ADVERTISEMENT

ಆನ್‌ಲೈನ್‌ ತರಗತಿಗೆ ಗುಡ್ಡವೇರುವ ಮಕ್ಕಳು!

ನೆಟ್‌ವರ್ಕ್‌ ಸಿಗದೆ ಸಮಸ್ಯೆ: ಕಾನನದಂಚಿನವರ ಗೋಳು

ಪ್ರಸನ್ನ ಕುಲಕರ್ಣಿ
Published 12 ಜುಲೈ 2021, 19:30 IST
Last Updated 12 ಜುಲೈ 2021, 19:30 IST
ಖಾನಾಪುರ ತಾಲ್ಲೂಕು ಪಾರವಾಡದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಗ್ರಾಮದಿಂದ 4 ಕಿ.ಮೀ. ದೂರದ ಅರಣ್ಯ ಪ್ರದೇಶದಲ್ಲಿ ಆಲ್‌ಲೈನ್ ತರಗತಿಗೆ ಹಾಜರಾದರು
ಖಾನಾಪುರ ತಾಲ್ಲೂಕು ಪಾರವಾಡದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಗ್ರಾಮದಿಂದ 4 ಕಿ.ಮೀ. ದೂರದ ಅರಣ್ಯ ಪ್ರದೇಶದಲ್ಲಿ ಆಲ್‌ಲೈನ್ ತರಗತಿಗೆ ಹಾಜರಾದರು   

ಖಾನಾಪುರ (ಬೆಳಗಾವಿ ಜಿಲ್ಲೆ): ಕೋವಿಡ್ ಕಾರಣದಿಂದಾಗಿ ಶಾಲಾ-ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ನಡೆಸುತ್ತಿಲ್ಲ. ಮಕ್ಕಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಆನ್‌ಲೈನ್ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಆದರೆ, ತಾಲ್ಲೂಕಿನ ಕಾನನದಂಚಿನ ಹತ್ತಾರು ಗ್ರಾಮಗಳಲ್ಲಿ ಅಂತರ್ಜಾಲ ಸಂಪರ್ಕ ಸಿಗದ ಕಾರಣ ವಿದ್ಯಾರ್ಥಿಗಳು ಬಹಳ ತೊಂದರೆ ಅನುಭವಿಸುತ್ತಿದ್ದಾರೆ.

ತಾಲ್ಲೂಕಿಗೆ ಸೇರಿರುವ ಮತ್ತು ಕರ್ನಾಟಕ-ಗೋವಾ ಹಾಗೂ ಮಹಾರಾಷ್ಟ್ರ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಚೋರ್ಲಾ, ಮಾನ, ಸಡಾ, ಹೊಳಂದ, ಬೇಟಣೆ, ಪಾರವಾಡ, ಅಮಗಾಂವ, ಚಿಕಲೆ, ಚಿಗುಳೆ, ಗೋಲ್ಯಾಳಿ, ತಳಾವಡೆ, ಅಮಟೆ, ಬೆಟಗೇರಿ, ಮೊರಬ, ಜಾಮಗಾಂವ, ಗವ್ವಾಳಿ, ಪಾಸ್ತೊಲಿ, ಕೊಂಗಳಾ, ಕೃಷ್ಣಾಪುರ, ಹೋಲ್ಡಾ, ಹೆಮ್ಮಡಗಾ, ಪಾಲಿ, ದೇಗಾಂವ, ತಳೇವಾಡಿ, ಕಾಲಮನಿ, ಡೊಂಗರಗಾಂವ, ಅಬನಾಳಿ, ಕಬನಾಳಿ, ತೇರೆಗಾಳಿ, ಚಾಪೋಲಿ, ಕಾಪೋಲಿ ಸೇರಿದಂತೆ 40 ಗ್ರಾಮಗಳು ಕಣಕುಂಬಿ ಮತ್ತು ಭೀಮಗಡ ಅರಣ್ಯ ಪ್ರದೇಶ ಸುತ್ತುವರಿದಿವೆ. ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದಲ್ಲಿರುವ ಈ ಗ್ರಾಮಗಳಲ್ಲಿ ನೆಟ್‌ವರ್ಕ್‌ ಸಿಗುವುದಿಲ್ಲ.

ಗುಡ್ಡವನ್ನೇರಿ:

ADVERTISEMENT

ದಟ್ಟ ಅರಣ್ಯದ ಮಧ್ಯೆ ಎತ್ತರದ ಪ್ರದೇಶದಲ್ಲಿ ನೆಟ್‌ವರ್ಕ್ ಸಿಗುವ ಕಾರಣ ಕಾನನದಂಚಿನ ಗ್ರಾಮಗಳ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣ ಪಡೆಯಲು ತಮ್ಮೂರಿನಿಂದ ಹಲವು ಕಿ.ಮೀ. ದೂರ ಕ್ರಮಿಸಿ ಗುಡ್ಡಗಳ ಪ್ರದೇಶಕ್ಕೆ ತೆರಳುತ್ತಿದ್ದಾರೆ.

ಜೋರಾಗಿ ಬೀಸುವ ಗಾಳಿ ಮತ್ತು ಮಳೆಯಿಂದ ರಕ್ಷಣೆಗೆ ಕಂಬಳಿಗಳನ್ನು ಬಳಸಿ, ಮರ–ಗಿಡಗಳ ಕೆಳಗೆ ಕುಳಿತು ಪಾಠ ಕೇಳುತ್ತಿದ್ದಾರೆ. ವನ್ಯಜೀವಿಗಳಿಂದ ರಕ್ಷಣೆಗಾಗಿ ಆಯುಧಗಳನ್ನೂ ಒಯ್ಯುವ ಅನಿವಾರ್ಯತೆ ಅವರದು. ವಿದ್ಯಾರ್ಥಿನಿಯರಿಗೆ ಪಾಲಕರು ರಕ್ಷಣೆ ನೀಡುತ್ತಿದ್ದಾರೆ.

ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ, ಭೀಮಗಡ ಮತ್ತು ಕಣಕುಂಬಿ ಅರಣ್ಯ ಪ್ರದೇಶಕ್ಕೆ ಸೇರಿದ ವಿವಿಧ ಗ್ರಾಮಗಳ 120 ವಿದ್ಯಾರ್ಥಿಗಳು ಪ್ರಸಕ್ತ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಅವರು ಕಣಕುಂಬಿ, ಅಮಟೆ, ಜಾಂಬೋಟಿ ಮತ್ತು ನೀಲಾವಡೆ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ಆನ್‌ಲೈನ್ ತರಗತಿ ಕೇಳಲು ನೆಟ್‌ವರ್ಕ್ ಸಮಸ್ಯೆ ಒಂದಡೆಯಾದರೆ ಜುಲೈ 19 ಹಾಗೂ 22ರಂದು ನಡೆಯುವ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಮಳೆಯಿಂದ ಅಡ್ಡಿಯಾಗುವ ಭೀತಿಯೂ ಆವರಿಸಿದೆ.

ವ್ಯವಸ್ಥೆ ಕಲ್ಪಿಸಿ:

‘ಕಾನನದಂಚಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತಾಲ್ಲೂಕು ಕೇಂದ್ರದ ವಿದ್ಯಾರ್ಥಿನಿಲಯಗಳಲ್ಲಿ ವಾಸ್ತವ್ಯಕ್ಕೆ ಈಗಿನಿಂದಲೇ ಕಲ್ಪಿಸಿದರೆ ಅವರು ಓದಿಕೊಳ್ಳಲು ಮತ್ತು ನಿರಾತಂಕವಾಗಿ ಪರೀಕ್ಷೆ ಎದುರಿಸಲು ಅನುಕೂಲ ಆಗುತ್ತದೆ’ ಎನ್ನುತ್ತಾರೆ ನಿವೃತ್ತ ಅರಣ್ಯಾಧಿಕಾರಿ ಮಲ್ಲೇಶಪ್ಪ ಬೆನಕಟ್ಟಿ.

‘ನಮ್ಮೂರಲ್ಲಿ ಮೊದಲಿನಿಂದಲೂ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇದೆ. ಹೀಗಾಗಿ ಆನ್‌ಲೈನ್ ತರಗತಿ ಕೇಳಲು 4 ಕಿ.ಮೀ. ದೂರದ ಅರಣ್ಯ ಪ್ರದೇಶಕ್ಕೆ ಹೋಗುತ್ತಿರುವೆ. ಬೆಳಿಗ್ಗೆ 11ಕ್ಕೆ ಹೋಗಿ ಸಂಜೆ ಮರಳುತ್ತೇನೆ. ಪಾಲಕರೂ ಕೆಲಸ ಬಿಟ್ಟು ನನ್ನೊಡನೆ ಬಂದು ಸಹಕಾರ ನೀಡುತ್ತಿದ್ದಾರೆ. ಒಮ್ಮೆಮ್ಮೆ ಮಳೆ–ಗಾಳಿಯಿಂದ ಊರಲ್ಲಿ ವಿದ್ಯುತ್‌ ಇರುವುದಿಲ್ಲ. ಆಗ ತಂದೆ 6 ಕಿ.ಮೀ. ದೂರದ ಕಣಕುಂಬಿಗೆ ಹೋಗಿ ಮೊಬೈಲ್ ಫೋನ್‌ ಚಾರ್ಜ್‌ ಮಾಡಿ ತಂದುಕೊಡುತ್ತಾರೆ’ ಎಂದು ಚಿಗುಳೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಶ್ರಾವಣಿ ಗಾವಡೆ ತಿಳಿಸಿದರು.

ತೊಂದರೆ ಆಗದಂತೆ ಕ್ರಮ

ಕಾಡಂಚಿನ ಭಾಗದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಷಯ ಶಿಕ್ಷಕರು ನಿತ್ಯವೂ ಗ್ರಾಮಗಳಿಗೆ ತೆರಳಿ ವಿದ್ಯಾರ್ಜನೆ ಮಾಡುವಂತೆ ಆದೇಶಿಸಲಾಗಿದೆ. ಅವರ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.

–ಲಕ್ಷ್ಮಣರಾವ್ ಯಕ್ಕುಂಡಿ, ಬಿಇಒ, ಖಾನಾಪುರ

ಮುಖ್ಯಾಂಶಗಳು

ಹಲವು ಗ್ರಾಮಗಳಲ್ಲಿ ಸಮಸ್ಯೆ

ಪರೀಕ್ಷೆಗೆ ಸಿದ್ಧತೆಗೆ ತೊಂದರೆ

120 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.