ಬೆಳಗಾವಿ: ‘ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಅತಿಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆಗೆ ಯೋಜನೆ ಜಾರಿಗೊಳಿಸಿದೆ. ಇದರಲ್ಲಿ, ಸಂಸ್ಕರಣಾ ಘಟಕವನ್ನು ಉನ್ನತೀಕರಿಸಲು ಒಂದು ಜಿಲ್ಲೆ- ಒಂದು ಉತ್ಪನ್ನ (ಒಡಿಒಪಿ) ಉಪಕ್ರಮದಲ್ಲಿ ಸಹಾಯಧನ ನೀಡಲಾಗುವುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದ್ದಾರೆ.
‘ಜಿಲ್ಲೆಯಲ್ಲಿ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಘಟಕಗಳ ಸ್ಥಾಪನೆ, ಬ್ರ್ಯಾಂಡಿಂಗ್, ಲೇಬಲಿಂಗ್, ಮಾರುಕಟ್ಟೆ ಬೆಂಬಲ ಮತ್ತು ರಫ್ತಿಗೆ ಪ್ರೋತ್ಸಾಹ ನೀಡುವ ಮೂಲಕ ಅಂತಹ ವ್ಯಕ್ತಿ ಅಥವಾ ಸಂಸ್ಥೆಗಳನ್ನು ಉದ್ದಿಮೆದಾರರಾಗಿ ರೂಪಿಸಲು ಯೋಜಿಸಲಾಗಿದೆ. ಹೊಸದಾಗಿ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಘಟಕಗಳನ್ನು ಸ್ಥಾಪಿಸುವುದು, ಮಾರಾಟ ಮತ್ತು ರಫ್ತು ಘಟಕಗಳನ್ನು ಸ್ಥಾಪಿಸುವವರಿಗೆ ಸಹಾಯಧನ ಸಿಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ವೈಯಕ್ತಿಕವಾಗಿ ಹೊಸದಾಗಿ ಘಟಕಗಳನ್ನು ಸ್ಥಾಪಿಸಿದರೆ, ಗರಿಷ್ಠ ₹ 10 ಲಕ್ಷ ಮಿತಿಯೊಂದಿಗೆ ಯೋಜನಾ ವೆಚ್ಚದ ಶೇ 35ರಷ್ಟು ಸಾಲ-ಸಂಪರ್ಕಿತ ಬಂಡವಾಳ ಸಹಾಯಧನ ಪಡೆದುಕೊಳ್ಳಬಹುದಾಗಿದೆ. ಫಲಾನುಭವಿಗಳ ಕೊಡುಗೆ ಯೋಜನಾ ವೆಚ್ಚದ ಕನಿಷ್ಠ ಶೇ 10ರಷ್ಟು ಇರಬೇಕು ಹಾಗೂ ಬಾಕಿ ಬ್ಯಾಂಕ್ ಸಾಲವಾಗಿರಬೇಕು. ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಅವಶ್ಯ ತರಬೇತಿ, ಸಮಗ್ರ ಯೋಜನಾ ವರದಿ ತಯಾರಿಕೆ, ಬ್ಯಾಂಕ್ ಸಾಲ, ಮಾರುಕಟ್ಟೆ ಬೆಂಬಲಕ್ಕಾಗಿ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಎಂ.ಎಂ. ನ್ಯಾಮಗೌಡರ (ಮೊ:(7483503821) ಹಾಗೂ ಶ್ರೀಶೈಲ ಡುಗ್ಗಿ (ಮೊ:9110443919) ಸಂಪರ್ಕಿಸಬಹುದು’ ಎಂದು ತಿಳಿಸಿದ್ದಾರೆ.
‘ಆಸಕ್ತರು, ಸಂಘ-ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳ ಸದಸ್ಯರು, ಒಕ್ಕೂಟಗಳು, ಸಹಕಾರಿ ಸಂಸ್ಥೆಗಳು ಕೂಡ ಪಾಲ್ಗೊಳ್ಳಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ನೋಡಲ್ ಅಧಿಕಾರಿ ಬಸವರಾಜ (ಮೊ:8277934055) ಅವರನ್ನು ಸಂಪರ್ಕಿಸಬಹುದು. ಅರ್ಜಿಗಳನ್ನು pmfme.mofpi.gov.in/pmfme ಜಾಲತಾಣದ ಮೂಲಕ ಸಲ್ಲಿಸಬಹುದು ಸಲ್ಲಿಸಬಹುದು’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.