ADVERTISEMENT

ಬಿಡಾಡಿ ದನಗಳ ‘ಹಾವಳಿ’ ನಿಲ್ಲೋದ್ಯಾವಾಗ?

ಕ್ರಮ ಕೈಗೊಳ್ಳದ ನಗರಪಾಲಿಕೆ; ಸಾರ್ವಜನಿಕರ ಅಸಮಾಧಾನ

ಎಂ.ಮಹೇಶ
Published 11 ನವೆಂಬರ್ 2019, 19:30 IST
Last Updated 11 ನವೆಂಬರ್ 2019, 19:30 IST
ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಬಿಡಾಡಿ ದನಗಳನ್ನು ಓಡಿಸಲು ಸಂಚಾರ ಪೊಲೀಸರು ಶ್ರಮಿಸುವ ದೃಶ್ಯ ಆಗಾಗ ಕಂಡುಬರುತ್ತದೆ
ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಬಿಡಾಡಿ ದನಗಳನ್ನು ಓಡಿಸಲು ಸಂಚಾರ ಪೊಲೀಸರು ಶ್ರಮಿಸುವ ದೃಶ್ಯ ಆಗಾಗ ಕಂಡುಬರುತ್ತದೆ   

ಬೆಳಗಾವಿ: ನಗರದಲ್ಲಿ ಅದರಲ್ಲೂ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಬೀಳುತ್ತಿಲ್ಲ. ಇದರಿಂದಾಗಿ ವಾಹನ ಸವಾರರು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಅವು ಮುಖ್ಯ ರಸ್ತೆಗಳಲ್ಲೇ ರಾಜಾರೋಷವಾಗಿ ಓಡಾಡುತ್ತಿರುತ್ತವೆ. ವಾಹನಗಳಲ್ಲಿ ಸಂಚರಿಸುವ ಹಾಗೂ ಪ್ರಯಾಣಿಸುವವರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿವೆ. ರಸ್ತೆ ಅಪಘಾತಗಳಿಗೂ ಕಾರಣವಾಗುತ್ತಿದೆ. ಇಷ್ಟಾದರೂ ಸಂಬಂಧಿಸಿದ ನಗರಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ನಗರದಲ್ಲಿ ಹಲವು ವರ್ಷಗಳಿಂದಲೂ ಈ ಸಮಸ್ಯೆ ಇದೆ. ಬಿಡಾಡಿ ದನಗಳಿಂದ ನಮಗೆ ಮುಕ್ತಿ ಸಿಗುವುದು ಯಾವಾಗ ಎನ್ನುವುದು ಜನರ ಪ್ರಶ್ನೆಯಾಗಿದೆ. ಅಧಿಕಾರಿಗಳ ‘ತಾತ್ಕಾಲಿಕ ಸ್ಪಂದನೆ’ಯಿಂದ ‘ಫಲ’ ಸಿಕ್ಕಿಲ್ಲ. ಆಗಾಗ ‘ಶಾಸ್ತ್ರಕ್ಕೆಂಬಂತೆ’ ಕೆಲವು ಬಿಡಾಡಿ ದನಗಳನ್ನು ಹಿಡಿದು ಸಾಗಿಸುವ ಕಾರ್ಯಾಚರಣೆಯನ್ನು ನಗರಪಾಲಿಕೆ ಅಧಿಕಾರಿಗಳು ನಡೆಸಿದ ಉದಾಹರಣೆಗಳಿವೆ. ಬಳಿಕ ಅವರು ಸುಮ್ಮನಾಗುತ್ತಾರೆ. ಪರಿಣಾಮ, ರಸ್ತೆಗಳ ಅಲ್ಲಲ್ಲಿ ಬಿಡಾಡಿ ದನ, ಕರುಗಳ ‘ಬಿಡಾರ’ ಕಂಡುಬರುತ್ತಿದೆ. ಈ ದೃಶ್ಯಗಳು ಸ್ಮಾರ್ಟ್‌ ಸಿಟಿಗೆ ‘ಕಪ್ಪು ಚುಕ್ಕೆ’ಯಂತಾಗಿವೆ.

ADVERTISEMENT

ಮರುಕಳಿಸುತ್ತಿದೆ:

2016ರಲ್ಲಿ ಪಾಟೀಲ ಗಲ್ಲಿಯಲ್ಲಿ ವ್ಯಾಪಾರಿಯೊಬ್ಬರ ಮೇಲೆ ಬಿಡಾಡಿ ದನವೊಂದು ದಾಳಿ ನಡೆಸಿ ತೀವ್ರ ಗಾಯಗೊಳಿಸಿತ್ತು. ಬಳಿಕ, ಆ ವ್ಯಕ್ತಿ ಮೃತಪಟ್ಟಿದ್ದರು. ಇದರಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದರಿಂದ ಪಾಲಿಕೆ ಎಚ್ಚೆತ್ತುಕೊಂಡಿತ್ತು. ಕಾರ್ಯಾಚರಣೆ ನಡೆಸಿದ್ದ ಸಿಬ್ಬಂದಿ ಕೆಲವು ಬಿಡಾಡಿ ದನಗಳನ್ನು ಹೊರವಲಯದ ಗೋಶಾಲೆಯೊಂದಕ್ಕೆ ಸಾಗಿಸಿದ್ದರು. ಕ್ರಮೇಣ ಬಿಡಾಡಿ ದನಗಳ ಹಾವಳಿ ಮರುಕಳಿಸಿದೆ.

ಇಲ್ಲಿನ ಹೃದಯಭಾಗವಾದ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಸಮೀಪ, ಬಸವೇಶ್ವರ ವೃತ್ತ, ಬೊಗಾರ್‌ವೇಸ್, ಗಣಪತಿ ಗಲ್ಲಿ, ಸಂಗೊಳ್ಳಿರಾಯಣ್ಣ ವೃತ್ತ, ಕಾಕತಿವೇಸ್, ಕಿರ್ಲೋಸ್ಕರ್ ರಸ್ತೆ, ಖಡೇಬಜಾರ್, ನೆಹರೂ ನಗರ ರಸ್ತೆ, ಬಾಕ್ಸೈಟ್ ರಸ್ತೆ, ಖಾನಾಪುರ ರಸ್ತೆ ಮೊದಲಾದ ಕಡೆಗಳಲ್ಲಿ ರಸ್ತೆಯಲ್ಲೇ ಮಲಗಿಯೋ, ನಿಂತೋ, ಓಡಾಡುತ್ತಲೋ ‘ದರ್ಶನ’ ನೀಡುತ್ತಿರುತ್ತವೆ; ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯನ್ನೂ ಉಂಟು ಮಾಡುತ್ತಿರುತ್ತವೆ.

ಹೆಚ್ಚಿನ ಜನನಿಬಿಡ ಪ್ರದೇಶವಾದ ಚನ್ನಮ್ಮ ವೃತ್ತದಲ್ಲಿ ಆಗಾಗ ಬರುವ ದನಗಳನ್ನು ಓಡಿಸುವುದಕ್ಕಾಗಿ ಸಂಚಾರ ಪೊಲೀಸರು ಸರ್ಕಸ್‌ ಮಾಡುವುದು ಕೂಡ ಕಂಡುಬರುತ್ತಿದೆ! ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೂ ಕೆಲವು ದನಗಳು ಬಿಡಾರ ಹೂಡಿದ್ದವು! ಎಪಿಎಂಸಿ ಬಳಿ ಹಾಗೂ ತರಕಾರಿ ಮಾರುವ ಕಡೆಗಳಲ್ಲಿ ಬಿಡಾಡಿ ದನಗಳು ಕಂಡುಬರುತ್ತಿವೆ.

ಪ್ರಾಣಕ್ಕೂ ಸಂಚಕಾರ:

ಎಲ್ಲೆಂದರಲ್ಲಿ ಓಡಾಡುವ ಈ ದನ–ಕರುಗಳು ಸಿಕ್ಕಿದ್ದನ್ನು ತಿನ್ನುತ್ತವೆ. ಕಸದೊಂದಿಗೆ ಪ್ಖಾಸ್ಟಿಕ್‌ ಕೂಡ ಅವುಗಳ ಹೊಟ್ಟೆ ಸೇರುತ್ತಿದೆ. ಇದು ಅವುಗಳ ಪ್ರಾಣಕ್ಕೂ ಕುತ್ತು ತರುತ್ತಿದೆ. ವಾಹನಗಳು ಡಿಕ್ಕಿಯಾಗುವುದರಿಂದಲೂ ಜೀವಕ್ಕೆ ಕಂಟಕವಿದೆ. ಸವಾರರು ಕೂಡ ಗಾಯಗೊಂಡ ಉದಾಹರಣೆಗಳಿವೆ. ರಸ್ತೆಗಳ ಮಧ್ಯೆ ‘ಕೃತಕ ಸ್ಪೀಡ್‌ ಬ್ರೇಕರ್‌’ಗಳ ರೀತಿಯಲ್ಲಿರುವ ಅವುಗಳನ್ನು ಹಿಡಿದು ಬೇರೆಗೆ ಸಾಗಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಿಸಿರುವ ಜಾನುವಾರುಗಳ ಪುನರ್ವಸತಿ ಕೇಂದ್ರವನ್ನು ನಮ್ಮ ಸುಪರ್ದಿಗೆ ಪಡೆದುಕೊಂಡು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ರ‍್ಯಾಂಪ್‌ ಕೆಲಸವೊಂದು ಬಾಕಿ ಇದೆ. ಅದನ್ನು ಪೂರ್ಣಗೊಳಿಸಿ, ಬಿಡಾಡಿ ದನಗಳನ್ನೆಲ್ಲವನ್ನೂ ಅಲ್ಲಿಗೆ ತೆಗೆದುಕೊಂಡು ಹೋಗಿ ನೋಡಿಕೊಳ್ಳಲಾಗುವುದು. ಇದರಿಂದ ಸಮಸ್ಯೆ ಪರಿಹಾರವಾಗಲಿದೆ. ಪ್ರಸ್ತುತ ದನಗಳ ಮಾಲೀಕರಿಗೆ ಅವರಿಗೆ ದಂಡ ವಿಧಿಸಿ ಎಚ್ಚರಿಕೆ ಕೊಡಲಾಗುತ್ತಿದೆ’ ಎಂದು ನಗರಪಾಲಿಕೆ ಆಯುಕ್ತ ಕೆ.ಎಚ್‌. ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.*

ಸಮೀಕ್ಷೆಯೇ ನಡೆದಿಲ್ಲ!

ಅಂದಾಜಿನ ಪ್ರಕಾರ ನಗರದಲ್ಲಿ 250ಕ್ಕೂ ಹೆಚ್ಚು ಬಿಡಾಡಿ ದನಗಳಿವೆ. ನಗರಪಾಲಿಕೆಯಿಂದ ಸಮೀಕ್ಷೆಯೇ ನಡೆದಿಲ್ಲದಿರುವುದರಿಂದ, ನಿಖರವಾದ ಮಾಹಿತಿ ಅಧಿಕಾರಿಗಳ ಬಳಿ ಇಲ್ಲವಾಗಿದೆ!

‘ಕ್ಯಾಂಪ್‌ ಪ್ರದೇಶದ ಕೆಲವರು ದನಗಳನ್ನು ಹೀಗೆ ಸುತ್ತಾಡಲು ಬಿಟ್ಟು ಬಿಡುತ್ತಾರೆ. ಕೆಲವರು ಹರಕೆಗೆಂದು ಬಿಡುತ್ತಾರೆ. ಆಗಾಗ ಬಿಡಾಡಿ ದನಗಳನ್ನು ಹಿಡಿದು ಸಾಗಿಸುವ ಕಾರ್ಯಾಚರಣೆ ನಡೆಸಿ, ಅವುಗಳ ಮಾಲೀಕರಿದ್ದರೆ ಅವರಿಗೆ ದಂಡ ವಿಧಿಸುತ್ತಿದ್ದೇವೆ. ಆದರೂ ನಿಯಂತ್ರಣಕ್ಕೆ ಬಂದಿಲ್ಲ’ ಎನ್ನುತ್ತಾರೆ ನಗರಪಾಲಿಕೆ ಅಧಿಕಾರಿಗಳು.

***

250 – ಸದ್ಯ ನಗರದಲ್ಲಿರುವ ಬಿಡಾಡಿ ದನ–ಕರುಗಳು

₹ 1 ಲಕ್ಷ – 3 ವರ್ಷಗಳಲ್ಲಿ ಮಾಲೀಕರಿಗೆ ವಿಧಿಸಿದ ದಂಡದ ಮೊತ್ತ

₹ 1– ₹ 2 ಸಾವಿರ –ಮಾಲೀಕರಿಗೆ ವಿಧಿಸಿದ ದಂಡ

8 –ಆಗಾಗ ಬಿಡಾಡಿ ದನಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ರಸ್ತೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.