ ಮೇಲೆ ಕಲ್ಲು ತೂರಾಟ: 4 ವಾಹನಗಳು ಜಖಂ

ಕಾನೂನು ಸಂಘರ್ಷಕ್ಕೆ ಒಳಪಟ್ಟವರ ಹೊಡೆದಾಟ

​ಪ್ರಜಾವಾಣಿ ವಾರ್ತೆ
Published 3 ಜನವರಿ 2024, 16:47 IST
Last Updated 3 ಜನವರಿ 2024, 16:47 IST
ಬೆಳಗಾವಿ ತಾಲ್ಲೂಕಿನ ನಾವಗೆ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಹುಡಗರು ತೂರಿದ ಕಲ್ಲಿನಿಂದ ಜಖಂಗೊಂಡ ವಾಹನಗಳು
ಬೆಳಗಾವಿ ತಾಲ್ಲೂಕಿನ ನಾವಗೆ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಹುಡಗರು ತೂರಿದ ಕಲ್ಲಿನಿಂದ ಜಖಂಗೊಂಡ ವಾಹನಗಳು   

ಪ್ರಜಾವಾಣಿ ವಾರ್ತೆ

ಬೆಳಗಾವಿ: ತಾಲ್ಲೂಕಿನ ನಾವಗೆ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಕಲ್ಲು ತೂರಾಟ ನಡೆದಿದ್ದು, ಮೂರು ಮನೆ ಹಾಗೂ ನಾಲ್ಕು ವಾಹನಗಳು ಜಖಂಗೊಂಡಿವೆ.

ಗ್ರಾಮದ ಪಂಚರಾದ ಮಾರುತಿ ಹುರಕಡ್ಲಿ, ಸಂಜಯ ಹುಂದರವಾಡಿ ಮತ್ತು ಇನ್ನೊಬ್ಬರ ಮನೆ ಮೇಲೆ ಕಲ್ಲು ತೂರಲಾಗಿದೆ. ಪ್ರೇಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬುದ್ಧಿವಾದ ಹೇಳಿದ್ದೆ ಇದಕ್ಕೆ ಕಾರಣ ಎಂದು ಸಂತ್ರಸ್ತರು ದೂರಿದ್ದಾರೆ.

ADVERTISEMENT

‘ಕಲ್ಲು ತೂರಿದವರಲ್ಲಿ 15ಕ್ಕೂ ಹೆಚ್ಚು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರಿದ್ದಾರೆ. 18 ವರ್ಷ ಮೇಲ್ಪಟ್ಟ ಇಬ್ಬರು ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಒಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕೆ ಪ್ರೇಮ ಪ್ರಕರಣವೇ ಕಾರಣ ಎಂಬುದಕ್ಕೆ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ದೂರಿನಲ್ಲೂ ಸ್ಪಷ್ಟತೆಯಿಲ್ಲ’ ಎಂದು ನಗರ ಪೊಲೀಸ್‌ ಕಮಿಷನರ್ ಎಸ್‌.ಎನ್‌.ಸಿದ್ರಾಮಪ್ಪ ತಿಳಿಸಿದರು.

‘ರಾತ್ರಿ ಏಕಾಏಕಿ ಮನೆ ಮೇಲೆ ದಾಳಿ ಮಾಡಿದ್ದಾರೆ. ಚಾಕು, ಚೂರಿಗಳನ್ನು ತೋರಿಸಿ ಹೆದರಿಸಿದ್ದಾರೆ. ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಮನೆ ಮೇಲೆ ಕಲ್ಲು ತೂರಿದ್ದಾರೆ. ನಮ್ಮ ಕಾರ್‌, ಬೈಕ್‌ಗಳನ್ನು ಜಖಂಗೊಳಿಸಿದ್ದಾರೆ’ ಎಂದು ಮಾರುತಿ ಹೇಳಿದರು.ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು:

‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಂದಿಗಿನ ತ್ರಿಕೋನ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವಗೆ ಹಾಗೂ ಬಾದರವಾಡಿ ಹುಡುಗರ ಮಧ್ಯೆ ಜಗಳ ನಡೆದಿತ್ತು. ನಾವಗೆಯ ಪಂಚರು ಬುದ್ಧಿವಾದ ಹೇಳಿದ್ದರು. ಈ ವೇಳೆ ನಾವಗೆ ಹಾಗೂ ಬಾದರವಾಡಿ ಹುಡುಗರ ಮಧ್ಯೆ ಗಲಾಟೆ ನಡೆದಿತ್ತು. ಇದೇ ಸಿಟ್ಟಿನಿಂದ ಮರಳಿ ಬಂದ ಹುಡುಗರು ಮನೆ ಹಾಗೂ ವಾಹನಗಳ ಮೇಲೆ ಕಲ್ಲು ತೂರಿದ್ದಾರೆ’ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.

ಗ್ರಾಮಕ್ಕೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪರಿಸ್ಥಿತಿ ಅವಲೋಕಿಸಿದರು. ಗ್ರಾಮದ ಜನರನ್ನು ಸೇರಿಸಿ ಧೈರ್ಯ ಹೇಳಿದರು.

ಬೆಳಗಾವಿ ತಾಲ್ಲೂಕಿನ ನಾವಗೆ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಕಲ್ಲು ತೂರಾಟ ನಡೆದ ಮಾರುತಿ ಹುರಕಡ್ಲಿ ಅವರ ಮನೆಗೆ ಸಚಿವ ಲಕ್ಷ್ಮೀ ಹೆಬ್ಬಾಳಕರ ಮಂಗಳವಾರ ಭೇಟಿ ನೀಡಿದರು
ಶಾಲೆ ಕಾಲೇಜಿಗೆ ತೆರಳುವ ಮಕ್ಕಳು ಸಿಟ್ಟಿನಿಂದ ಈ ಕೃತ್ಯ ನಡೆದಿದೆ. ಎರಡೂ ಗ್ರಾಮಗಳ ಹಿರಿಯರನ್ನು ಕರೆಸಿ ಮಾತುಕತೆ ನಡೆಸಿ ಇಂಥ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು.
-ಲಕ್ಷ್ಮೀ ಹೆಬ್ಬಾಳಕರ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.