ADVERTISEMENT

ಇಡಿ ದಾಳಿಗೆ ‍‍‍‍ಇಎಫ್‌ಐ ಖಂಡನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 14:50 IST
Last Updated 11 ಡಿಸೆಂಬರ್ 2020, 14:50 IST

ಬೆಳಗಾವಿ: ಪಿಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಕಾರ್ಯಾಲಯಗಳ ಮೇಲೆ ಇಡಿ (ಜಾರಿ ನಿರ್ದೇಶನಾಲಯ) ದಾಳಿ ನಡೆಸಿರುವುದನ್ನು ಖಂಡಿಸಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಸರ್ಕಾರವನ್ನು ವಿರೋಧಿಸುವ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಂಘಟನೆಗಳ ವಿರುದ್ಧ ‌ಸರ್ಕಾರಿ ಏಜೆನ್ಸಿಗಳನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ದೇಶದ ವಿವಿಧೆಡೆ ಪಿಎಫ್‌ಐ ನಾಯಕರ ನಿವಾಸಗಳು ಮತ್ತು ಕಚೇರಿಗಳ ಮೇಲೆ ಇಡಿಯಿಂದ ದಾಳಿ ಮಾಡಿಸಲಾಗಿದೆ. ಇದನ್ನು ಗಮನಿಸಿದರೆ, ಏಜೆನ್ಸಿಯು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬದಲಿಗೆ ಬಿಜೆಪಿಯ ಅಸ್ತ್ರವಾಗಿ ಬಳಕೆ ಆಗುತ್ತಿವೆ’ ಎಂದು ದೂರಿದರು.

‘ಬಿಜೆಪಿಯ ಜನ ವಿರೋಧಿ ಸಿದ್ಧಾಂತದ ವಿರುದ್ಧ ರಾಜಿ ಇಲ್ಲದ ನಿಲುವು ಹೊಂದಿರುವ ಕಾರಣಕ್ಕಾಗಿ ಪಿಎಫ್‌ಐ ಬೇಟೆ ಆಡಲಾಗುತ್ತಿದೆ. ಮುಸ್ಲಿಮರು ಸೇರಿದಂತೆ ಶೋಷಿತ ಎಲ್ಲ ಸಮುದಾಯಗಳ ಸಬಲೀಕರಣಕ್ಕಾಗಿ ದುಡಿಯುತ್ತಿರುವ ಸಂಘಟನೆಯು, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಕಾನೂನು ರಕ್ಷಣೆಯ ಜವಾಬ್ದಾರಿಯನ್ನು ಪೂರೈಸುವ ನಿಟ್ಟಿನಲ್ಲಿ ಸರ್ಕಾರಿ ಏಜೆನ್ಸಿನಗಳ ದುರ್ಬಳಕೆ ತಡೆದು, ಅವುಗಳ ವಿಶ್ವಾಸಾರ್ಹತೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.