ಬೆಳಗಾವಿ: ಇಡೀ ಊರಿನ ಆರೋಗ್ಯವನ್ನು ಕಾಪಾಡುವುದು ಪೌರಕಾರ್ಮಿಕರು. ಆದರೆ, ಅವರ ಆರೋಗ್ಯದ ಬಗ್ಗೆಯೇ ಕಾಳಜಿ ವಹಿಸುವವರು ಇಲ್ಲ.
ಬೆಳಗಾವಿ ಮಹಾನಗರ ಪಾಲಿಕೆಯೂ ಸೇರಿದಂತೆ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳ ಪೌರಕಾರ್ಮಿಕರ ಗೋಳು ಕೇಳುವವರು ದಿಕ್ಕಿಲ್ಲ. ನಿಯಮಿತ ಆರೋಗ್ಯ ತಪಾಸಣೆ ಮಾಡಿಸಬೇಕು ಎಂಬ ಕನಿಷ್ಠ ಸೌಜನ್ಯವನ್ನೂ ಸ್ಥಳೀಯ ಸಂಸ್ಥೆಗಳು ತೋರಿಲ್ಲ.
‘ಒಂದು ವರ್ಷದ ಹಿಂದೆ ಅಶೋಕ ದುಡಗುಂಟಿ ಅವರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದಾಗ ಆರೋಗ್ಯ ತಪಾಸಣೆ ಮಾಡಿಸಿದ್ದರು. ಇಲ್ಲಿನ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಸಮಗ್ರ ಆರೋಗ್ಯ ಚಿಕಿತ್ಸೆ ಕೊಡಿಸಿದ್ದರು. ವರ್ಷ ಕಳೆದರೂ ಯಾರೂ ಆರೋಗ್ಯದ ಬಗ್ಗೆ ಕಾಲಜಿ ತೋರಿಲ್ಲ’ ಎಂದು ಕಾರ್ಮಿಕ ಮಹಿಳೆಯರು ಆರೋಪಿಸುತ್ತಾರೆ.
ನಸುಕಿನ 4ಕ್ಕೇ ಎದ್ದು, ಕಸ, ಮುಸುರೆ, ರೊಚ್ಚು, ಕೊಳೆತ ವಸ್ತುಗಳು, ಮಾಂಸಾಹಾರದ ತ್ಯಾಜ್ಯ, ಸತ್ತ ಪ್ರಾಣಿಗಳ ದೇಹ ಸೇರಿದಂತೆ ಎಲ್ಲವನ್ನೂ ತೆರವು ಮಾಡುವ ಜೀವಗಳಿವು. ಇಡೀ ಬದುಕನ್ನು ಕಸದಲ್ಲೇ ಕಳೆಯುವುದರಿಂದ ಅವರಿಗೆ ರೋಗಗಳು ತಗಲುವ, ಅನಾರೋಗ್ಯ ಉಂಟಾಗುವ ಸಂಭವ ಹೆಚ್ಚಿರುತ್ತದೆ. ಅದಲ್ಲದೇ, ಪ್ರತಿ ದಿನವೂ ನಿಯಮಿತವಾಗಿ ನಿದ್ದೆ ಮಾಡದ ಕಾರಣ ದೇಹದಲ್ಲಿ ಅಸಮತೋಲನ, ರಕ್ತದೊತ್ತಡ, ಮಧುಮೇಹ ಮುಂತಾದ ಕಾಯಿಲೆಗಳೂ ಅಂಟಿಕೊಳ್ಳಬಹುದು.
ಹೀಗಾಗಿ, ನಿಯಮಿತವಾಗಿ ಸುಸಜ್ಜಿತ ಆಸ್ಪತ್ರೆಗಳಲ್ಲಿ ಅವರಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು. ಕಾಯಿಲೆ ಬಂದವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂಬ ನಿಯಮವಿದೆ. ಮಹಾನಗರ ಪಾಲಿಕೆಯಲ್ಲಿ ಈ ನಿಯಮ ಪಾಲಿಸಿಲ್ಲ ಎನ್ನುವುದು ಅವರ ಗೋಳು.
ಆರೋಗ್ಯ ಪರಿಕರಗಳೂ ವಿಳಂಬ: ವರ್ಷಕ್ಕೆ ಎರಡು ಜತೆ ಬಟ್ಟೆ, ಪುರುಷರಿಗೆ ಷರ್ಟ್– ಪ್ಯಾಂಟ್, ಗೌನು, ಕೈಗವಸು, ಬೂಟು, ಕಾಲುಚೀಲಗಳನ್ನು ನೀಡಬೇಕು. ಇದರೊಂದಿಗೆ ಮಹಿಳೆಯರಿಗೆ ಸೀರೆ ಕೊಡಬೇಕು. ಆದರೆ, ಕೆಲವರಿಗೆ ನೀಡಿದ್ದು ಕೆಲವರಿಗೆ ನೀಡಿಲ್ಲ. ನಗರದ ಹಲವು ಕಡೆ ಕೈಗವಸು (ಹ್ಯಾಂಡ್‌ಗ್ಲೌಸ್) ಕಸ ಎತ್ತುವ ಹಲವು ಕಾರ್ಮಿಕರು ನೋಡಲು ಸಿಗುತ್ತದೆ. ಮತ್ತೆ ಕೆಲವರು ಅಲ್ಲೇ ಬಿದ್ದಿದ್ದ ಪ್ಲಾಸ್ಟಿಕ್ ಚೀಲಗಳನ್ನೇ ಕೈಗೆ ಹಾಕಿಕೊಂಡು ಕಸ ತೆಗೆಯುತ್ತಾರೆ. ಅದೇ ಕೈಯಿಂದ ಅವರು ಊಟ, ಉಪಾಹಾರ, ನೀರು ಸೇವನೆ ಮಾಡುತ್ತಾರೆ. ರೋಗಾಣುಗಳು ನೇರವಾಗಿ ದೇಹ ಸೇರುವ ಸಾಧ್ಯತೆ ಹೆಚ್ಚಾಗಿದೆ.
‘ಎಲ್ಲ ಕಾರ್ಮಿಕರಿಗೂ ಸೌಕರ್ಯಗಳನ್ನು ನೀಡಲಾಗಿದೆ. ಆದರೆ, ಹಲವರು ಹ್ಯಾಂಡ್‌ಗ್ಲೌಸ್‌ಗಳನ್ನು ಮನೆಯಲ್ಲೇ ಬಿಟ್ಟು ಬರುತ್ತಾರೆ. ಉಪಯೋಗಿಸಿಕೊಳ್ಳುವುದಿಲ್ಲ. ಈ ಬಗ್ಗೆ ಸಾಕಷ್ಟು ತಿಳಿವಳಿಕೆ ನೀಡಲಾಗಿದೆ’ ಎಂಬುದು ಪಾಲಿಕೆ ಅಧಿಕಾರಿಗಳ ಸಮಾಜಯಿಷಿ.
ಮಾಸಿಕ ವೇತನವೂ ವಿಳಂಬ
ಕಾಯಂ ಆದ ಪೌರಕಾರ್ಮಿಕರಿಗೆ ಮಾಸಿಕ ₹18245 ವೇತನ ನೀಡಬೇಕು. ಅದನ್ನು ಕೂಡ ನೇರವಾಗಿ ಅವರ ಖಾತೆಗಳಿಗೆ ತಿಂಗಳ ಮೊದಲ ದಿನವೇ ಪಾವತಿಸಬೇಕು ಎಂಬ ನಿಯಮವಿದೆ. ಆದರೆ ಬೆಳಗಾವಿಯಲ್ಲಿ ಒಂದು ವಾರ ತಡವಾಗಿ ವೇತನ ನೀಡಲಾಗುತ್ತಿದೆ ಎಂಬ ಆರೋಪಗಳು ಪೌರಕಾರ್ಮಿಕರಿಂದ ಕೇಳಿಬಂದಿವೆ. ಇದರಿಂದ ಅವರು ಮತ್ತೊಬ್ಬರ ಬಳಿ ಬಡ್ಡಿ ಸಾಲ ಪಡೆದು ಜೀವನ ಸಾಗಿಸುವ ಸಂದರ್ಭಗಳೂ ಬಂದಿವೆ. ಅತ್ಯಂತ ತುಳಿತಕ್ಕೆ ಒಳಗಾದ ಶೋಷಣೆಗೆ ಒಳಗಾದ ಈ ಜನರಿಗೆ ತಿಂಗಳ ಮೊದಲ ದಿನವೇ ವೇತನ ನೀಡಬೇಕು ಎಂಬ ನಿಯಮವನ್ನು ಪಾಲಿಕೆ ಅಧಿಕಾರಿಗಳು ಪಾಲಿಸುತ್ತಿಲ್ಲ.
ಇವರೇನಂತಾರೆ...?
ಪರಿಶಿಷ್ಟ ಜಾತಿಯ ಜನರು ಮಾತ್ರ ಪೌರಕಾರ್ಮಿಕರ ಕೆಲಸ ಮಾಡಲು ಬರುತ್ತಾರೆ. ಇವರೆಲ್ಲ ತುಳಿತಕ್ಕೊಳಗಾದ ಅನಕ್ಷರಸ್ಥ ಜನ ಎಂಬ ಕಾರಣಕ್ಕೆ ಅಧಿಕಾರಿಗಳು ಜನಪ್ರತಿನಿಧಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕಾರ್ಮಿಕರು ಆರೋಗ್ಯವಾಗಿದ್ದರೆ ಮಾತ್ರ ನಗರ ಆರೋಗ್ಯವಾಗಿ ಇರುತ್ತದೆ ಎಂಬುದನ್ನು ಅರಿಯಬೇಕು.
-ವಿಜಯ ಮಧುರ ನೀರಗಟ್ಟಿ ಜಿಲ್ಲಾ ಕಾರ್ಯದರ್ಶಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ
ಈಗಷ್ಟೇ ಎರಡನೇ ಕಂತಿನ ಆರೋಗ್ಯ ಸಲಕರಣೆ ನೀಡಿದ್ದಾರೆ. ಇನ್ನೂ ಕೆಲವರಿಗೆ ನೀಡಬೇಕು. ಕಳೆದ ಒಂದು ವರ್ಷದಿಂದ ಆರೋಗ್ಯ ತಪಾಸಣೆ ಮಾಡಿಸಿಲ್ಲ. ಹಣ ಕೊಟ್ಟು ತಪಾಸಣೆ ಮಾಡಿಸಿಕೊಳ್ಳುವ ಶಕ್ತಿಯೂ ನಮಗೆ ಇಲ್ಲ.
–ಪೌರಕಾರ್ಮಿಕ ಮಹಿಳೆ
ನಾವು ಒಂದೇ ದಿನ ತ್ಯಾಜ್ಯ ಎತ್ತುವುದನ್ನು ಬಿಟ್ಟರೆ ಇಡೀ ನಗರ ಗಬ್ಬೆದ್ದು ನಾರುತ್ತದೆ. ನಗರದ ಜನ ಆರೋಗ್ಯವಾಗಿರಲು ಇಷ್ಟೆಲ್ಲ ಮಾಡುತ್ತೇವೆ. ಆದರೆ ಜನರು ಕನಿಷ್ಠ ಸೌಜನ್ಯ ತೋರಿಸುತ್ತಿಲ್ಲ. ಕಸಗಳನ್ನು ಬೇರ್ಪಡಿಸಿ ನೀಡುತ್ತಿಲ್ಲ. ಈ ಬಗ್ಗೆ ಪಾಲಿಕೆ ಅಧಿಕಾರಿಗಳೇ ಗಮನ ಹರಿಸಬೇಕು.
–ಪೌರಕಾರ್ಮಿಕ ಯುವಕ
ಕಸ ಬೇರ್ಪಡಿಸದ ಜನ
ಹಸಿ ಕಸ– ಒಣ ಕಸವನ್ನು ಮನೆಯಲ್ಲೇ ಬೇರ್ಪಡಿಸಿ ಇಡಬೇಕು. ಒಂದೇ ಕಸದ ಡಬ್ಬದ ಬದಲು ಎರಡು ಡಬ್ಬಗಳನ್ನು ಇಟ್ಟುಕೊಂಡರೆ ಮನೆಯಲ್ಲೇ ಇದನ್ನು ಮಾಡಹುದು. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಸಾಕಷ್ಟು ಜಾಗೃತಿ ಮೂಡಿಸಬೇಕಿದೆ. ಈಗಲೂ ಜನರು ಹಸಿ ಕಸ– ಒಣ ಕಸವನ್ನು ಒಂದೇ ಬಕೆಟ್‌ನಲ್ಲಿ ಹಾಕಿ ಕೊಡುತ್ತಾರೆ. ಇದು ಕೂಡ ಕಾರ್ಮಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ರೀತಿ ತೆಗೆದುಕೊಂಡು ಬಂದ ಕಸವನ್ನು ಮತ್ತೆ ಬೇರ್ಪಡಿಸುವುದು ಅನಿವಾರ್ಯ. ಇದರಿಂದಾಗಿ ಪೌರಕಾರ್ಮಿಕರಿಗೆ ಇಡೀ ದಿನ ಬಿಡುವಿಲ್ಲದ ಕೆಲಸ ಕೊಡುತ್ತಿದ್ದಾರೆ. ಕಸ ಬೇರ್ಪಡಿಸುವ ಸಂಬಂಧ ಇನ್ನಷ್ಟು ಜಾಗೃತಿ ಮೂಡಿಸಬೇಕು. ಬೇರ್ಪಡಿಸದ ಮನೆಯ ಕೆಸ ಎತ್ತದಂತೆ ನಿಯಮ ಮಾಡಬೇಕು ಎಂದುದು ಕಾರ್ಮಿಕರ ಬೇಡಿಕೆ.
8 ಲಕ್ಷ ಜನಸಂಖ್ಯೆಗೆ 1300 ಕಾರ್ಮಿಕರು!
ಬೃಹತ್ತಾಗಿ ಬೆಳೆದ ಬೆಳಗಾವಿ ನಗರದಲ್ಲಿ 8 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇವರೆಲ್ಲರ ಗಲೀಜು ಸ್ವಚ್ಛ ಮಾಡಲು ಇರುವುದು ಕೇವಲ 1300 ಪೌರ ಕಾರ್ಮಿಕರು. ನಿಯಮದ ಪ್ರಕಾರ 700 ಜನರಿಗೆ ಒಬ್ಬ ಪೌರಕಾರ್ಮಿಕ ಇರಬೇಕು. ಆದರೆ ನಗರದಲ್ಲಿ ಇದರ ಸಂಖ್ಯೆ ಅಲ್ಲೋಲ– ಕಲ್ಲೋಲ ಎನ್ನುವಷ್ಟು ಹೆಚ್ಚಾಗಿದೆ. ತುರ್ತಾಗಿ ಹೆಚ್ಚಿನ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು ಎಂಬ ಕೂಗಿಗೆ ಇನ್ನೂ ಬೆಲೆ ಸಿಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.